ಕನ್ನಡಪ್ರಭ ವಾರ್ತೆ ನಾಗಮಂಗಲ
ನಾಗಮಂಗಲ ಮತ್ತು ಬೆಳ್ಳೂರು ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶುಕ್ರವಾರ ಶ್ರೀರಾಮನವಮಿ ಹಬ್ಬವನ್ನು ಶ್ರದ್ಧಾಭಕ್ತಿಯ ಜೊತೆಗೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಆಟೋ ಚಾಲಕರು ಮತ್ತು ರಸ್ತೆ ಬದಿಯ ವ್ಯಾಪಾರಿಗಳು ಆಯೋಜಿಸಿದ್ದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಶ್ರೀರಾಮನ ಬೃಹತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಮೊಸರನ್ನ, ಬಾತ್, ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.
ಈ ಬಾರಿ ಉತ್ತಮ ಮಳೆಯಾಗಿ ಎಲ್ಲಾ ಕೆರೆ ಕಟ್ಟೆಗಳು ಭರ್ತಿಯಾಗಲಿ, ದೇಶಕ್ಕೆ ಅನ್ನ ನೀಡುವ ರೈತರು ಸಮೃದ್ಧವಾಗಿ ಬೆಳೆ ಬೆಳೆಯುವಂತಾಗಲಿ, ನಾಡಿನ ಪ್ರತಿಯೊಬ್ಬರೂ ಕೂಡ ಶಾಂತಿ ನೆಮ್ಮದಿಯೊಂದಿಗೆ ಆರೋಗ್ಯವಂತ ಜೀವನ ನಡೆಸುವಂತಾಗಲೆಂದು ಶ್ರೀರಾಮ ಸೀತಾಮಾತೆ ಲಕ್ಷ್ಮಣ ಆಂಜನೇಯ ದೇವರಲ್ಲಿ ರಾಮಭಕ್ತರು ಪ್ರಾರ್ಥಿಸಿದರು.ಪಟ್ಟಣದ ಮಂಡ್ಯ ವೃತ್ತದ ಶ್ರೀಆಂಜನೇಯಸ್ವಾಮಿ ದೇವಸ್ಥಾನ, ಪಡುವಲಪಟ್ಟಣ ರಸ್ತೆಯ ಬೆಟ್ಟದ ಆಂಜನೇಯಸ್ವಾಮಿ ದೇಗುಲ, ಹುಲ್ಲೆಸಳೆ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ತಾಲೂಕಿನ ಇತಿಹಾಸ ಪ್ರಸಿದ್ಧ ಕಂಬದಹಳ್ಳಿ ಶ್ರೀ ಆಂಜನೇಯಸ್ವಾಮಿ, ಹದ್ದಿನಕಲ್ಲು ಶ್ರೀ ಹನುಮಂತರಾಯಸ್ವಾಮಿ, ದೇವಲಾಪುರ, ಬಿಂಡಿಗನವಿಲೆ, ಸುಖಧರೆ, ಬೋಗಾದಿ, ಚಿಣ್ಯ, ಹೊಣಕೆರೆ ಸೇರಿದಂತೆ ಎಲ್ಲಾ ಶ್ರೀರಾಮಾಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಪಟ್ಟಣದ ಟಿ.ಬಿ.ಬಡಾವಣೆಯ ಶ್ರೀಬಡಗೂಡಮ್ಮದೇವಿ ದೇವಸ್ಥಾನದ ಮುಂಭಾಗದಲ್ಲಿನ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಶ್ರೀರಾಮನ ಬೃಹತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಶ್ರೀರಾಮನಾಮ ಸ್ಮರಣೆ ಮಾಡಲಾಯಿತು. ಶ್ರೀರಾಮನವಮಿ ಆಚರಿಸಿದ ಎಲ್ಲಾ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಾಲ್ಗೊಂಡಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿಯನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಹಲವು ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಶ್ರೀರಾಮನ ಉತ್ಸವ, ಮೆರವಣಿಗೆ ಕಾರ್ಯಕ್ರಮಗಳು ಜರುಗಿದವು.