ಎಸ್ಸೆಸ್ಸೆಲ್ಸಿ ಪರೀಕ್ಷೆ: ಮತ್ತೆ ಕುಸಿತ ಕಂಡ ಬಳ್ಳಾರಿ ಜಿಲ್ಲೆ ಫಲಿತಾಂಶ

| Published : May 03 2025, 12:18 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮತ್ತೆ ಕುಸಿತ ಕಂಡ ಬಳ್ಳಾರಿ ಜಿಲ್ಲೆ ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಬಾರಿ ಬಳ್ಳಾರಿ ಜಿಲ್ಲೆ ಶೇ. 64.99ರಷ್ಟು ಫಲಿತಾಂಶ ಪಡೆದು 28ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ. 60.26 ರಷ್ಟು ಫಲಿತಾಂಶವಷ್ಟೇ ಪಡೆದುಕೊಳ್ಳಲು ಸಾಧ್ಯವಾಗಿದ್ದು, 29ನೇ ಸ್ಥಾನಕ್ಕೆ ಕುಸಿದಿದೆ.

ಬಳ್ಳಾರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಈ ಬಾರಿ ಬಳ್ಳಾರಿ ಜಿಲ್ಲೆ ರಾಜ್ಯವಾರು ಸ್ಥಾನದಲ್ಲಿ ಕುಸಿತಗೊಂಡಿದ್ದು ಫಲಿತಾಂಶದಲ್ಲಿ ಇಳಿಮುಖ ಅನುಭವಿಸಿದೆ.

ಕಳೆದ ಬಾರಿ ಬಳ್ಳಾರಿ ಜಿಲ್ಲೆ ಶೇ. 64.99ರಷ್ಟು ಫಲಿತಾಂಶ ಪಡೆದು 28ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ. 60.26 ರಷ್ಟು ಫಲಿತಾಂಶವಷ್ಟೇ ಪಡೆದುಕೊಳ್ಳಲು ಸಾಧ್ಯವಾಗಿದ್ದು, 29ನೇ ಸ್ಥಾನಕ್ಕೆ ಕುಸಿದಿದೆ. ಗಮನಾರ್ಹ ಸಂಗತಿ ಎಂದರೆ ಕಳೆದ ಎಂಟು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಫಲಿತಾಂಶವನ್ನು ಸುಧಾರಿಸಿಕೊಂಡಿಲ್ಲ. 2017ರಿಂದ ವರ್ಷದಿಂದ ವರ್ಷಕ್ಕೆ ಫಲಿತಾಂಶ ಕುಸಿತ ಕಂಡಿದ್ದು, ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ.

ನಿರೀಕ್ಷೆಯಂತೆಯೇ ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಪೈಕಿ ಅನುದಾನಿತ ಶಾಲೆಗಳ ಫಲಿತಾಂಶದಲ್ಲಿ ಕುಸಿತ ಕಂಡು ಬಂದಿದೆ. ಸರ್ಕಾರಿ ಶಾಲೆಗಳು ಶೇ. 56.09ರಷ್ಟು ಫಲಿತಾಂಶ ಪಡೆದರೆ, ಅನುದಾನಿತ ಶಾಲೆಗಳು ಶೇ. 52.21 ಹಾಗೂ ಖಾಸಗಿ ಶಾಲೆಗಳು ಶೇ. 68.18ರಷ್ಟು ಫಲಿತಾಂಶ ಪಡೆದುಕೊಂಡಿವೆ. ಜಿಲ್ಲೆಯ ಪೈಕಿ ಸಂಡೂರು ತಾಲೂಕು ಶೇಕಡವಾರು ಫಲಿತಾಂಶವನ್ನು ಹೆಚ್ಚಿಸಿಕೊಂಡಿದೆ. ಬಳ್ಳಾರಿ ಪಶ್ಚಿಮ ವಲಯ ಅತಿ ಕಡಿಮೆ ಶೇಕಡವಾರು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಕುಳಿತ 20,262 ವಿದ್ಯಾರ್ಥಿಗಳ ಪೈಕಿ 12,128 ವಿದ್ಯಾರ್ಥಿಗಳು ಉತ್ತೀರ್ಣರಾದರೆ, 8134 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ಈ ಬಾರಿಯೂ ನಗರ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದ ಒಟ್ಟು 10,639 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 6323 ವಿದ್ಯಾರ್ಥಿಗಳು ಪಾಸ್ ಆಗಿದ್ದರೆ, ಪರೀಕ್ಷೆಗೆ ಕುಳಿತ 9623 ನಗರ ವಿದ್ಯಾರ್ಥಿಗಳ ಪೈಕಿ 5805 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕೈಗೊಂಡಿದ್ದ ಕ್ರಮಗಳು ಯಾವುದೇ ಫಲ ನೀಡಿಲ್ಲ.

