ಶೃಂಗೇರಿ ತಗ್ಗಿದ ಪ್ರವಾಹದಬ್ಬರ: ಮಳೆಗಿಲ್ಲ ಬಿಡುವು

| Published : Aug 01 2024, 12:18 AM IST

ಶೃಂಗೇರಿ ತಗ್ಗಿದ ಪ್ರವಾಹದಬ್ಬರ: ಮಳೆಗಿಲ್ಲ ಬಿಡುವು
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ ತಾಲೂಕಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಮಳೆ ಅಬ್ಬರ ಕೊಂಚ ಕಡಿಮೆಯಾಗಿದ್ದು ತುಂಗಾ ನದಿಯಲ್ಲಿನ ಪ್ರವಾಹ ಇಳಿಮುಖವಾಗತೊಡಗಿದೆ. ಮಂಗಳವಾರ ರಾತ್ರಿ ಭಾರೀ ಮಳೆಯಿಂದಾಗಿ ತುಂಗಾ ನದಿಯಲ್ಲಿ ಮತ್ತೆ ಭಾರೀ ಪ್ರವಾಹ ಉಂಟಾಗಿ ಮಂಗಳೂರು ಶೃಂಗೇರಿ ಸೇರಿದಂತೆ ಪ್ರಮುಖ ರಸ್ತೆ ಸಂಚಾರಗಳು ಬುಧವಾರ ಬೆಳಗಿನವರೆಗೂ ಬಂದ್‌ ಆಗಿತ್ತು.

ಹೊಳೆಹದ್ದು ನೆಮ್ಮಾರು ತೂಗು ಸೇತುವೆ ಜಲಾವೃತ । ಮಲ್ನಾಡ್ ಗ್ರಾಮದಲ್ಲಿ ಗುಡ್ಡಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಮಳೆ ಅಬ್ಬರ ಕೊಂಚ ಕಡಿಮೆಯಾಗಿದ್ದು ತುಂಗಾ ನದಿಯಲ್ಲಿನ ಪ್ರವಾಹ ಇಳಿಮುಖವಾಗತೊಡಗಿದೆ. ಮಂಗಳವಾರ ರಾತ್ರಿ ಭಾರೀ ಮಳೆಯಿಂದಾಗಿ ತುಂಗಾ ನದಿಯಲ್ಲಿ ಮತ್ತೆ ಭಾರೀ ಪ್ರವಾಹ ಉಂಟಾಗಿ ಮಂಗಳೂರು ಶೃಂಗೇರಿ ಸೇರಿದಂತೆ ಪ್ರಮುಖ ರಸ್ತೆ ಸಂಚಾರಗಳು ಬುಧವಾರ ಬೆಳಗಿನವರೆಗೂ ಬಂದ್‌ ಆಗಿತ್ತು.

ಶೃಂಗೇರಿ ವಿದ್ಯಾರಣ್ಯಪುರ ಸಂಪರ್ಕ ರಸ್ತೆ ಮೇಲೆ ಪ್ರವಾಹದ ನೀರು ಹರಿಯುತ್ತಿತ್ತು. ಹೊಳೆಹದ್ದು ನೆಮ್ಮಾರು ತೂಗು ಸೇತುವೆ ಅರ್ಧ ಮುಳುಗಿ ಸಂಪರ್ಕ ಕಡಿತಗೊಂಡಿತ್ತು. ಗಾಂಧಿ ಮೈದಾನದಲ್ಲಿ, ವಾಹನ ನಿಲುಗಡೆ ಪ್ರದೇಶದಲ್ಲಿ ಮದ್ಯಾಹ್ನದ ವರೆಗೂ ತುಂಗಾ ನದಿ ಪ್ರವಾಹ ತುಂಬಿ ಜಲಾವೃತಗೊಂಡಿದ್ದು. ಸಂಜೆ ವೇಳೆ ಕೊಂಚ ಇಳಿಮುಖವಾಗಿತ್ತು. ಪ್ರವಾಹ ಪೀಡಿತ ಕುರುಬಗೇರಿ ಬಡಾವಣೆ, ರಸ್ತೆ, ಶ್ರೀ ಮಠದ ಬೋಜನಾ ಶಾಲೆಯಿಂದ ಪ್ರವಾಹದ ನೀರು ಇಳಿಮುಖವಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿತ್ತು.

ಮಾಣಿಬೈಲು ಕಿಗ್ಗಾ ಸಿರಿಮನೆ ಸಂಪರ್ಕ ರಸ್ತೆಯಿಂದ ತುಂಗಾ ನದಿ ಪ್ರವಾಹ ಕಡಿಮೆಯಾಗಿ ಸಂಚಾರಕ್ಕೆ ಮುಕ್ತವಾಯಿತು. ಶ್ರೀಮಠದ ನರಸಿಂಹ ವನಕ್ಕೆ ಹೋಗುವ ದಾರಿಯಿಂದ ಪ್ರವಾಹ ಇಳಿದಿತ್ತು.

