ಸಾರಾಂಶ
ಶ್ರೀ ಕುಮಾರ ಶಿವಯೋಗಿಗಳ ಜಯಂತ್ಯುತ್ಸವ, ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಮೂಡಿಗೆರೆಶ್ರೀ ಕುಮಾರ ಶಿವಯೋಗಿಗಳ ಸಾರಥ್ಯದಲ್ಲಿ ಹಲವಾರು ಶಿಷ್ಯ ವೃಂದದವರಿಗೆ ವಿದ್ಯೆ, ಧ್ಯಾನ, ಸಾಹಿತ್ಯ ಹಾಗೂ ಸಂಸ್ಕಾರ ನೀಡುವ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸಿದವರು ಎಂದು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾ ಸಭಾದ ಕಾರ್ಯನಿರ್ವಾಹಕ ನಿರ್ದೇಶಕ ಚಿದಾನಂದ್ ಎಸ್.ಮಠದ್ ಹೇಳಿದರು.ಮೂಡಿಗೆರೆ ಪಟ್ಟಣದಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಟಾನ ಗೋಣಿಬೀಡು ಇವರ ಸಹಯೋಗದಲ್ಲಿ ನಡೆದ ಲಿಂಗೈಕ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಜಯಂತ್ಯುತ್ಸವ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೀರಶೈವ ಲಿಂಗಾಯತ ಉದ್ಧಾರಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಸಮಾಜದಲ್ಲಿ ಸಂಘಟಿತರಾದರೆ ಮಾತ್ರ ನಮ್ಮ ನೆಲೆಗಳು ಉಳಿದು ಕೊಳ್ಳುವ ಜೊತೆಗೆ ಜನಾಂಗ ಭವಿಷ್ಯದಲ್ಲಿ ಗಟ್ಟಿಯಾಗಿ ಬೇರೂರಲಿದೆ ಎಂದು ಕರೆ ನೀಡಿದರು.ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಟಾನದ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಮಾತನಾಡಿ, ಕುಮಾರೇಶ್ವರರು ತಮಗಾಗಿ ಏನನ್ನು ಮಾಡಿಕೊಳ್ಳದೇ, ಸಮಾಜಕ್ಕಾಗಿ ದುಡಿದವರು. ಹಳ್ಳಿ ಹಳ್ಳಿಗೆ ಸಂಚರಿಸಿ ಜನರಿಗೆ ಶಿಕ್ಷಣ ನೀಡಿದರು, ಸರ್ವ ಜನಾಂಗದ ಸರ್ವತೋಮುಖ ಸುಧಾರಣೆಗೆ ಶ್ರಮಿಸಿದ ಮಹಾ ಪುರುಷ ಹಾನಗಲ್ ಕುಮಾರ ಸ್ವಾಮಿ ಎಂದು ಸ್ಮರಿಸಿದರು.ದೆಹಲಿ ರಾಜ್ಯ ಘಟಕದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಶ್ರೀಕಂಠ ಚೌಕೀಮಠ್ ಉಪನ್ಯಾಸ ನೀಡಿ, ಶರಣರ ವಚನಗಳು, ಸಂಗೀತ ಕ್ಷೇತ್ರ ಉಜ್ವಲವಾಗಿ ಬೆಳೆಯಲು ಹಾನಗಲ್ ಕುಮಾರ ಸ್ವಾಮಿಗಳ ಕೊಡುಗೆ ಅಪಾರ. ಅವರು ವಿವಿಧ ಪಂಗಡಗಳಲ್ಲಿ ಹರಿದು ಹಂಚಿ ಹೋಗಿದ್ದ ಜನರನ್ನೆಲ್ಲ ಮಹಾಸಭಾದ ಮೂಲಕ ಒಂದುಗೂಡಿಸಿ ಒಂದೇ ವೇದಿಕೆಗೆ ತಂದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದರು.ಸಮಾಜದ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ ಕಾಂತರಾಜ್ ಮಾತನಾಡಿ, ಎಲ್ಲರೂ ಒಂದುಗೂಡಿ ತಾಲೂಕಿ ನಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರು. ಪ್ರತಿಯೊಬ್ಬರು ಕೈ ಜೋಡಿಸಿ ಯಶಸ್ವಿಗೆ ಸಹಕರಿಸಿ ಎಂದು ಮನವಿ ಮಾಡಿದರು.ರಾಜ್ಯ ಸಮಿತಿ ನಿರ್ದೇಶಕ ಎಂ.ಆರ್. ಪೂರ್ಣೇಶ್ ಮೂರ್ತಿ ಹಾನಗಲ್ ಕುಮಾರಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಇದೇ ವೇಳೆ ಶ್ರೀಕಂಠ ಚೌಕೀಮಠ ಅವರಿಗೆ "ಪುಷ್ಪಗಿರಿ ಕೌಶಲ್ಯ ರತ್ನ " ಹಾಗೂ ಚಿದಾನಂದ್ ಎಸ್. ಮಠದ್ ಅವರಿಗೆ "ಪುಷ್ಪಗಿರಿ ಜ್ಞಾನ ರತ್ನ " ಹಾಗೂ ತನುಜಾ ರಾಜೇಶ್ ಅವರಿಗೆ "ಪುಷ್ಪಗಿರಿ ಪತ್ರಿಕೋದ್ಯಮ ರತ್ನ " ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಬಿ.ಎಸ್ ಓಂಕಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷೆ ಶಾಲಿನಿ ಅನಿಲ್, ಪ್ರತಿಷ್ಟಾನದ ಮ್ಯಾನೇಜಿಂಗ್ ಟ್ರಸ್ಟಿ ಉಮಾ ಮೋಹನ್, ಜಿಲ್ಲಾ ನಿರ್ದೇಶಕ ಎಂ.ಡಿ.ಇಂದ್ರೇಶ್, ಯುವ ಘಟಕದ ಅಧ್ಯಕ್ಷ ಪ್ರತಾಪ್, ಅಲ್ದೂರ್ ರಾಜೇಶ್, ಮಗ್ಗಲಮಕ್ಕಿ ಗಣೇಶ್‌ಗೌಡ, ವಸಂತ್, ಕಾಂತರಾಜ್ ಉಪಸ್ಥಿತರಿದ್ದರು. 4 ಕೆಸಿಕೆಎಂ 1ಮೂಡಿಗೆರೆ ಪಟ್ಟಣದಲ್ಲಿ ನಡೆದ ಲಿಂಗೈಕ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಜಯಂತ್ಯುತ್ಸವ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಚಿದಾನಂದ್ ಎಸ್.ಮಠದ್ ಉದ್ಘಾಟಿಸಿದರು.