ಶ್ರೀಮಂಗಲ: ಕಲಿತ ಕಾಲೇಜಿನಲ್ಲಿ ಮತ್ತೆ ಮಕ್ಕಳಾದ ಹಳೆ ವಿದ್ಯಾರ್ಥಿಗಳು!

| Published : Jan 10 2025, 12:46 AM IST

ಸಾರಾಂಶ

ಶ್ರೀಮಂಗಲ ಜೂನಿಯರ್ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಅಧಿಕೃತ ಉದ್ಘಾಟನೆ, ಆಡಳಿತ ಮಂಡಳಿ ರಚನೆ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಅಲ್ಲಿ ಹಳೆ ಬೇರು, ಹೊಸ ಚಿಗುರು ಒಂದಾಗಿ ಹಳೆಯ ನೆನಪುಗಳ ಸರಮಾಲೆಯ ಪುಟಗಳು ತೆರೆದುಕೊಂಡಿದ್ದವು... ತಮ್ಮ ವಯಸ್ಸನ್ನೂ ಲೆಕ್ಕಿಸದೆ 90 ವರ್ಷದ ವಯಸ್ಕರಾದಿಯಾಗಿ ಎಲ್ಲರೂ ಕಾಲೇಜಿನ ಪರಿಸರವನ್ನು ವೀಕ್ಷಿಸುತ್ತಾ, ತಮ್ಮ ಸಹಪಾಠಿಗಳೊಂದಿಗೆ ಹರಟುತ್ತಾ ಆ ರಸಘಳಿಗೆಯನ್ನು ಆಸ್ವಾದಿಸಿದರು...

ಈ ದೃಶ್ಯಗಳು ಕಂಡದ್ದು, ಶ್ರೀಮಂಗಲ ಜೂನಿಯರ್ ಕಾಲೇಜಿನಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಂಘದ ಅಧಿಕೃತ ಉದ್ಘಾಟನೆ, ಆಡಳಿತ ಮಂಡಳಿ ರಚನೆ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ.

ಎಲ್ಲರೂ ಈ ಕಾಲೇಜಿನಲ್ಲಿ ತಮ್ಮ ತಮ್ಮ ವಿದ್ಯಾರ್ಥಿ ಜೀವನದ ಸಂದರ್ಭ ನಡೆದ ಘಟನೆಗಳನ್ನು ನೆನೆಸಿಕೊಂಡು ಹರಟುತ್ತಾ ಲೋಕವನ್ನೇ ಮರೆತಿದ್ದರು. ತಮಗೆ ವಿದ್ಯಾಬ್ಯಾಸ ನೀಡಿ ಬದುಕು ಕಟ್ಟಿಕೊಟ್ಟ ಈ ಶಾಲೆಯ ಮತ್ತಷ್ಟು ಅಭಿವೃದ್ಧಿಗೆ ಪಣತೊಡುವುದಾಗಿ ನಿರ್ಧಾರ ಕೈಗೊಂಡರು.

ಇದರ ಪ್ರಥಮ ಹೆಜ್ಜೆಯಾಗಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧಿಕೃತ ಉದ್ಘಾಟನೆಯನ್ನು 1952ನೆ ಇಸವಿಯಲ್ಲಿ ಕಾಲೇಜಿನ ಆರಂಭದ ಶೈಕ್ಷಣಿಕ ವರ್ಷದ ವಿದ್ಯಾರ್ಥಿಯಾಗಿದ್ದ 90ರ ಹರೆಯ ಮಾಣೀರ ಕಾಶಿ ಅಚ್ಚಯ್ಯ ಸೇರಿದಂತೆ ಹಿರಿಯರಾದ ಬೊಟ್ಟಂಗಡ ಮಾಚಯ್ಯ, ಡಾ. ಕಾಳಿಮಾಡ ಶಿವಪ್ಪ, ಮುಲ್ಲೇಂಗಡ ಮುತ್ತಣ್ಣ, ಕಳ್ಳಂಗಡ ರಾಮು ಪೂವಯ್ಯ ಮತ್ತಿತರ ಹಿರಿಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.

