ಶ್ರೀನಿವಾಸಪ್ರಸಾದ್ ತತ್ವಜ್ಞಾನಿ ರಾಜಕಾರಣಿ: ಶಂಕರ್ ದೇವನೂರು

| Published : May 14 2024, 01:04 AM IST

ಶ್ರೀನಿವಾಸಪ್ರಸಾದ್ ತತ್ವಜ್ಞಾನಿ ರಾಜಕಾರಣಿ: ಶಂಕರ್ ದೇವನೂರು
Share this Article
  • FB
  • TW
  • Linkdin
  • Email

ಸಾರಾಂಶ

ಈ ಜಗತ್ತಿಗೆ ನಾವು ಇರುವಿಕೆಯನ್ನು ಅರಿಯಲು ಬಂದಿದ್ದೇವೆ, ಮಾನವ ಸಂಬಂಧ ಪಟ್ಟಿ ಮಾಡದೇ ಸಮಾಜವನ್ನು ಉದ್ಧರಿಸಲು ಸಾಧ್ಯವಿಲ್ಲ. ಆಳ್ವಿಕೆಯಲ್ಲಿ ನಮ್ಮ ಬಾಳ್ವಿಕೆ ಇರಬೇಕು ಎಂಬುದನ್ನು ತೋರಿಸಿಕೊಟ್ಟ ಶ್ರೀನಿವಾಸಪ್ರಸಾದ್ ಇಂದಿನ ಕಾಲಘಟ್ಟದ ಯುವಕರಿಗೆ ಆದರ್ಶ ಪ್ರಾಯರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಪ್ರಸ್ತುತ ದಿನಮಾನದಲ್ಲಿ ರಾಜಕಾರಣಿಗಳಲ್ಲಿ ತತ್ವಜ್ಞಾನದ ಕೊರತೆಯಿಂದಾಗಿ ಗೊಂದಲದ ಆಗರದ ಅವ್ಯವಸ್ಥೆಯಲ್ಲಿ ಮುಳುಗಿದ್ದು, ಇದಕ್ಕೆ ಅಪವಾದ ಎಂಬಂತೆ ಸಂಸದ ವಿ. ಶ್ರೀನಿವಾಸಪ್ರಸಾದ್ ತತ್ವಜ್ಞಾನಯುಳ್ಳ ರಾಜಕಾರಣಿಯಾಗಿದ್ದ ಪರಿಣಾಮವಾಗಿ ಜನಮಾನಸದಲ್ಲಿ ಚಿರಸ್ಥಾಯಿ ಆಗಿದ್ದಾರೆ ಎಂದು ಆಧ್ಯಾತ್ಮ ಚಿಂತಕ ಶಂಕರ್ ದೇವನೂರು ಬಣ್ಣಿಸಿದರು.

