ಸಾರಾಂಶ
ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿರುವ ಶ್ರೀ ಪದ್ಮನಾಭತೀರ್ಥರ ಪೂರ್ವಾರಾಧನೆಯನ್ನು ಮಂತ್ರಾಲಯ ಮಠದಿಂದ ನೆರವೇರಿಸಲಾಯಿತು.
ಸುಪ್ರೀಂ ಕೋರ್ಟ್ ಆದೇಶದಂತೆ ನ. 29ರಂದು ಪೂರ್ವಾರಾಧನೆ ಪೂರ್ಣ ದಿನ ಮತ್ತು ನ. 30ರಂದು ಮಧ್ಯಾರಾಧನೆ ಮಧ್ಯಾಹ್ನ 10 ಗಂಟೆ ವರೆಗೆ ನೆರವೇರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ಹಿನ್ನಲೆಯಲ್ಲಿ ಮಂತ್ರಾಲಯ ಮಠಾಧೀಶ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನೆರವೇರಿಸಿದರು.ಆನೆಗೊಂದಿಯ ರಂಗನಾಥ ದೇವಸ್ಥಾನದಿಂದ ಮಂತ್ರಾಲಯ ಮಠಾಧೀಶ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಮತ್ತು ಪ್ರಥಮ ಬಾರಿಗೆ ಆಗಮಿಸಿದ ಸೋದೆ ವಾದಿರಾಜ ಮಠದ ವಿಶ್ವ ವಲ್ಲಭತೀರ್ಥ ಶ್ರೀಪಾದಂಗಳವರನ್ನು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಆನಂತರ ಉಭಯ ಶ್ರೀಗಳು ಶ್ರೀ ಪದ್ಮನಾಭತೀರ್ಥರ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಕನಕಾಭಿಷೇಕ, ನೈವೇದ್ಯ, ಮಹಾಮಂಗಳಾರತಿ ನೆರವೇರಿಸಿದರು.
ಇದಕ್ಕಿಂತ ಪೂರ್ವದಲ್ಲಿ ಮಂತ್ರಾಲಯ ಮಠಾಧೀಶರು ಶ್ರೀಮನ್ಮೂಲರಾಮದೇವರ ಪೂಜೆಯನ್ನು ನೆರವೇರಿಸಿದರು. ಸೋದೆ ವಾದಿರಾಜ ಮಠಾಧೀಶರು ವರಾಹ, ಹಯಗ್ರೀವ ಮತ್ತು ವೇದವ್ಯಾಸದೇವರ ಪೂಜೆ ನೆರವೇರಿಸಿದರು. ಪೂರ್ವಾರಾಧನೆಗೆ ಆಗಮಿಸಿದ್ದ ಭಕ್ತರಿಗೆ ಫಲ-ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.ಈ ಸಂಧರ್ಭದಲ್ಲಿ ಪಂಡಿತ ವಾದಿರಾಜ ಆಚಾರ, ಪಂ. ದ್ವಾರಕನಾಥ ಆಚಾರ, ಪಂ. ಮದ್ವೇಶ ಆಚಾರ ತಂತ್ರಿ, ಪಂ. ನರಹರಿ ಆಚಾರ, ಬಿ.ಎನ್. ವಿಜೇಂದ್ರ ಆಚಾರ, ಪಂ. ವೆಂಕಟ ನರಸಿಂಹ ಆಚಾರ ರಾಜಪುರೋಹಿತ, ವಿಷ್ಣು ಕಶ್ಯಪ, ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಸಾಮವೇದ ಗುರುರಾಜ ಆಚಾರ, ವಿಜಯರಾವ್ ಡಣಾಪುರ, ವಾಸುದೇವ ನವಲಿ, ವಿಷ್ಣುತೀರ್ಥ ಜೋಷಿ, ಗುರುರಾಜ ದಿಗ್ಗಾವಿ, ಸುಧೀಂದ್ರ ನವಲಿ ಭಾಗವಹಿಸಿದ್ದರು.
ಪದ್ಮನಾಭ ತೀರ್ಥರ ಆರಾಧನೆ ವಿವಾದ, ಅನ್ಯಮಠದೊಂದಿಗೆ ಮಾತುಕತೆಗೆ ಸಿದ್ಧ:ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಪದ್ಮನಾಭ ತೀರ್ಥರ ಆರಾಧನೆ ಹಾಗೂ ಪೂಜೆ ವಿವಾದ ಇದ್ದು, ಇದರ ಇತ್ಯರ್ಥಕ್ಕೆ ಅನ್ಯ ಮಠದೊಂದಿಗೆ ಮಾತುಕತೆಗೆ ನಾವು ಸಿದ್ಧರಾಗಿದ್ದೇವೆ ಎಂದು ಮಂತ್ರಾಲಯ ಮಠಾಧೀಶ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹೇಳಿದರು.ನವವೃಂದಾವನ ಗಡ್ಡೆಯಲ್ಲಿ ಪದ್ಮನಾಭತೀರ್ಥರ ಪೂರ್ವಾರಾಧನೆ ನೆರವೇರಿಸಿದ ಆನಂತರ ಪತ್ರಕರ್ತರೊಂದಿಗೆ ಶ್ರೀಗಳು ಮಾತನಾಡಿದರು. ನವವೃಂದಾವನ ಗಡ್ಡೆಯಲ್ಲಿ ಯತಿಗಳ ಪೂಜೆ ಕುರಿತು ನಾವು 50 ಬಾರಿ ಮಾತುಕತೆಗೆ ಕರೆದಿದ್ದೇವೆ. ಈ ವಿಷಯದಲ್ಲಿ ನಮ್ಮ ಮಠ ಮುಕ್ತವಾಗಿ ಮಾತನಾಡಲು ಸಿದ್ಧರಿದ್ದೇವೆ. ಆದರೆ ಅನ್ಯಮಠದವರು ಗಂಗಾವತಿ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿದ್ದಾರೆ. ಈಗ ನ್ಯಾಯಾಲಯದಲ್ಲಿ ನಮಗೆ ಜಯ ಸಿಕ್ಕಿದೆ ಎಂದರು.ನವವೃಂದಾವನದಲ್ಲಿರುವ ಯತಿಗಳ ಪೂಜೆ ಗೊಂದಲ ಭಕ್ತರಲ್ಲಿದೆ. ಇದನ್ನು ಬಗೆಹರಿಸಬೇಕಾಗಿದೆ ಎಂದರು.
ರಾಜ್ಯದಲ್ಲಿಯ ವಕ್ಫ್ ವಿಷಯಕ್ಕೆ ಸಂಬಂಧಿಸಿದಂತೆ ಮಠದಿಂದ ಸುದೀರ್ಘ ಸ್ಪಷ್ಟನೆ ನೀಡಲಾಗುವುದು ಎಂದರು. ಬಾಂಗ್ಲಾ ಇಸ್ಕಾನ್ ಸ್ವಾಮೀಜಿ ಬಂಧಿಸಿರುವ ವಿಷಯ ಕುರಿತು, ಇದರ ಬಗ್ಗೆ ತಮಗೆ ಸರಿಯಾದ ಮಾಹಿತಿ ಇಲ್ಲ ಎಂದರು.