ಕಲೆಮನೆಯಲ್ಲಿ ಗಮನ ಸೆಳೆದ ಶ್ರೀರಾಮನವಮಿ ನೃತ್ಯೋತ್ಸವ

| Published : May 03 2024, 01:02 AM IST

ಸಾರಾಂಶ

ಬೆಂಗಳೂರಿನ ಡಾ. ಲಕ್ಷ್ಮಿ ರೇಖಾ ಅವರು ತಮ್ಮ ಶಿಷ್ಯರೊಂದಿಗೆ ಆಗಮಿಸಿ ಇಂದಿನ ಕಾರ್ಯಕ್ರಮದಲ್ಲಿ ವಿಶಿಷ್ಟವಾಗಿ ರಚಿತಗೊಂಡ ಅಷ್ಟಲಕ್ಷ್ಮಿಯ ಕುರಿತ ಅಪರೂಪದ ಹಲವು ಕಥಾ ಪ್ರಸಂಗಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವಿನೂತನವಾದ ಕಲ್ಪನೆಯಲ್ಲಿ ಸುಂದರವಾಗಿ ಜತಿ ಸ್ವರ ಅಭಿನಯ ಸಂಚಾರಿಗಳೊಂದಿಗೆ ಸೃಷ್ಟಿಸಿ ಮನೋಜ್ಞವಾಗಿ ಪ್ರಸ್ತುತಪಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ರಾಮ ನಾಮವೆಂಬ ಭಕ್ತಿಯ ಪಾಯಸವನ್ನು ನೃತ್ಯದ ಮೂಲಕ ಭಕ್ತರಿಗೆ ಉಣ ಬಡಿಸಿ ಭಕ್ತಿಯ ಪರಾಕಾಷ್ಠತೆಯನ್ನು ತಲುಪಿದ 37ನೇ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವದ ರಾಮನವಮಿ ನೃತ್ಯೋತ್ಸವ.

- ಹೌದು ಇದು ಇತ್ತೀಚೆಗೆ ನಡೆದಿದ್ದು ಮಂಚೇಗೌಡನ ಕೊಪ್ಪಲಿನ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ಕಲೆಮನೆ ಸಭಾಂಗಣದಲ್ಲಿ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಆರು ನೃತ್ಯ ಗುರುಗಳು ಮತ್ತು ಅವರ ಶಿಷ್ಯರ ತಂಡದೊಂದಿಗೆ ಮತ್ತು ಹೆಸರಾಂತ ನೃತ್ಯ ಗುರುಗಳ ಸಮ್ಮುಖದಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ವೈಭವೊಪೇತವಾಗಿ ಈ ಕಾರ್ಯಕ್ರಮ ನಡೆಯಿತು.

ವಿದುಷಿಯರಾದ ಶೀಲಪ್ರಭಾ, ವಿದ್ಯಾರಾವ್ ಶಶಿಧರ್, ಆಶಾ ಹೇಮರಾಜ್ ಅತಿಥಿಗಳಾಗಿದ್ದರು.

ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿಗಳು ಶ್ರೀ ತ್ಯಾಗರಾಜಸ್ವಾಮಿ ವಿರಚಿತ ಪ್ರಹ್ಲಾದ ಭಕ್ತ ವಿಜಯ ಗೇಯ ನಾಟಕದ ಸೌರಾಷ್ಟ್ರ ರಾಗ ಆದಿತಾಳದ ಶ್ರೀ ಗಣಪತಿನಿ ಕೃತಿಯನ್ನು ಆಯ್ಕೆ ಮಾಡಿಕೊಂಡು ಸುಂದರವಾದ ನೃತ್ಯ ಸಂಯೋಜನೆಯಿಂದ ರೂಪುಗೊಂಡ ಕೃತಿಗೆ ಮನೋಜ್ಞವಾದ ಭಾವಾಭಿನಯದಿಂದ ನರ್ತಿಸಿದರು.

ನಂತರ ಬೆಂಗಳೂರಿನ ಭಾನುಪ್ರಿಯ ರಾಕೇಶ್ ಅಣ್ಣಮ್ಮಚಾರ್ಯರ ಕೃತಿಯಾದ ಜಯ ಜಾನಕಿ ರಮಣ, ಶಿವರಂಜನಿ ರಾಗದ ಶ್ರೀ ಪುರಂದರದಾಸರ ವಿರಚಿತ ಯಮನೆಲ್ಲಿ ಕಾಣದೆಂದು ದೇವರ ನಾಮ ಮತ್ತು ತಿಲ್ಲಾನ ಇವುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಜಯ ಜಾನಕಿ ರಮಣ ಕೃತಿಯನ್ನು ಸ್ವತಃ ಭಾನುಪ್ರಿಯ ರಾಕೇಶ್ ರವರೇ ನರ್ತಿಸಿ ರಾಮನ ಗುಣಗಾನಗಳನ್ನು ಅವನ ಮಹಿಮೆಯನ್ನು ಸರಳವು ಅಲ್ಲದ ಕಷ್ಟವೂ ಅಲ್ಲದ ಸುಂದರವಾದ ಜತಿಗಳೊಂದಿಗೆ ಸಾಹಿತ್ಯಕ್ಕೆ ಪೂರಕವಾದ ಭಾವಾಭಿನಯದೊಂದಿಗೆ ಜತಿ ಗಳಿಗೆ ತಕ್ಕಂತೆ ಅಡವು ಅಂಗ ವಿನ್ಯಾಸಗಳೊಂದಿಗೆ ಮನೋಜ್ಞವಾಗಿ ಪ್ರಸ್ತುತಪಡಿಸಿದರು.

ಅವರ ಶಿಷ್ಯರೊಡನೆ ಪ್ರದರ್ಶಿಸಿದ ದೇವರ ನಾಮವು ರಾಮನ ಹಲವು ಕಥೆಗಳನ್ನು ಸಂಚಾರಿಗಳೊಂದಿಗೆ ಸೂಕ್ತವಾದ ಭಾವಭಿನಯಗಳೊಂದಿಗೆ ನರ್ತಿಸಿ ತಿಲ್ಲಾನ್ನದೊಂದಿಗೆ ತಮ್ಮ ನೃತ್ಯ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು, ತಾನು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಲ್ಲ ಉತ್ತಮ ಶಿಕ್ಷಕಿಯೂ ಕೂಡ ಎಂಬುದನ್ನು ಸಾಕ್ಷಿ ಸಮೇತ ಶಿಷ್ಯರಿಂದ ನರ್ತನ ಕಾರ್ಯಕ್ರಮವನ್ನು ನಡೆಸಿಕೊಟ್ಟು ರುಜುವಾತು ಪಡಿಸಿದರು.

ಚೆನ್ನೈನಿಂದ ಆಗಮಿಸಿದ್ದ ಕೃಷ್ಣ ಧ್ವನಿ ಶಾಲೆಯ ಸ್ಥಾಪಕರು ಹಾಗೂ ನಿರ್ದೇಶಕರಾದ ಗಾಯಿತ್ರಿ ಕೃಷ್ಣವೇಣಿ ಅವರು ತಮ್ಮ 10 ಜನ ಶಿಷ್ಯರೊಂದಿಗೆ ದಶ ವಿಧ ಹರಿ ಎಂಬ ರೂಪಕವನ್ನು ಪ್ರಸ್ತುತಪಡಿಸಿದರು.

ಕೇರಳ ಮತ್ತು ಮುಂಬೈನಿಂದ ಆಗಮಿಸಿದ್ದ ಡಾ. ಜಾಯ್ ಕೃಷ್ಣನ್. ಗುರು ವಿನೀತ ಅವರು, ಜಾಯ್ ಕೃಷ್ಣನ್ ಅವರು ‘ಕೇರಳ ನಟನಂ’ ಮತ್ತೊಬ್ಬರು ‘ಮೋಹಿನಿ ಆಟಂ’, ಜುಗಲ್ ಬಂದಿ ನರ್ತನವನ್ನು ಸುಪ್ರಸಿದ್ಧ ಕೃತಿಯಾದ ‘ಸ್ವಾತಿ ತಿರುನಾಳ್ ಮಹಾರಾಜ’ರಿಂದ ರಚಿತಗೊಂಡ ರಾಗ ಮಾಲಿಕೆ, ರೂಪಕ ತಾಳದಿಂದ ಕೂಡಿದ ‘ಭಾವಯಾಮಿ ರಘುರಾಮಂ’ ರಾಮಾಯಣ ಕೃತಿಯನ್ನು 30 ನಿಮಿಷಗಳ ಅವಧಿಯಲ್ಲಿ ರಾಮಾಯಣದ ಪ್ರಮುಖ ಸನ್ನಿವೇಶಗಳನ್ನು ಚತುರತೆ, ಕುಶಲತೆ, ಖಚಿತತೆ, ಪಾಂಡಿತ್ಯ, ವಿದ್ವತ್ಪೂರ್ಣವಾದ ಭಾವಾಭಿನಯ ರಸಗಳಿಂದ ಪಾತ್ರಗಳ ಸಂರಕ್ಷಣೆ ಗುರಿಯನ್ನು ಇಟ್ಟುಕೊಂಡು ಎಲ್ಲೂ ಲವ ಲೇಶ ಲೋಪ ಬಾರದ ಹಾಗೆ, ಅತ್ಯಾಕರ್ಷಕವಾದ ಉಡುಗೆ ತೊಡುಗೆಯೊಂದಿಗೆ, ಮನೋಜ್ಞವಾಗಿ ಸಂಪೂರ್ಣ ರಾಮಾಯಣದ ಚಿತ್ರಣವನ್ನು ಕಣ್ಮುಂದೆ ತಂದು ನಿಲ್ಲಿಸಿದರು.

