ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಧಾರ್ಮಿಕ ಸೇವಾ ಮಠ ಪರಂಪರೆಯಲ್ಲಿ ಕೊಡಗಿನ ರಾಜರ ಕೊಡುಗೆ ಅಪಾರವಾಗಿದ್ದು ಕೊಡಗಿನ ರಾಜಾಳ್ವಿಕೆ ಕಾಲದಲ್ಲಿ 108 ಮಠಗಳು ಅಸ್ತಿತ್ವದಲ್ಲಿದ್ದು ಈ ಪೈಕಿ ಕಲ್ಲುಮಠವು ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ ಹೇಳಿದರು.ಅವರು ಕೊಡ್ಲಿಪೇಟೆ ಸಮೀಪದ ಶ್ರೀ ಕಲ್ಲುಮಠದ ಮಠಾಧೀಶ ಶ್ರೀ ಮಹಂತಸ್ವಾಮಿಗಳು ಮಠದ ಪೀಠಾಧ್ಯಕ್ಷರಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸ್ವಾಗತ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಗಳ ಪೀಠೋಹಣದ ಸುವರ್ಣ ಮಹೋತ್ಸವ, ಶ್ರೀ ಬಸವೇಶ್ವರ ಜಯಂತಿ, ಡಾ.ಶಿವಕುಮಾರ ಸ್ವಾಮಿ ಜಯಂತಿ, ಶ್ರೀ ನಂಜುಂಡ ಸ್ವಾಮೀಜಿ ಸಂಸ್ಮರಣೋತ್ಸವ ಹಾಗೂ ಮಠದ ಶ್ರೀ ನಂಜುಂಡೇಶ್ವರ ವಿದ್ಯಾಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.
ಮಠ ಮಾನ್ಯಗಳು ಧಾರ್ಮಿಕ, ಆದ್ಯಾತ್ಮಿಕ, ಸಾಮಾಜಿಕ ಸೇವಾ ಪರಂಪರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಿಂದೆ ಅಸ್ತಿತ್ವದಲ್ಲಿದ್ದ ಮಠಗಳು ಇಂದಿನ ಕಾಲಘಟ್ಟದಲ್ಲಿ ಕಡಿಮೆಯಾಗುತ್ತಿವೆ. ಕೊಡಗಿನ ರಾಜಾಳ್ವಿಕೆ ಕಾಲದಲ್ಲಿ ನೂರಾರು ಮಠ ಪರಂಪರೆ ಅಸ್ತಿತ್ವದಲ್ಲಿದ್ದವು. ಆದರೆ ಕೊಡಗಿನಲ್ಲಿ ಈಗ ಮಠಗಳು ಕಡಿಮೆಯಾದರೂ ಕಲ್ಲುಮಠವು ಇನ್ನು ಸಹ ಮಠ ಪರಂಪರೆಯನ್ನು ಉಳಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಕಲ್ಲುಮಠದ ಶ್ರೀ ಮಹಂತಸ್ವಾಮಿಗಳು ಪೀಠಾಧ್ಯಕ್ಷರಾಗಿ 50 ವರ್ಷಗಳನ್ನು ಪೂರೈಸಿದ್ದಾರೆ ಕಳೆದ 50 ವರ್ಷದಲ್ಲಿ ಅವರು ಮಠವನ್ನು ಸಮಾಜಿಕವಾಗಿ, ಶೈಕ್ಷಣಿಕವಾಗಿ, ಆಧ್ಯಾತ್ಮಿಕವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಇತರೆ ಮಠಗಳು ಮತ್ತು ಮಠಾಧೀಶರಿಗೆ ಅವರು ಮಾದರಿಯಾಗಿದ್ದಾರೆ. ಈ ಮೂಲಕ ಅವರು ಮಠವನ್ನು ಮತ್ತಷ್ಟು ಅಭಿವೃದ್ದಿ ಪಡುವಂತೆ ಹಾರೈಸಿದರು.ಜೀವನದಲ್ಲಿ ಸಾರ್ಥಕತೆಯನ್ನು ಕಾಣಬಹುದು: ಶ್ರೀ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಮನುಷ್ಯ ಜೀವನವನ್ನು ಎಚ್ಚರಿಕೆಯಿಂದ ಸಾಗಿಸಿದರೆ ಜೀವನದಲ್ಲಿ ಸಾರ್ಥಕತೆಯನ್ನು ಕಾಣಬಹುದು ಮಠ, ಶರಣ ಸಂಪರ್ಕದಿಂದ ದುಖ ದುಮ್ಮಾನಗಳು ದೂರವಾಗುತ್ತದೆ. ಇದರ ಸಲುವಾಗಿ ಮಠ ಮಾನ್ಯಗಳಿದ್ದು ಈ ನಿಟ್ಟಿನಲ್ಲಿ ಮಠಕ್ಕೆ ಭಕ್ತರ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ ಎಂದರು. ಆದ್ಯಾತ್ಮಿಕ ಸಾಂಸ್ಕೃತಿಕ ಪರಂಪರೆಯಲ್ಲಿ ಕೊಡಗಿನ ಅರಸರ ಕೊಡುಗೆ ಇತಿಹಾಸ ಪುಟದಲ್ಲಿ ಸೇರಿಕೊಂಡಿದೆ. ಈ ದಿಸೆಯಲ್ಲಿ ಕೊಡಗಿನಲ್ಲಿ ಹಲವಾರು ಮಠಗಳು ಆದ್ಯಾತ್ಮಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿದ್ದು ಈ ಪೈಕಿ ಕಲ್ಲುಮಠವು ಶೈಕ್ಷಣಿಕವಾಗಿ ಅಭಿವೃದ್ಧಿಗೊಳ್ಳುತ್ತಿದ್ದು ಇದಕ್ಕೆ ಮಠಾಧೀಶರಾದ ಶ್ರೀ ಮಹಂತಸ್ವಾಮಿಗಳ 50 ವರ್ಷಗಳ ಪರಿಶ್ರಮವೆ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಲ್ಲುಮಠದ ಮಠಾಧೀಶ ಶ್ರೀ ಮಹಂತಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಬಸವಣ್ಣ ನವರ ಸಿದ್ದಾಂತದಲ್ಲಿ ಮಠ ಮಂದಿರಗಳಿದ್ದರೂ ಇಂದು ಧಾರ್ಮಿಕ ಮತ್ತು ಆದ್ಯಾತ್ಮಿಕ ಹಸಿರು ಕಾಣುವುದಿಲ್ಲ. ಇದರ ಬದಲಿಗೆ ಹಣದ ಹಸಿರು ಹೆಚ್ಚಾಗುತ್ತಿದೆ. ಧಾರ್ಮಿಕತೆಯ ಹಿಂದೆ ಹೋಗಬೇಕಾದವರು ಹಣದ ಹಿಂದೆ ಹೋಗುತ್ತಿದ್ದಾರೆ ಎಂದು ವಿಷಾದಿಸಿದ ಅವರು ಮಠಾಧೀಶರಾಗುವುದು ಹೂವಿನ ಹಾಸಿಗೆ ಅಲ್ಲ ಮುಳ್ಳಿನ ಹಾಸಿಗೆ ಇಂತಹ ಸವಾಲಿನಲ್ಲಿ 50 ವರ್ಷದ ಹಿಂದೆ ಕಲ್ಲುಮಠವನ್ನು ಹಲವಾರು ಸವಾಲಿನ ನಡುವೆ ಅಭಿವೃದ್ಧಿ ಪಡಿಸಿರುವುದನ್ನು ಪ್ರಸ್ತಾವಿಕ ನುಡಿಯಲ್ಲಿ ಸ್ಮರಿಸಿದರು.ಮಠಗಳ ಕೊಡುಗೆ ಅಪಾರ:
ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಮಾತನಾಡಿ, ನಾಡಿನಲ್ಲಿ ಮಠಗಳ ಕೊಡುಗೆ ಅಪಾರ ಆದರೆ ವಿಶ್ವದ್ಯಂತ ಲಿಂಗಾಯತ, ವೀರಶೈವ ಸಮಾಜದ ಬಾಂಧವರು 5 ಕೋಟಿಗಿಂತ ಹೆಚ್ಚು ಇದ್ದಾರೆ. ಆದರೆ ನಮ್ಮ ಸಮುದಾಯಕ್ಕೆ ಸರ್ಕಾರದಿಂದ ರಾಜಕೀಯವಾಗಿ, ಶೈಕಣಿಕವಾಗಿ, ಆರ್ಥಿಕವಾಗಿಯೂ ಸ್ಥಾನಮಾನಗಳು ದೊರೆತ್ತಿಲ್ಲ. ದೇಶದಲ್ಲಿ ಸಿಖ್ಖ್, ಜೈನ ಮುಂತಾದ ಅಲ್ಪಸಂಖ್ಯಾತದವರ ಸಂಖ್ಯೆ ಕಡಿಮೆ ಇದ್ದರೂ ಆ ಸಮುದಾಯ ಅಭಿವೃದ್ಧಿಗೊಳ್ಳುತ್ತಿದೆ. ಇದಕ್ಕೆ ನಮ್ಮ ಸಮುದಾಯದವರಲ್ಲಿ ಸಂಘಟಿತ ಕೊರತೆಯೇ ಕಾರಣವಾಗಿದೆ. ಇನ್ನಾದರೂ ನಮ್ಮ ಸಮುದಾಯ ಒಗ್ಗಟ್ಟಿನಿಂದ ನಮ್ಮ ಸಮಾಜವನ್ನು ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವಸ್ವಾಮಿ, ಕನಕಪುರ ದೇಗುಲಮಠದ ಶ್ರೀಚನ್ನಬಸವ ಸ್ವಾಮೀಜಿ ಜಿಲ್ಲೆ ಮತ್ತು ಹೊರ ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ವಿದ್ಯಾಶಂಕರ್, ಕಾರ್ಯದರ್ಶಿ ಎಸ್.ಮಹೇಶ್ ಜನಪ್ರತಿನಿಧಿಗಳು, ಪ್ರಮುಖರು ಹಾಜರಿದ್ದರು. ಈ ಸಂದರ್ಭ ಸಾಧಕರನ್ನು ಸನ್ಮಾನಿಸಲಾಯಿತು.