ಶ್ರೀ ಕೃಷ್ಣನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ: ಯಶ್ಪಾಲ್ ಸುವರ್ಣ

| Published : Aug 27 2024, 01:41 AM IST

ಸಾರಾಂಶ

ಉಡುಪಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಭಗವದ್ಗೀತೆಯ ಮೂಲಕ ಶ್ರೀ ಕೃಷ್ಣ ಸಾರಿರುವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ. ಇದನ್ನು ಆಧುನಿಕ ಜೀವನದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಅಳವಡಿಸಿಕೊಂಡಾಗ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.

ಅವರು ಸೋಮವಾರ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿಯ ಶ್ರೀಕೃಷ್ಣ ಮಠವು ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಧಾರ್ಮಿಕತೆಗೆ ಹೆಸರುವಾಸಿಯಾದ ಜಿಲ್ಲೆಯಲ್ಲಿ ಶ್ರೀಕೃಷ್ಣ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಕೃಷ್ಣನ ನಾಡಿನಲ್ಲಿ ಹುಟ್ಟಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಉಪನ್ಯಾಸ ನೀಡಿ, ಕೃಷ್ಣ ಎಂದರೆ ಆಧ್ಯಾತ್ಮಿಕ ಶಕ್ತಿ. ದೇವರು ಎಂದರೆ ನಂಬಿಕೆ. ದೇವರನ್ನು ನಂಬುವುದರಿಂದ ಮಾನಸಿಕವಾಗಿ ಸುಖವಾಗಿರಲು ಸಾಧ್ಯ. ಕನಕದಾಸರ ಭಕ್ತಿಗೆ ಶ್ರೀಕೃಷ್ಣ ದರ್ಶನ ನೀಡಿದ ಸ್ಥಳವು ಕನಕನ ಕಿಂಡಿ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂದು ಮನಗಾಣುವಂತೆ ಮಾಡಿದೆ ಎಂದರು.

ಕಲಾವತಿ ದಯಾನಂದ ಮತ್ತು ಬಳಗದ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ - ಮುದ್ದುರಾದೆ ವೇಷದ ಸ್ಫರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದರ್ಪಣ ಮಹಿಳಾ ಹುಲಿ ತಂಡದವರು ಹುಲಿ ಕುಣಿತ ಪ್ರದರ್ಶಿಸಿದರು.

ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯಾದವ ಗೊಲ್ಲ ಸಮಾಜ ಸಂಘದ ಅಧ್ಯಕ್ಷ ದಯಾನಂದ ಬಿ.ಆರ್., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ ವಂದಿಸಿದರು.