ಬೆಂಗಳೂರಿನಿಂದ ಆಗಮಿಸಿದ್ದ ‘ಮಯೂರಿ ನಾಟ್ಯಶಾಲೆಯ’ ಸ್ಥಾಪಕರು ಹಾಗೂ ನಿರ್ದೇಶಕರಾದ ಡಾ ಶೋಭಾ ಶಶಿಕುಮಾರ್ ತಮ್ಮ ಶಿಷ್ಯರೊಂದಿಗೆ ಆಗಮಿಸಿ ‘ಸೀತಾ ಕಲ್ಯಾಣ’, ಶತಾವಧಾನಿ ಗಣೇಶ್ ಇವರ ಅಭೂತಪೂರ್ವ ಕೃತಿಯನ್ನು ಸೇರಿದಂತೆ 40 ನಿಮಿಷಗಳ ಕಾಲಾವಕಾಶದಲ್ಲಿ ‘ಭರತ ನೃತ್ಯ ಶೈಲಿಯಲ್ಲಿ’ ವಿಶಿಷ್ಟವಾದ ಕರಣಗಳ ಸಂಯೋಜನೆಯೊಂದಿಗೆ ಕಣ್ಮನಗಳಿಗೆ ತಂಪು, ಇಂಪು, ಕಂಪನ್ನು ನೀಡುವ ಉಡುಗೆ ತೊಡುಗೆ ಸಂಗೀತ, ಸಾಹಿತ್ಯದೊಂದಿಗೆ ಅಭೂತಪೂರ್ವ ನೃತ್ಯ ಸಂಯೋಜನೆ,ಮನೋಜ್ಞವಾದ ಅಭಿನಯ, ಮುಂತಾದವುಗಳಿಂದ ರೋಮಾಂಚ ಭರಿತ ನೃತ್ಯವನ್ನು ಪ್ರದರ್ಶಿಸಿ ಸಭಿಕರು ರಾಮನ ಭಕ್ತಿಯ ಸಾರದಲ್ಲಿ ಮಿಂದು ಸಾರ್ಥಕತೆಯ ಮೇರೆಯನ್ನು ತಲುಪುವಂತೆ ಮಾಡಿದರು.

ಬೆಂಗಳೂರಿನ ಡಾ. ಲಕ್ಷ್ಮಿ ರೇಖಾ ಅವರು ತಮ್ಮ ಶಿಷ್ಯರೊಂದಿಗೆ ಆಗಮಿಸಿ ಇಂದಿನ ಕಾರ್ಯಕ್ರಮದಲ್ಲಿ ವಿಶಿಷ್ಟವಾಗಿ ರಚಿತಗೊಂಡ ಅಷ್ಟಲಕ್ಷ್ಮಿಯ ಕುರಿತ ಅಪರೂಪದ ಹಲವು ಕಥಾ ಪ್ರಸಂಗಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವಿನೂತನವಾದ ಕಲ್ಪನೆಯಲ್ಲಿ ಸುಂದರವಾಗಿ ಜತಿ ಸ್ವರ ಅಭಿನಯ ಸಂಚಾರಿಗಳೊಂದಿಗೆ ಸೃಷ್ಟಿಸಿ ಮನೋಜ್ಞವಾಗಿ ಪ್ರಸ್ತುತಪಡಿಸಿದರು.