ಬಳ್ಳಾರಿ: ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದಲ್ಲಿ ಕನ್ನಡಪ್ರಭ ಹಾಗೂ ಸನ್ಮಾರ್ಗ ಗೆಳೆಯರ ಬಳಗದ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗುರ್ರಪ್ಪ, ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಿರುಗುಪ್ಪ ತಾಲೂಕು ಶೇ.95ರಷ್ಟು ಫಲಿತಾಂಶ ತರಬೇಕು ಎಂಬ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಫಲಿತಾಂಶ ಸುಧಾರಣೆಗೆ ಪೂರಕ ಕ್ರಮ ವಹಿಸಲಾಗಿದೆ. ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದ್ದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಡೆ ವಿಶೇಷ ಗಮನ ಹರಿಸಿ ಪರೀಕ್ಷೆ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರಿಂದ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಎದುರಿಸಿ ಉತ್ತೀರ್ಣವಾಗಬಹುದು. ಪರೀಕ್ಷೆಗೆ ಇನ್ನು ಒಂದು ತಿಂಗಳ ಅವಕಾಶವಿದ್ದು, ಈವರೆಗೆ ನಡೆದ ಪಠ್ಯಗಳನ್ನು ಸರಿಯಾಗಿ ಮನನ ಮಾಡಿಕೊಂಡರೂ ಉತ್ತೀರ್ಣವಾಗಬಹುದು. ಈಗಾಗಲೇ ಪೂರ್ಣ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆಯುವತ್ತ ಗಮನ ಹರಿಸಿ. ಪರೀಕ್ಷೆಯಲ್ಲಿ ಯಾವುದೇ ಒತ್ತಡ ಮಾಡಿಕೊಳ್ಳದೇ ಪರೀಕ್ಷೆ ಎದುರಿಸಿ. ಇದು ಪೈಪೋಟಿ ಯುಗ. ಉನ್ನತ ಶಿಕ್ಷಣಕ್ಕೆ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾಗಲಿದ್ದು, ಹೀಗಾಗಿ ಸಮಯ ವ್ಯರ್ಥ ಮಾಡದೆ ವಿದ್ಯಾರ್ಥಿಗಳು ಓದಿನ ಕಡೆ ಗಮನ ನೀಡಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಕೆ.ಭಾಗ್ಯಮ್ಮ ಮಾತನಾಡಿ, ಅನೇಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ಹಾಗೂ ಕನ್ನಡಪ್ರಭ ಪತ್ರಿಕೆಯವರು ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷಾ ಪೂರ್ವ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಅತ್ಯಂತ ಕಾಳಜಿಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳ ಪರೀಕ್ಷೆ ಹಿನ್ನೆಲೆಯಲ್ಲಿ ನೀಡಿರುವ ಮಾರ್ಗದರ್ಶನ ಫಲಿತಾಂಶಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಪುರುಷೋತ್ತಮ ಇಂಗ್ಲೀಷ್, ಗಣಿತ ವಿಷಯ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರೆ, ಹರಿಪ್ರಸಾದ್ ಕನ್ನಡ ವಿಷಯ, ಸಿದ್ದಲಿಂಗೇಶ ಗದಗಿನ್ ವಿಜ್ಞಾನ ವಿಷಯ ಕುರಿತು ಮಾರ್ಗದರ್ಶನ ನೀಡಿದರು.

ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್, ಮೆಹತಾಬ್, ಗ್ರಾಮದ ಯುವ ಮುಖಂಡ ನವೀನ್ ರೆಡ್ಡಿ, ನಿವೃತ್ತ ಮುಖ್ಯಗುರು ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು. ಕರೂರು ಸೇರಿದಂತೆ ಸುತ್ತಮುತ್ತಲ ಶಾಲೆಗಳ ನೂರಾರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.