ಸಂಡೂರು ತಾಲೂಕಿಗೆ ಶೇ.೭೭ ಫಲಿತಾಂಶ

| Published : May 12 2024, 01:19 AM IST

ಸಾರಾಂಶ

ಹಿಂದಿನ ವರ್ಷ ಶೇ.೮೨ ಫಲಿತಾಂಶ ಲಭಿಸಿತ್ತು. ಈ ಬಾರಿ ಶೇ ೭೭.೪೬ ಫಲಿತಾಂಶವನ್ನು ದಾಖಲಿಸಿದ್ದರೂ ಜಿಲ್ಲೆಯ ಫಲಿತಾಂಶದಲ್ಲಿ ಸಂಡೂರು ತಾಲೂಕು ದ್ವಿತಿಯ ಸ್ಥಾನ ಗಳಿಸಿದೆ.

ಸಂಡೂರು: ೨೦೨೩-೨೪ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲೂಕಿಗೆ ಶೇ.೭೭.೪೬ ಫಲಿತಾಂಶ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿಯವರು ತಿಳಿಸಿದರು.

ಜಿಲ್ಲೆಯಲ್ಲಿ ದ್ವಿತಿಯ ಸ್ಥಾನ:

ಹಿಂದಿನ ವರ್ಷ ಶೇ.೮೨ ಫಲಿತಾಂಶ ಲಭಿಸಿತ್ತು. ಈ ಬಾರಿ ಶೇ ೭೭.೪೬ ಫಲಿತಾಂಶವನ್ನು ದಾಖಲಿಸಿದ್ದರೂ ಜಿಲ್ಲೆಯ ಫಲಿತಾಂಶದಲ್ಲಿ ಸಂಡೂರು ತಾಲೂಕು ದ್ವಿತಿಯ ಸ್ಥಾನ ಗಳಿಸಿದೆ. ಪರೀಕ್ಷೆಗೆ ಕುಳಿತ ೧೬೪೦ ಗಂಡು ಹಾಗೂ ೧೮೫೧ ಹೆಣ್ಣು ವಿದ್ಯಾರ್ಥಿಗಳು ಸೇರಿ ಒಟ್ಟು ೩೪೯೧ ವಿದ್ಯಾರ್ಥಿಗಳಲ್ಲಿ ೧೧೩೧ ಗಂಡು ಹಾಗೂ ೧೫೭೩ ಹೆಣ್ಣು ಸೇರಿ ಒಟ್ಟು ೨೭೦೪ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕೃಷ್ಣಾನಗರದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಎಚ್.ಸುದೀಪ ೬೧೨ ಅಂಕ, ಬೊಮ್ಮಾಘಟ್ಟದ ಶ್ರೀ ವಿದ್ಯಾಮಂದಿರ ಪ್ರೌಢ ಶಾಲೆಯ ವಿದ್ಯಾರ್ಥಿ ಓ.ಆರ್. ಪ್ರಜ್ವಲ್ ೬೦೧ ಹಾಗೂ ಚೋರುನೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಖಿಲ್ ಕುಮಾರ್ ಜಿ.ಎಸ್ ೫೯೯ ಅಂಕಗಳನ್ನು ಗಳಿಸಿ ಕ್ರಮವಾಗಿ ತಾಲೂಕಿಗೆ ಪ್ರಥಮ, ದ್ವಿತಿಯ ಹಾಗೂ ತೃತಿಯ ಸ್ಥಾನಗಳನ್ನು ಅಲಂಕರಿಸಿದ್ದಾರೆ.

೭ ಶಾಲೆಗಳಲ್ಲಿ ಶೇ ೧೦೦ ಫಲಿತಾಂಶ:

ತಾಲೂಕಿನ ಬಂಡ್ರಿ, ಚೋರುನೂರು, ಬನ್ನಿಹಟ್ಟಿ, ಸುಶೀಲಾನಗರ ಹಾಗೂ ತೋರಣಗಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಬೊಮ್ಮಾಘಟ್ಟದ ವಿದ್ಯಾಮಂದಿರ ಶಾಲೆ, ಕುರೆಕುಪ್ಪ ಗ್ರಾಮದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಗಳು ಶೇ.೧೦೦ ಫಲಿತಾಂಶ ಪಡೆದುಕೊಂಡಿವೆ.