ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರಜ್ಞಾವಂತ ವೇದಿಕೆಯಿಂದ ಪಟ್ಟಣದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ದಿನವನ್ನು ಆಚರಿಸಲಾಯಿತು.

ನಂತರ ವೇದಿಕೆ ಸಂಚಾಲಕ, ವಕೀಲ ಸಿ.ಎಸ್.ವೆಂಕಟೇಶ್ ಮಾತನಾಡಿ, ಜ್ಯೋತಿಬಾ ಫುಲೆ ಅವರು ಸ್ತ್ರೀ ಶಿಕ್ಷಣದ ಹರಿಕಾರರು. ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಬೇಕೆಂದು ಪ್ರತಿಪಾದಿಸಿದವರಲ್ಲಿ ಪ್ರಮುಖರು. ಕಠಿಣ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವಲ್ಲಿ, ಮಹಿಳೆಯರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಶಿಕ್ಷಣ ಮತ್ತು ಸಮಾನತೆಯನ್ನು ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಸಿದ್ದರು ಎಂದು ಸ್ಮರಿಸಿದರು.

ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಜಯಶಂಕರ್ ಮಾತನಾಡಿ,ಜ್ಯೋತಿಬಾ ಫುಲೆ 19ನೇ ಶತಮಾನದ ಭಾರತದ ಶ್ರೇಷ್ಠ ಸಮಾಜ ಸುಧಾರಕರು, ಕ್ರಾಂತಿಕಾರಿ ಚಿಂತಕರಾಗಿ ಶೋಷಿತ ಸಮುದಾಯಗಳು ಮತ್ತು ದಲಿತರ ಹಕ್ಕುಗಳಿಗಾಗಿ 1873 ರಲ್ಲಿ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದ್ದರು. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ತಮ್ಮ ಮನೆ ನೀರಿನ ತೊಟ್ಟಿಯನ್ನು ದಲಿತರಿಗಾಗಿ ಮುಕ್ತಗೊಳಿಸಿದರು. ಸಮಾನತೆ ಪ್ರತಿಪಾದಕರಾಗಿ ಭಾರತೀಯರ ಮನದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವೇದಿಕೆ ಕಾರ್ಯದರ್ಶಿ ಚಿಕ್ಕ ತಮ್ಮೇಗೌಡ, ಕಡತನಾಳು ರಾಕೇಶ್, ಸುಷ್ಮಾ, ಶಿವಮ್ಮ, ಮೀನ ಸೇರಿದಂತೆ ಇತರರು ಇದ್ದರು.ವಿಶ್ವ ಆರೋಗ್ಯ ದಿನಾಚರಣೆಗೆ ಚಾಲನೆ


ಶ್ರೀರಂಗಪಟ್ಟಣ:ಪಟ್ಟಣದ ರಂಗನಾಥ ನಗರದ ನಮ್ಮ ಕ್ಲಿನಿಕ್‌ನಲ್ಲಿ ವಿಶ್ವ ಆರೋಗ್ಯ ದಿನವನ್ನು ಆರೋಗ್ಯಕ್ಕಾಗಿ ಒಗ್ಗೂಡಿ ವಿಜ್ಞಾನದೊಂದಿಗೆ ನಿಲ್ಲಿ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.

ವೈದ್ಯಾಧಿಕಾರಿ ಡಾ.ಎ.ಎಸ್.ಸೂರ್ಯ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ನಿರ್ದಿಷ್ಟ ಪದವಿ ಹೊಂದಿರುವ ಅರ್ಹ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು. ನಕಲಿ ವೈದ್ಯರಲ್ಲಿ ಚಿಕಿತ್ಸೆ ಪಡೆದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಗಳಿರುತ್ತದೆ ಎಂದು ಎಚ್ಚರಿಕೆ ನೀಡಿದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಮಾತನಾಡಿ, ಆರೋಗ್ಯವೆಂದರೆ ಕೇವಲ ರೋಗ ರಹಿತವಾಗಿಲ್ಲ. ಮನುಷ್ಯರು ಸಾಮಾಜಿಕ, ದೈಹಿಕ ಹಾಗೂ ಮಾನಸಿಕ ಸದೃಢರಾಗಿದ್ದರೆ ಆರೋಗ್ಯವಂತರೆನಿಸಿಕೊಳ್ಳುತ್ತಾರೆ. ಆದ್ದರಿಂದ ನಿಯಮಿತ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿ ಕೊಳ್ಳಬೇಕೆಂದು ಸಲಹೆ ನೀಡಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ ಮಾತನಾಡಿ, ಸರ್ಕಾರದಿಂದ ಸಾರ್ವಜನಿಕರಿಗೆ ಸಿಗುತ್ತಿರುವ ಸೇವೆಗಳ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಮೇಘನಾ, ಕಿರಿಯ ದರ್ಜೆ ಸಹಾಯಕಿ ಮಹಾಲಕ್ಷ್ಮಿ, ಧನಲಕ್ಷ್ಮಿ ಸೇರಿದಂತೆ ರಂಗನಾಥನಗರ, ಬೂದಿಗುಂಡಿ ನಿವಾಸಿಗಳು ಉಪಸ್ಥಿತರಿದ್ದರು.