ನಂತರ ಮಾತನಾಡಿದ ಹಳೆ ವಿದ್ಯಾರ್ಥಿಗಳು, ತಾವು ವಿದ್ಯಾರ್ಥಿಗಳಾಗಿದ್ದಾಗ ಕಡಿಮೆ ಕೊಠಡಿಗಳಲ್ಲಿ ಪ್ರಾರಂಭವಾದ ಕಾಲೇಜು ಇಂದು ಬೃಹದಾಕಾರವಾಗಿ ಬೆಳೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದ್ವಿತೀಯ ಪಿ.ಯು.ಸಿ.ಯಲ್ಲಿ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ 9ನೆ ರ್‍ಯಾಂಕ್‌ನಲ್ಲಿ ತೇರ್ಗಡೆ ಹೊಂದಿ ಉತ್ತಮ ಸ್ಥಾನವನ್ನು ಅಲಂಕರಿಸಿರುವುದಲ್ಲದೆ ಈ ಶಾಲೆಯಲ್ಲಿ ಓದಿ ಹಲವರು ಡಾಕ್ಟರ್, ಎಂಜಿನಿಯರ್, ಲಾಯರ್, ಉದ್ಯಮಿಗಳು, ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಹಲವರು ಅತ್ಯುನ್ನತ ಹುದ್ದೆ ಅಲಂಕರಿಸಿದ್ದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಅದು ಈ ಶ್ರೀಮಂಗಲ ಜೂನಿಯರ್ ಕಾಲೇಜಿನ ಶಕ್ತಿ ಎಂದು ಸ್ಮರಿಸಿದರು.

ಹಳೆ ವಿದ್ಯಾರ್ಥಿ ಸಂಘಕ್ಕೆ ನಿರ್ದೇಶಕರಾಗಿ ಮದ್ರೀರ ವಿಷ್ಣು, ಮಚ್ಚಮಾಡ ಸುಬ್ರಮಣಿ, ಪೆಮ್ಮಂಡ ನರೇಂದ್ರ, ಕೋಟ್ರಂಗಡ ಮನು ಸೋಮಯ್ಯ, ಚೋಡುಮಾಡ ಸೂರತ್ ಸುಬ್ಬಯ್ಯ, ಮಚ್ಚಮಾಡ ಟಿ. ಕಾರ್ಯಪ್ಪ, ಮಚ್ಚಮಾಡ ವಿಜಯ, ಕೆ.ಪಿ. ಬಾಬು, ಗುಡಿಯಂಗಡ ಎಂ.ಪೂವಪ್ಪ, ತೀತೀರ ಗಣಪತಿ, ಮುಕ್ಕಾಟಿರ ಭೀಮಯ್ಯ, ಚಂದ್ರ, ಅಜ್ಜಿಕುಟ್ಟಿರ ಅಪ್ಪಣ್ಣ, ಅಪ್ಪಂಡೆರಂಡ ಸೀತ, ಕೋಳೇರ ಪೊನ್ನಣ್ಣ, ಉಪ್ಪಾರ ರಮೇಶ, ಬಲ್ಲಿಮಡ ಪೂಣಚ್ಚ, ಮಲ್ಲಪನ್ನೆರ ವಿನು ಚಿಣ್ಣಪ್ಪ, ಕಟ್ಟೇರ ಕುಶಾಲಪ್ಪ, ಕುಂಞಂಗಡ ರಮೇಶ, ಮಾಣೀರ ಉಮೇಶ, ಚೆಟ್ಟಂಗಡ ರಂಜು ಕರುಂಬಯ್ಯ, ಕುಂಞಂಗಡ ಕೃಷ್ಣ, ದೇಕಮಾಡ ನವೀನ್, ಚಟ್ಟಂಡ ಚರ್ಮಣ, ಮುಲ್ಲೇಂಗಡ ಕಾರ್ಯಪ್ಪ, ಚಂಗುಲಂಡ ಅಯ್ಯಪ್ಪ, ನೂರೇರ ಜೀವನ್ ಸೇರಿದಂತೆ 30 ಜನರನ್ನು ಆಯ್ಕೆ ಮಾಡಲಾಯಿತು.

ಡಾ.ಕಾಳಿಮಾಡ ಶಿವಪ್ಪ ಉದ್ಘಾಟನಾ ಗೀತೆ ಹಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬೋಡಂಗಡ ಅಯ್ಯಪ್ಪ ಸ್ವಾಗತಿಸಿದರು. ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಕಾಳಿಮಾಡ ಬೆಳ್ಯಪ್ಪ ವಂದಿಸಿದರು. ಹಾಲಿ ನಿರ್ದೇಶಕರಾದ ಚೆಟ್ಟಂಗಡ ಕಂಬ ಕಾರ್ಯಪ್ಪ, ಅಣ್ಣಳಮಾಡ ನರೇಂದ್ರ, ಅಯ್ಯಮಡ ಉದಯ, ಅಜ್ಜಮಡ ಸಾವಿತ್ರಿ, ತಡಿಯಂಗಡ ಜಯರಾಜ್, ಬಾಚಂಗಡ ಕಾರ್ಯಪ್ಪ, ಪ್ರಾಂಶುಪಾಲರಾದ ಮುಲ್ಲೇಂಗಡ ಸೋಮಯ್ಯ ಮತ್ತಿತರರಿದ್ದರು.