ಸಾರಾಂಶ
ಉಡುಪಿ ಮಲ್ಪೆಯ ಬಡಾನಿಡಿಯೂರು ರಸ್ತೆಯ ತೊಟ್ಟಂ ಬಳಿ ಪರಿಶಿಷ್ಟ ಜಾತಿಯ ಬಡ ಕುಟುಂಬಕ್ಕೆ ಶ್ರೀ ಮಠದ ಸಹಯೋಗ ಮತ್ತು ಶಾಸಕ ಯಶ್ಪಾಲ್ ಸುವರ್ಣರ ನೇತೃತ್ವದಲ್ಲಿ ನಿರ್ಮಿಸಲಾಗುವ ಮನೆಗೆ ಶಿಲಾನ್ಯಾಸ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀ ರಾಮನವಮಿ ಪರ್ವದಿನವಾದ ಬುಧವಾರ ಶ್ರೀ ರಾಮ ದೇವರೇ ಪಟ್ಟದ ದೇವರಾಗಿರುವ ಅಯೋಧ್ಯಾ ರಾಮಮಂದಿರ ಆಂದೋಲನ ಮತ್ತು ಮಂದಿರ ನಿರ್ಮಾಣ ಕಾರ್ಯದಲ್ಲಿ ಉಲ್ಲೇಖನೀಯ ಪಾತ್ರ ಹೊಂದಿರುವ ಉಡುಪಿಯ ಶ್ರೀ ಪೇಜಾವರ ಮಠದ ವತಿಯಿಂದ ಶ್ರೀರಾಮನ ಪ್ರೀತ್ಯರ್ಥವಾಗಿ ಒಂದು ಬಡ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ಮತ್ತು ಒಂದು ಬಡ ಕುಟುಂಬಕ್ಕೆ ಕಟ್ಟಿಸಿದ ಮನೆ ಹಸ್ತಾಂತರ ಮಾಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.ರಾಮಮಂದಿರ ನಿರ್ಮಾಣದ ನಂತರ ರಾಮರಾಜ್ಯ ನಿರ್ಮಾಣವಾಗಬೇಕೆನ್ನುವ ಸಂಕಲ್ಪದೊಂದಿಗೆ ಸಮಾಜಕ್ಕೂ ಸತ್ಪ್ರೇರಣೆ ನೀಡುತ್ತಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಉಡುಪಿ ಮಲ್ಪೆಯ ಬಡಾನಿಡಿಯೂರು ರಸ್ತೆಯ ತೊಟ್ಟಂ ಬಳಿ ಪರಿಶಿಷ್ಟ ಜಾತಿಯ ಬಡ ಕುಟುಂಬಕ್ಕೆ ಶ್ರೀ ಮಠದ ಸಹಯೋಗ ಮತ್ತು ಶಾಸಕ ಯಶ್ಪಾಲ್ ಸುವರ್ಣರ ನೇತೃತ್ವದಲ್ಲಿ ನಿರ್ಮಿಸಲಾಗುವ ಮನೆಗೆ ಶಿಲಾನ್ಯಾಸ ನೆರವೇರಿಸಿದರು.
ಶ್ರೀಧರ ಭಟ್ ಬೆಳ್ಕಳೆ ಅವರು ಪೂಜಾ ವಿಧಿಗಳನ್ನು ನೆರವೇರಿಸಿದರು. ಯಶ್ಪಾಲ್ ಸುವರ್ಣ, ಜಿ. ವಾಸುದೇವ ಭಟ್ ಪೆರಂಪಳ್ಳಿ, ಜಿ.ಪಂ. ಮಾಜಿ ಅಧ್ಯಕ್ಷ ದಿನಕರಬಾಬು, ಮಂಜುನಾಥ ಸಾಲ್ಯಾನ್ ಕೊಳ, ಪಾಂಡುರಂಗ ಮಲ್ಪೆ, ವಿಜಯ ಪಡುಕೆರೆ, ಶೇಖರ ಶೆಟ್ಟಿ ಹಿರಿಯಡ್ಕ, ಎಂಜಿನಿಯರ್ ಅರ್ಜುನ್ ಶೆಟ್ಟಿ ಮೊದಲಾದವರಿದ್ದರು. ಸಾಮಾಜಿಕ ಮುಖಂಡ ನಾರಾಯಣ್ ಅವರು ಮನೆ ನಿರ್ಮಾಣಕ್ಕೆ 25,000 ರು. ಚೆಕ್ಕನ್ನು ಶ್ರೀಗಳ ಮೂಲಕ ಹಸ್ತಾಂತರಿಸಿದರು.* ಪೆರ್ಣಂಕಿಲದಲ್ಲಿ ಮನೆ ಹಸ್ತಾಂತರ
ಪೇಜಾವರ ಮಠದ ಅಧೀನದಲ್ಲಿರುವ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಇತ್ತೀಚೆಗಷ್ಟೆ ಸಂಪನ್ನಗೊಂಡಿದೆ. ಜೀರ್ಣೋದ್ದಾರ ಸಮಿತಿಯು ಶ್ರೀಗಳ ಅನುಗ್ರಹಪೂರ್ವಕ ಸಹಕಾರದೊಂದಿಗೆ ಗ್ರಾಮದ ಅಣ್ಣು ನಾಯಕ್ ಪೆರ್ಣಂಕಿಲ ಎಂಬವರ ಬಡ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿಕೊಟ್ಟಿದ್ದು, ಅದರ ಹಸ್ತಾಂತರವನ್ನು ಶ್ರೀಗಳು ರಾಮನವಮಿಯ ಪರ್ವದಿನವೇ ನಡೆಸಿ ಮನೆಗೆ ಶ್ರೀರಾಮ ಎಂಬ ಹೆಸರನ್ನೂ ನಾಮಕರಣಗೊಳಿಸಿದರು.ಸಮಿತಿಯ ಅಧ್ಯಕ್ಷ ವಿದ್ವಾನ್ ಹರಿದಾಸ ಭಟ್ ಪೆರ್ಣಂಕಿಲ, ಕಾರ್ಯದರ್ಶಿ ಶ್ರೀಶ ನಾಯಕ್, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣಮೂರ್ತಿ ಭಟ್ ಮೊದಲಾದವರಿದ್ದರು.