ಸಾರಾಂಶ
ಗದಗ: ಜಿಲ್ಲೆಯಾದ್ಯಂತ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಿರಾತಂಕವಾಗಿ ಜರುಗಿವೆ. ಶೇ 98.07 ಹಾಜರಾತಿಯಾಗಿದೆ. ಮೊದಲ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ವಿವಿಧ ಶಾಲೆಗಳಲ್ಲಿ ವಿಶೇಷವಾಗಿ ಆರತಿ ಎತ್ತಿ ಸ್ವಾಗತಿಸಿದರೆ. ಇನ್ನು ಕೆಲವೆಡೆ ಪುಷ್ಪ ವೃಷ್ಟಿ ಮಾಡಿ ಸ್ವಾಗತಿಸಿದರು. ಮತ್ತೆ ಕೆಲವೆಡೆ ವಿದ್ಯಾಥಿರ್ಗಳಿಗೆ ಸಿಹಿ ತಿನ್ನಿಸಿ ಪರೀಕ್ಷೆಗೆ ಆಮಂತ್ರಿಸಲಾಯಿತು.ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ಯಾವುದೇ ಗದ್ದಲ, ಡಿಬಾರ್ ಇಲ್ಲದೇ ನಿರಾಂತಕವಾಗಿ ಜರುಗಿತು. ಜಿಲ್ಲೆಯ 61 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ಪ್ರತಿಬಂಧಕಾಜ್ಞೆ ಜಾರಿಗೊಳಿಸಿದ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಜಿಲ್ಲೆಯಲ್ಲಿ ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದ ಒಟ್ಟು 15333 ವಿದ್ಯಾಥಿರ್ಗಳಲ್ಲಿ 15037 ವಿದ್ಯಾರ್ಥಿಗಳು ಹಾಜರಾಗಿದ್ದರು. 296 ವಿದ್ಯಾಥಿರ್ಗಳು ಗೈರಾಗಿದ್ದರು. ರೋಣ ತಾಲೂಕಿನಲ್ಲಿ ಅತೀ ಹೆಚ್ಚು 95 ವಿದ್ಯಾಥಿರ್ಗಳು ಗೈರಾಗಿದ್ದಾರೆ. ನರಗುಂದ ತಾಲೂಕಿನಲ್ಲಿ ಅತೀ ಕಡಿಮೆ 12 ಜನ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಸ್ವಾಗತ: ಗದಗ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿರುವ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಗೆ ಹಬ್ಬದ ಸಂಭ್ರಮದಂತೆ ಆರತಿ ಬೆಳಗಿ, ಸಿಹಿ ಹಂಚಿ, ಪುಷ್ಪ ವೃಷ್ಟಿ ಮಾಡಿ, ಪರೀಕ್ಷಾ ಕೇಂದ್ರಕ್ಕೆ ಸ್ವಾಗತಿಸಲಾಯಿತು.ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಮತ್ತಷ್ಟು ಆತ್ಮಸ್ಥೈರ್ಯದಿಂದ ಸ್ನೇಹಿತರೊಂದಿಗೆ ಪರೀಕ್ಷಾ ಸಂಭ್ರಮ ಹಂಚಿಕೊಂಡರು. ಈ ಸಂದರ್ಭದಲ್ಲಿ ಮುಖ್ಯಸ್ಥ ಎಸ್.ಎಸ್. ಬಡಿಗೇರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣ ಗೌಡ ಗೌಡರ, ನಾಗರಾಜ್ ಗಾಳಿ, ಗುರುರಾಜ್ ಅಗಸಿಮನಿ, ಶಾರದಾ ಮುಂತಾದ ಸಹಶಿಕ್ಷಕರು ಹಾಗೂ ಪಾಲಕರು ಹಾಜರಿದ್ದು ಸ್ವಾಗತಿಸಿದರು.