ಶೃಂಗೇರಿ: 700 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ: ಶಾಸಕ ಟಿ.ಡಿ.ರಾಜೇಗೌಡ

| Published : Jul 06 2025, 01:48 AM IST

ಶೃಂಗೇರಿ: 700 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ: ಶಾಸಕ ಟಿ.ಡಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ , ಶೃಂಗೇರಿ ಕ್ಷೇತ್ರದ 3 ತಾಲೂಕುಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ₹700 ಕೋಟಿ ರು. ಕ್ರಿಯಾ ಯೋಜನೆ ರೂಪಿಸಲಾಗುತ್ತಿದ್ದು ಶೀಘ್ರದಲ್ಲೇ ಹಣ ಮಂಜೂರಾಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

- ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶೃಂಗೇರಿ ಕ್ಷೇತ್ರದ 3 ತಾಲೂಕುಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ₹700 ಕೋಟಿ ರು. ಕ್ರಿಯಾ ಯೋಜನೆ ರೂಪಿಸಲಾಗುತ್ತಿದ್ದು ಶೀಘ್ರದಲ್ಲೇ ಹಣ ಮಂಜೂರಾಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಶನಿವಾರ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಂಗಾ ಹಾಗೂ ಭದ್ರಾ ನದಿಗಳ ನೀರನ್ನು ಉಪಯೋಗಿಸಿ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಗೂ ಇದನ್ನು ಸೇರಿಸಲಾಗುವುದು. ಇದರಿಂದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸಿಗಲಿದೆ. ಯಾವುದೇ ಯೋಜನೆ ಯಶಸ್ಸಿಗೆ ಎಲ್ಲಾ ಅಧಿಕಾರಿ, ಜನಪ್ರತಿನಿಧಿಗಳು, ಗ್ರಾಮಸ್ಥರು ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಜಲಜೀವನ್ ಯೋಜನೆಯಡಿ ಕಾಮಗಾರಿಯನ್ನು ಪಿಡಿಒಗಳು ತೃಪ್ತಿಯಾಗಿದ್ದರೆ ಮಾತ್ರ ಹಸ್ತಾಂತರ ಮಾಡಿಕೊಳ್ಳಿ.ಕಳಪೆ ಕಾಮಗಾರಿಯಾಗಿದ್ದರೆ ಹಸ್ತಾಂತರ ಮಾಡಿಕೊಳ್ಳಬೇಡಿ ಎಂದು ಸೂಚಿಸಿದರು.

ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಕುಡಿಯುವ ನೀರಿನ ಯೋಜನೆಗೆ ಶಾಸಕರು ಹಣ ಮಂಜೂರು ಮಾಡಿದ್ದಾರೆ. ಆದರೆ, ಕಾಮಗಾರಿ ವಿಳಂಬವಾಗಿರುವುದರಿಂದ ವಿರೋಧ ಪಕ್ಷಗಳು ಅಪ ಪ್ರಚಾರ ಮಾಡುತ್ತಿದ್ದಾರೆ. ಕುಡಿಯುವ ನೀರಿನ ಕಾಮಗಾರಿ ವಿಳಂಬಕ್ಕೆ ತಾಂತ್ರಿಕ ಸಮಸ್ಯೆ ಏನಾಗಿದೆ ಎಂಬ ಬಗ್ಗೆ ಅಧಿಕಾರಿಗಳು, ಎಂಜಿನಿಯರ್ ವಿವರಣೆ ನೀಡಬೇಕು. ಎಷ್ಟು ಬೋರ್‌ವೆಲ್ ಕೊರೆಯಲಾಗಿದೆ. ಕುಡಿಯುವ ನೀರಿನ ಪೈಪ್ ಲೈನ್ ಎಷ್ಟು ಆಗಿದೆ ? ಎಲ್ಲಾ ವಿವರಣೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮುಂದಿನ 2 ತಿಂಗಳಲ್ಲಿ ಕುಡಿಯುವ ನೀರಿನ ಬಗ್ಗೆ ಸಭೆ ಕರೆಯುತ್ತೇನೆ. ಆಗ ಸಭೆಗೆ ಎಲ್ಲಾ ಮಾಹಿತಿ ನೀಡಬೇಕು. ಕಳಪೆ ಕಾಮಗಾರಿಯಾಗಿದ್ದರೆ ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್ ಗೆ ಸೇರಿಸಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ರಸ್ತೆ ಗುಂಡಿ ಮುಚ್ಚಲು ನಾನು ಸಾಕಷ್ಟು ಅನುದಾನ ನೀಡಿದ್ದೆ. ಆದರೆ, ಮಳೆಗಾಲ ಬರುತ್ತಿದ್ದಂತೆ ಮತ್ತೆ ಗುಂಡಿಗಳಾಗಿದೆ. ನಿಮ್ಮ ಇಲಾಖೆ ಬೇಜವಬ್ದಾರಿಯಿಂದ ನಾನು ಜನರಿಂದ ಕೆಟ್ಟ ಮಾತು ಕೇಳಬೇಕಾಗಿದೆ. ಮಳೆಗಾಲ ಶುರುವಾಗುವ ಮುನ್ನ ಉತ್ತಮ ಗುಣಮಟ್ಟದಲ್ಲಿ ಗುಂಡಿ ಮುಚ್ಚಬೇಕಾಗಿತ್ತು ಎಂದರು.

ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ,ಶಾಸಕ ಟಿ.ಡಿ.ರಾಜೇಗೌಡ ರಸ್ತೆ ಗುಂಡಿ ಮುಚ್ಚಲು 70 ಕೋಟಿ ರುಪಾಯಿ ಮಂಜೂರು ಮಾಡಿಸಿಕೊಂಡು ಬಂದಿದ್ದರು. ಆದರೆ, ಗುಂಡಿ ಮುಚ್ಚುವ ಕಾಮಗಾರಿ ಸರಿಯಾಗಿಲ್ಲದೆ ಮತ್ತೆ ಗುಂಡಿ ಬಿದ್ದಿದೆ. ಮಡಬೂರು ಸಮೀಪದಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕಾರು ಅಪಘಾತವಾಗಿ ಪಾದಚಾರಿ ಯೊಬ್ಬರು ಮೃತಪಟ್ಟಿದ್ದಾರೆ. ಜೀವಕ್ಕೆ ಬೆಲೆ ಇಲ್ಲವೇ ? ಅಧಿಕಾರಿಗಳು, ಗುತ್ತಿಗೆದಾರರಿಂದ ಶಾಸಕರಿಗೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಲೋಕೋಪಯೋಗಿ ಎಂಜಿನಿಯರ್ ರನ್ನು ತರಾಟೆಗೆ ತೆಗೆದುಕೊಂಡರು.

ಅರಣ್ಯದಲ್ಲಿ ವಿದ್ಯುತ್ ಲೈನ್ ಬಂದಿದ್ದರೆ ಅದನ್ನು ರಸ್ತೆ ಪಕ್ಕಕ್ಕೆ ವರ್ಗಾಯಿಸಬೇಕು. ಇದರಿಂದ ವಿದ್ಯುತ್‌ ತಂತಿ ಮೇಲೆ ಮರದ ಗೆಲ್ಲುಗಳು ಬೀಳುವುದು ಕಡಿಮೆಯಾಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಮೆಸ್ಕಾಂ ಇಲಾಖೆ ಎಂಜಿನಿಯರ್ ಗೌತಮ್ ಗೆ ಸೂಚಿಸಿದರು.

ಬೀದಿಯಲ್ಲಿ ದನಗಳ ಕಾಟ: ರಸ್ತೆಯಲ್ಲಿ ಬೀಡಾಡಿ ದನದ ಹಾವಳಿ ಜಾಸ್ತಿಯಾಗಿದ್ದು ಇದರ ಹತೋಟಿಗೆ ಏನು ಕ್ರಮ ಕೈ ಗೊಂಡಿದ್ದೀರಿ ಎಂದು ಪಶು ಇಲಾಖೆ ವೈದ್ಯಾಧಿಕಾರಿಗಳಿಗೆ ಶಾಸಕ ಟಿ.ಡಿರಾಜೇಗೌಡ ಪ್ರಶ್ನಿಸಿದರು. ಬೀಡಾಡಿ ದನಗಳಿಗೆ ರೇಡಿಯಂ ಬೆಲ್ಟ್ ಹಾಕಬೇಕು. ಪ್ರಾರಂಭದಲ್ಲಿ ದನಗಳ ಮಾಲೀಕರಿಗೆ ನೊಟೀಸ್ ನೀಡಿ 1 ವಾರ ಕಾಲಾವಕಾಶ ನೀಡಬೇಕು. ದನಗಳನ್ನು ಮನೆಯಲ್ಲಿ ಕಟ್ಟದಿದ್ದರೆ ಅದನ್ನು ಹಿಡಿದು ಗೋಶಾಲೆ ಒಪ್ಪಿಗೆ ಎಂದು ಸೂಚಿಸಿದರು.

ಸಭೆ ಅಧ್ಯಕ್ಷತೆಯನ್ನು ಶಾಸಕ ಟಿ.ಡಿ.ರಾಜೇಗೌಡ ವಹಿಸಿದ್ದರು. ವೇದಿಕೆಯಲ್ಲಿ ಶಿವಮೊಗ್ಗ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ತಾಲೂಕು ಪಂಚಾಯಿತಿ ಇ.ಓ. ನವೀನ್ ಕುಮಾರ್, ತಹಶೀಲ್ದಾರ್ ತನುಜ ಟಿ.ಸವದತ್ತಿ, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೊಪ್ಪ ಡಿ.ಎಫ್.ಓ ಶಿವಶಂಕರ್, ನೋಡಲ್ ಅಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.

ಸಭೆಯಲ್ಲಿ ಕೆಡಿಪಿ ಸದಸ್ಯರಾದ ಕೆ.ವಿ.ಸಾಜು, ಪ್ರವೀಣ್,ಶಶಿಕುಮಾರ್, ಮಾಳೂರು ದಿಣ್ಣೆ ರಮೇಶ್, ಅಂಜುಂ,ಸಮೀರ ನಹೀಂ, ಕೊಪ್ಪ ಎಪಿಎಂಸಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಪಿಸಿಎಆರ್.ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಸುಂದರೇಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ. ನಾರಾಯಣ ಸ್ವಾಮಿ, ಟಿಎಪಿಸಿಎಂಸಿ ಅಧ್ಯಕ್ಷ ಎಸ್‌.ಗೋಪಾಲ್,ಜಿಲ್ಲಾ ಸಹಕಾರಿ ಬ್ಯಾಂಕ್‌ ನಿರ್ದೇಶಕ ಸಂದೀಪ್ ಕುಮಾರ್, ತಾ.ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಚಂದ್ರಮ್ಮ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಓಗಳು ಭಾಗವಹಿಸಿದ್ದರು.