ಸಾರಾಂಶ
ಮಡಿಕೇರಿಯ ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ಚಿನ್ನದ ಕಿರೀಟ ಸಮರ್ಪಣೆ ವಾರ್ಷಿಕೋತ್ಸವ ನಡೆಯಿತು.
ಮಡಿಕೇರಿ: ಮಡಿಕೇರಿಯ ಶ್ರೀಕೋಟೆ ಮಹಾಗಣಪತಿ ದೇವಾಲಯದಲ್ಲಿ ಚಿನ್ನದ ಕಿರೀಟ ಸಮರ್ಪಣೆ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಮುಂಜಾನೆ ಶ್ರೀಕೋಟೆ ಮಹಾಗಣಪತಿ ದೇವರಿಗೆ ಅಭಿಷೇಕ, 21 ತೆಂಗಿನಕಾಯಿಗಳ ಗಣ ಹೋಮ, 10 ಸಹಸ್ರ ದುರ್ವಾಂಕುರ, ಒಂದು ಸಹಸ್ರ ಎಕ್ಕ ಸಮರ್ಪಣೆ ಮತ್ತು ಪೂರ್ಣಾಹುತಿ ಜರುಗಿತು. ಮಹಾಮಂಗಳಾರತಿಯ ನಂತರ ಭಕ್ತರಿಗೆ ಅನ್ನ ಸಂತರ್ಪಣೆಯಾಯಿತು.ಮೇ 21 ರಂದು ಸಂಜೆ ಭಜನೆ ಹಾಗೂ ವಿಶೇಷ ಪೂಜೆಯ ಮೂಲಕ ವಾರ್ಷಿಕೋತ್ಸವವನ್ನು ಆರಂಭಿಸಲಾಯಿತು. ಎರಡು ದಿನಗಳ ಪೂಜಾ ಕೈಂಕರ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತರ ಪಾಲ್ಗೊಂಡಿದ್ದರು.
ಶ್ರೀಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿಯ ಅಧ್ಯಕ್ಷ ಬಿ.ವಿ.ಅರವಿಂದ್, ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ ಮತ್ತಿತರ ಪ್ರಮುಖರು ಹಾಜರಿದ್ದರು.