ಜಿಲ್ಲೆಗೆ ಸಂಡೂರು ತಾಲೂಕು ಪ್ರಥಮ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸಂಡೂರು ತಾಲೂಕಿನಲ್ಲಿ 3492 ವಿದ್ಯಾರ್ಥಿಗಳಲ್ಲಿ 2339 ಉತ್ತೀರ್ಣರಾಗಿದ್ದು, ಶೇ. 66.98ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ ಮೊದಲನೇ ಸ್ಥಾನ ಪಡೆದುಕೊಂಡಿದೆ. ಬಳ್ಳಾರಿ ಪೂರ್ವ ವಲಯದಲ್ಲಿ 4802 ವಿದ್ಯಾರ್ಥಿಗಳಲ್ಲಿ 2881 ಉತ್ತೀರ್ಣರಾಗಿದ್ದು, ಶೇ. 60ರಷ್ಟು ಫಲಿತಾಂಶ ಪಡೆದು ಎರಡನೇ ಸ್ಥಾನ, ಸಿರುಗುಪ್ಪ ತಾಲೂಕು 3745 ವಿದ್ಯಾರ್ಥಿಗಳಲ್ಲಿ 2213 ಉತ್ತೀರ್ಣರಾಗಿ ಶೇ. 59.09ರಷ್ಟು ಫಲಿತಾಂಶ ಪಡೆದು ತೃತೀಯ ಸ್ಥಾನ ಹಾಗೂ ಬಳ್ಳಾರಿ ಪಶ್ಚಿಮ ವಲಯದಲ್ಲಿ 8223 ವಿದ್ಯಾರ್ಥಿಗಳಲ್ಲಿ 4695 ಮಕ್ಕಳು ತೇರ್ಗಡೆಯಾಗಿದ್ದು, ಶೇ. 57.10ರಷ್ಟು ಪಡೆದು ಕೊನೆಯ ಸ್ಥಾನ ಪಡೆದಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಕೊನೆ ಸ್ಥಾನದಲ್ಲಿ ಗುರುತಿಸಿಕೊಂಡಿವೆ. ಈ ಪೈಕಿ ಬಳ್ಳಾರಿಯೂ ಒಂದು.

ಕಂಪ್ಲಿಯ ನಂದಿತಾ ಜಿಲ್ಲೆಗೆ ಟಾಪ್: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕಂಪ್ಲಿ ಶ್ರೀ ವಿದ್ಯಾಸಾಗರ ವಸತಿ ಶಾಲೆಯ ವಿದ್ಯಾರ್ಥಿನಿ ಎಚ್. ನಂದಿತಾ ಅವರು 622 ಅಂಕಗಳನ್ನು ಪಡೆದು ಜಿಲ್ಲೆಗೆ ಟಾಪ್ ಆಗಿದ್ದಾರೆ. ಸಿರುಗುಪ್ಪ ತಾಲೂಕು ನಡವಿ ಗ್ರಾಮದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ 621 ಅಂಕಗಳನ್ನು ಪಡೆದು ಜಿಲ್ಲೆಗೆ ಎರಡನೇ ಸ್ಥಾನದಲ್ಲಿದ್ದಾರೆ.

ಬಳ್ಳಾರಿ ಹೊರ ವಲಯದ ಸಂಗನಕಲ್ಲು ಗ್ರಾಮದ ವಿಸ್ಡಂ ಲ್ಯಾಂಡ್ ಶಾಲೆಯ ವಿದ್ಯಾರ್ಥಿ ಹರ್ಷ ಡಿ.ಆರ್‌. 620 ಅಂಕಗಳು ಹಾಗೂ ಬಳ್ಳಾರಿ ಆದರ್ಶ ವಿದ್ಯಾಶಾಲೆಯ ವಿದ್ಯಾರ್ಥಿನಿ ಜಿ. ದೇವಿಕಾ ಅವರು 620 ಅಂಕಗಳನ್ನು ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದಾರೆ.

ಬೇಸರ ಮೂಡಿಸಿದೆ: ಫಲಿತಾಂಶ ನಮಗೂ ಬೇಸರ ಮೂಡಿಸಿದೆ. ಈ ಬಾರಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಲ್ಲಿದ್ದೆವು. ಆದರೆ, ಹಿನ್ನಡೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಣೆ ಕಾರ್ಯಯೋಜನೆ ರೂಪಿಸಿಕೊಳ್ಳುತ್ತೇವೆ ಎಂದು ಬಳ್ಳಾರಿ ಜಿಲ್ಲೆ ಡಿಡಿಪಿಐ ಉಮಾದೇವಿ ಹೇಳಿದರು.