ತಾಲೂಕಿನ ಸಿಂಧುವಳ್ಳಿ ಗೇಟ್ ಬಳಿಯ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ನಂಜನಗೂಡು ನಾಗರೀಕ ವೇದಿಕೆ ವತಿಯಿಂದ ಆಯೋಜಿಸಿದ್ದ ವಿ. ಶ್ರೀನಿವಾಸಪ್ರಸಾದ್ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರನ್ನು ಒಳಗೊಳ್ಳುವ ಮಾತೃ ಸ್ವರೂಪದ ಭಾವ ವಿ. ಶ್ರೀನಿವಾಸಪ್ರಸಾದ್ ಅವರಲ್ಲಿತ್ತು. ಮಹಾಬೆಳಕಿನ ಪ್ರತೀಕವಾಗಿ ಸಮಾಜದ ನಡುವೆ ಕೊಂಡಿಯಾಗಿದ್ದರು. ಮಠಗಳು ಸಾಮಾಜಿಕ ನ್ಯಾಯದ ಕೇಂದ್ರಗಳಾಗಬೇಕು ಎಂದು ಅವರು ಪ್ರತಿಪಾದಿಸಿದ್ದರು. ಅವರು ಮಾತಿನಿಂದ ಮಂಟಪ ಕಟ್ಟಲಿಲ್ಲ. ಬದಲಾಗಿ ತಮ್ಮ ಬದುಕಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಂಡು ಅದರಂತೆ ನಡೆ ನುಡಿಯಲ್ಲಿ ತೋರಿಸಿಕೊಟ್ಟು ಹೋಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಹೇಗೆ ಸಾಗಬೇಕು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಈ ಜಗತ್ತಿಗೆ ನಾವು ಇರುವಿಕೆಯನ್ನು ಅರಿಯಲು ಬಂದಿದ್ದೇವೆ, ಮಾನವ ಸಂಬಂಧ ಪಟ್ಟಿ ಮಾಡದೇ ಸಮಾಜವನ್ನು ಉದ್ಧರಿಸಲು ಸಾಧ್ಯವಿಲ್ಲ. ಆಳ್ವಿಕೆಯಲ್ಲಿ ನಮ್ಮ ಬಾಳ್ವಿಕೆ ಇರಬೇಕು ಎಂಬುದನ್ನು ತೋರಿಸಿಕೊಟ್ಟ ಶ್ರೀನಿವಾಸಪ್ರಸಾದ್ ಇಂದಿನ ಕಾಲಘಟ್ಟದ ಯುವಕರಿಗೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಅವರು ಹೇಳಿದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನಮ್ಮ ತಂದೆ ಧ್ರುವನಾರಾಯಣ ಹಾಗೂ ಶ್ರೀನಿವಾಸಪ್ರಸಾದ್ ನಡುವೆ ಉತ್ತಮ ಬಾಂಧವ್ಯವಿತ್ತು. ತಾವು ಇರುವರೆಗೂ ಅತಿ ಹೆಚ್ಚು ಗೌರವ, ಪ್ರೀತಿಯನ್ನು ಹೊಂದಿದ್ದರು. ನಾನು ವಕೀಲನಾಗಲು ಶ್ರೀನಿವಾಸಪ್ರಸಾದ್ ಅವರ ಸಹಾಯವೂ ಇದೆ. ಶ್ರೀನಿವಾಸಪ್ರಸಾದ್ ಶಾಸಕರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಿಧಾನ ಸೌಧದಿಂದ ಅವರಿಗೆ ನೀಡಲಾಗಿದ್ದ ರೂಮಿನಲ್ಲಿ ಎರಡು ವಾರಗಳ ಕಾಲ ವ್ಯಾಸಂಗ ಮಾಡಿ ಎಲ್ಎಲ್ಬಿಗೆ ಪ್ರವೇಶ ಪರೀಕ್ಷೆ ಬರೆಯಲು ನೆರವಾಗಿದ್ದರು ಎಂದು ಸ್ಮರಿಸಿದರು.ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಮಾತನಾಡಿ, ಶ್ರೀನಿವಾಸಪ್ರಸಾದ್ ಅವರಿಗೆ ಬಡವರ ಪರವಾಗಿ ತುಂಬಾ ಕಾಳಜಿ ಹೊಂದಿದ್ದನ್ನು ನಾನು ತುಂಬಾ ಹತ್ತಿರದಿಂದ ಬಲ್ಲೆ. ನಂಜನಗೂಡಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಹಾಗಾಗಿ ಅವರ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಪ್ರವಾಸಿ ಮಂದಿರದ ಮುಂದೆ ನಿರ್ಮಾಣ ಮಾಡಿರುವ ಬಟಾನಿಕಲ್ ಗಾರ್ಡನ್ ಗೆ ಅವರ ಹೆಸರನ್ನು ನಾಮಕರಣ ಮಾಡಬೇಕು. ಜತೆಗೆ ರೈಲ್ವೆ ಮೇಲ್ಸೇತುವೆಗೆ ಶ್ರೀನಿವಾಸಪ್ರಸಾದ್ ಹೆಸರಿಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡೋಣ ಎಂದರು.

ಮಾಜಿ ಶಾಸಕ ಕಳಲೆ ಎನ್. ಕೇಶವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರವೆ ಮಠದ ಸರ್ಪಭೂಷಣ ಸ್ವಾಮೀಜಿ, ಕಸುವಿನಹಳ್ಳಿ ಮಠದ ಶಿವಕುಮಾರ ಸ್ವಾಮೀಜಿ, ವಿ. ಶ್ರೀನಿವಾಸಪ್ರಸಾದ್ ಸಹೋದರ ವಿ. ರಾಮಸ್ವಾಮಿ, ಜಿಪಂ ಮಾಜಿ ಅಧ್ಯಕ್ಷೆ, ಮಾಜಿ ಸದಸ್ಯರಾದ ಸಿ. ಚಿಕ್ಕರಂಗ ನಾಯಕ, ಕೆ. ಮಾರುತಿ, ಮಂಗಳಾ ಸೋಮಶೇಖರ್, ಎಂ. ಲತಾಸಿದ್ದಶೆಟ್ಟಿ, ಮುಖಂಡರಾದ ಯು.ಎನ್. ಪದ್ಮನಾಭರಾವ್, ಕುಂಬ್ರಹಳ್ಳಿ ಸುಬ್ಬಣ್ಣ, ನಂದಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ತಾಪಂ ಮಾಜಿ ಅಧ್ಯಕ್ಷ ತಮ್ಮಣ್ಣೇಗೌಡ, ಬಿ.ಎಂ. ನಾಗೇಶ್ ರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ದೊರೆಸ್ವಾಮಿ, ಪಿ. ಮಹೇಶ್, ದೊರೆಸ್ವಾಮಿ ನಾಯಕ ಮೊದಲಾದವರು ಇದ್ದರು.