ಕರೀಘಟ್ಟದಲ್ಲಿ ಸಂಭ್ರಮದ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ

| Published : Feb 17 2025, 12:30 AM IST

ಕರೀಘಟ್ಟದಲ್ಲಿ ಸಂಭ್ರಮದ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕ ತಿರುಪತಿ ಎಂದೇ ಹೆಸರಾಗಿರುವ ದೇವಾಲಯದಲ್ಲಿ ನಡೆದ ರಥೋತ್ಸವಕ್ಕೆ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು. ಶನಿವಾರ ಬೆಳಗಿನ ಜಾವ ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸ್ ಅವರಿಂದ ದೇವರಿಗೆ ಅಭಿಷೇಕ ಸೇರಿದಂತೆ ಇತರೆ ವಿಶೇಷ ಪೂಜೆಯೊಂದಿಗೆ ಸೇವೆಗಳನ್ನು ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕರೀಘಟ್ಟ ಬೆಟ್ಟದಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ (ಶ್ರೀನಿವಾಸ) ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಈ ಭಾಗದ ಚಿಕ್ಕ ತಿರುಪತಿ ಎಂದೇ ಹೆಸರಾಗಿರುವ ದೇವಾಲಯದಲ್ಲಿ ನಡೆದ ರಥೋತ್ಸವಕ್ಕೆ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು. ಶನಿವಾರ ಬೆಳಗಿನ ಜಾವ ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸ್ ಅವರಿಂದ ದೇವರಿಗೆ ಅಭಿಷೇಕ ಸೇರಿದಂತೆ ಇತರೆ ವಿಶೇಷ ಪೂಜೆಯೊಂದಿಗೆ ಸೇವೆಗಳನ್ನು ಸಲ್ಲಿಸಲಾಯಿತು.

ದೇವಾಲಯದ ಮುಂಭಾಗದಲ್ಲಿ ವಿಶೇಷ ಹೂವುಗಳಿಂದ ಅಲಂಕರಿಸಿದ್ದ ರಥದ ಮೇಲೆ ಶ್ರೀ ವೆಂಕಟರಮಣಸ್ವಾಮಿ ಹಾಗೂ ಪದ್ಮಾವತಿಯ ಉತ್ಸವ ಮೂರ್ತಿಯನ್ನು ಕೂರಿಸಿ, ಮಧ್ಯಾಹ್ನ 2 ಗಂಟೆಗೆ ಸಲ್ಲುವ ಶುಭಲಗ್ನದಲ್ಲಿ ಪೂಜಿಸಿ ಮಹಾ ಮಂಗಳಾರತಿಯೊಂದಿಗೆ ಗೋವಿಂದ ಗೋವಿಂದ ಎಂದು ಭಕ್ತರ ಘೋಷಣೆಗಳೊಂದಿಗೆ ರಥವನ್ನು ಎಳೆಯಲಾಯಿತು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಉಮಾ, ಹೆಚ್ಚುವರಿ ತಹಸೀಲ್ದಾರ್ ಚೈತ್ರ ಸೇರಿ ಅಧಿಕಾರಿಗಳ ಹಾಗೂ ಇತರ ಮುಖಂಡರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.ಭಕ್ತರು ದೇವಾಲಯದ ಸುತ್ತಲೂ ಒಂದು ಸುತ್ತು ರಥವನ್ನು ಎಳೆದು ಮೆರವಣಿಗೆ ನಡೆಸಿದರು, ರಥಕ್ಕೆ ಹಣ್ಣು, ಧವನ ಎಸೆದು ಪ್ರಾರ್ಥನೆ ಸಲ್ಲಿಸಿದರು. ಇನ್ನೊಂದೆಡೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವಾಲಯದಲ್ಲಿನ ವೆಂಕಟರಮಣನಿಗೆ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.

ಕರೀಘಟ್ಟದ ಬೆಟ್ಟದ ತಪಲಿನಿಂದ ಮೆಟ್ಟಿಲಿನವರೆಗೂ ದಾನಿಗಳು ಭಕ್ತರಿಗೆ ಕುಡಿಯಲು ನೀರು, ಮಜ್ಜಿಗೆ, ಪಾನಕ ಸೇರಿದಂತೆ ಪುಳಿಯೊಗರೆ, ಮೊಸರನ್ನ ಪ್ರಸಾದ ರೂಪದಲ್ಲಿ ನೀಡಿ ಭಕ್ತಿ ಭಾವ ಮೆರೆಯುತ್ತಿದ್ದರು. ಸ್ಥಳೀಯ ಭಕ್ತರಲ್ಲದೆ ಮೈಸೂರು, ಬೆಂಗಳೂರು, ತಮಿಳುನಾಡು, ಆಂಧ್ರ ಪ್ರದೇಶದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪೊಲೀಸರು ವಾಹನಗಳನ್ನು ಒಂದೆಡೆ ಪಾರ್ಕಿಂಗ್ ಮಾಡಿ ನಿಲ್ಲಿಸಿ ಭಕ್ತರು ಸರಾಗವಾಗಿ ಬೆಟ್ಟಕ್ಕೆ ಹೋಗಲು ಬ್ಯಾರಿಕೇಡ್ ಅಳವಡಿಸಿ ಭದ್ರತೆಯಲ್ಲಿದ್ದರು. ಮುಜರಾಯಿ ಅಧಿಕಾರಿ ವರ್ಗದವರು ರಥೋತ್ಸವ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.