ಭಾರತೀ ಬೀದಿ ಕೆವಿಆರ್ ಸಂಪರ್ಕ ಕಲ್ಪಿಸುವ ಬೈಪಾಸ್‌ ರಸ್ತೆ ಮೇಲೆ ತುಂಗಾ ನದಿ ಪ್ರವಾಹ ಸಂಜೆಯವರೆಗೂ ಹರಿಯುತ್ತಿದ್ದು ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಶ್ರೀಮಠದ ತುಂಗಾ ನದಿ ತೀರದ ಕಪ್ಪೆಶಂಕರ ದೇವಾಲಯ, ಸಂಧ್ಯಾ ವಂದನ ಮಂಟಪ ಇನ್ನೂ ತುಂಗಾನದಿ ಪ್ರವಾಹದಲ್ಲಿ ಮುಳುಗಡೆಯಾಗಿತ್ತು. ಆದರೆ ಪ್ರವಾಹ ಇಳಿಮುಖವಾಗಿದ್ದರೂ ತಗ್ಗು ಪ್ರದೇಶಗಳು, ಹೊಲಗದ್ದೆಗಳು ಇನ್ನೂ ಜಲಾವೃತವಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು.

ಇನ್ನೂ ಭಾರೀ ಮಳೆಯಿಂದ ಭೂಕುಸಿತ, ಗುಡ್ಡಕುಸಿತ, ರಸ್ತೆ ಕುಸಿತಗಳು ಮುಂದುವರೆದಿದ್ದು ಮನೆ, ರಸ್ತೆಗಳು ಹಾನಿ ಗೊಳಗಾಗುತ್ತಿವೆ. ನೆಮ್ಮಾರು ಪಂಚಾಯಿತಿ ಮಲ್ನಾಡ್ ಗ್ರಾಮದಲ್ಲಿ ಗುಡ್ಡಕುಸಿದು ರಸ್ತೆ ಮೇಲೆ ಬೀಳುತ್ತಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಶೃಂಗೇರಿ ಕೊಪ್ಪ ಸಂಪರ್ಕ ಆನೆಗಂದ ಬಳಿ ಗುಡ್ಡಕುಸಿಯುತ್ತಿದೆ. ಪಟ್ಟಣದ ತಾಲೂಕು ಕಚೇರಿ ಬಳಿ ಮೆಹಬೂಬ ಜಹೂರ್ ಷಾ ಕಟ್ಟಡ ಸಮೀಪ ಗುಡ್ಡಕುಸಿಯುತ್ತಿದೆ. ಮಂಗಳೂರು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ತ್ಯಾವಣ, ದುರ್ಗಾ ದೇವಸ್ಥಾನ, ನೆಮ್ಮಾರ್ ಎಸ್ಟೇಟ್, ತನಿಕೋಡು ಮತ್ತಿತರ ಪ್ರದೇಶಗಳಲ್ಲಿ ಗುಡ್ಡಕುಸಿತ, ಭೂಕುಸಿತ ಮುಂದುವರಿದಿದೆ.

ಬುಧವಾರ ಬೆಳಿಗ್ಗೆಯಿಂದ ಮಳೆ ಕೊಂಚ ಬಿಡುವು ನೀಡಿದ್ದರಿಂದ ಜನಜೀವನ ಸಹಜ ಸ್ಥಿತಿಯಲ್ಲಿದ್ದು, ವಾಹನ ಸಂಚಾರ ಎಂದಿನಂತೆ ಪುನರ್‌ ಆರಂಭಗೊಂಡಿತ್ತು. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ, ಮೊಬೈಲ್ ಸಿಗ್ನಲ್‌ ಗಳು ಇಲ್ಲದ ಕಾರಣ ಜನರ ಪರದಾಟ ಮುಂದುವರಿದಿತ್ತು. ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಭಾರೀ ಮಳೆ ಗಾಳಿ ರಭಸಕ್ಕೆ ಅಡಕೆ ಟೋಟಗಳಲ್ಲಿ ಬಹುತೇಕ ಅಡಕೆ ಮರಗಳು ಧರೆಗುರುಳಿ ಬಿದ್ದು ಹಾನಿಯುಂಟಾಗಿದೆ. ಗಾಳಿಗೆ ವಿದ್ಯುತ್‌ ಕಂಬಗಳು, ಲೈನ್‌ ಗಳು ತುಂಡಾಗಿ ಬಿದ್ದು ಹಳ್ಳಿಗಳಲ್ಲಿ ವಿದ್ಯುತ್‌ ಸಂಪರ್ಕ ಇನ್ನೂ ಕಡಿತಗೊಂಡಿದೆ.

31 ಶ್ರೀ ಚಿತ್ರ 5-

ಶೃಂಗೇರಿ ಮಳೆ ಮುಂದುವರಿದಿದ್ದು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿ.

31 ಶ್ರೀ ಚಿತ್ರ 6-

ಶೃಂಗೇರಿ ಮಳೆಯಿಂದಾಗಿ ತುಂಗಾನದಿ ತುಂಬಿ ಹರಿಯುತ್ತಿತ್ತು ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಬೈಪಾಸ್‌ ರಸ್ತೆ ಬುಧವಾರವೂ ಜಲಾವೃತಗೊಂಡಿತ್ತು.