- ಶ್ರೀರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ಫೋಟೋ, ವೀಡಿಯೋ ಪ್ರದರ್ಶಿಸಿದ ಯಶವಂತ ರಾವ್ ಜಾಧವ್‌ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ನೀಡಿದ ಬೆಳ್ಳಿ ಇಟ್ಟಿಗೆ ವಿಚಾರ ಹಾಗೂ ದಾವಣಗೆರೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ ಅಕ್ರಮ, ಚಿನ್ನಾಭರಣ ಕಳವು ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ, ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಟ್ರಸ್ಟಿಗಳಿಗೆ ದುಗ್ಗಮ್ಮನ ಭಕ್ತ, ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಬಹಿರಂಗ ಸವಾಲು ಹಾಕಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ನಾವು ಸ್ನೇಹಿತರು, ಕೆಲಭಕ್ತರು ಮಾಡಿಸಿದ್ದ ಬೆಳ್ಳಿ ಇಟ್ಟಿಗೆ ರಾಮ ಮಂದಿರ ತಲುಪಿದೆಯೋ ಅಥವಾ ಮಾರ್ಗ ಮಧ್ಯೆಯೇ ಮುಳುಗಡೆ ಆಯಿತೋ ಎಂಬುದಾಗಿ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ ವ್ಯಂಗ್ಯವಾಡಿದ್ದು, ಬೆಳ್ಳಿ ಇಟ್ಟಿಗೆ ಮಂದಿರಕ್ಕೆ ಸಮರ್ಪಿಸಿದ ಬಗ್ಗೆ ಅಧಿಕೃತ ರಸೀದಿ, ಫೋಟೋ, ವೀಡಿಯೋ ಸಮೇತ ಚರ್ಚೆಗೆ ಸಿದ್ಧ ಇರುವುದಾಗಿ ಜು.2ರಂದೇ 20 ದಿನ ಗಡುವು ನೀಡಿದ್ದೆ. 25 ದಿನ ಕಳೆದರೂ ಪ್ರತಿಕ್ರಿಯೆ ಇಲ್ಲ ಎಂದರು.

ಠಾಣೆಗೇಕೆ ದೂರು ನೀಡಿಲ್ಲ?:


ದುಗ್ಗಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಸ್.ಎಸ್‌. ಮಲ್ಲಿಕಾರ್ಜುನ ತಮ್ಮ ತಂದೆ ಅವಧಿಯಲ್ಲಿ ದೇವಸ್ಥಾನದಿಂದ ನಿರ್ಮಿಸಿದ್ದ ಮಳಿಗೆಗಳು ಹಾಗೂ ₹55 ಲಕ್ಷ ಜಿಎಸ್‌ಟಿ ಪಾವತಿಸಿದ ಬಿಲ್‌, ದಾಖಲೆಗಳನ್ನು ಸಾರ್ವಜನಿಕವಾಗಿ, ಭಕ್ತರ ಸಮಕ್ಷಮ ಬಹಿರಂಗಪಡಿಸಲಿ. ದುಗ್ಗಮ್ಮ ದೇವಸ್ಥಾನದ ಒಡವೆ ಕಳುವಾಗಿದ್ದು, ಕಳುವಾದ ಚಿನ್ನಾಭರಣಗಳ ಬಗ್ಗೆ ತಿಳಿಸಬೇಕು. ದೇವಸ್ಥಾನದಲ್ಲಿ ಹಿಂದೆ ನಡೆದ ಹಗರಣಗಳ ಬಗ್ಗೆ ತನಿಖೆ ನಡೆಸದಿರುವುದು, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ಚಿನ್ನಾಭರಣ ಕಳುವಾದ ಬಗ್ಗೆ ಪೊಲೀಸ್ ಠಾಣೆಗೆ ಯಾಕೆ ದೂರು ನೀಡಿಲ್ಲವೆಂದು ಸ್ಪಷ್ಟಪಡಿಸಲಿ ಎಂದು ಅವರು ಹೇಳಿದರು.

ದೇವಸ್ಥಾನದಲ್ಲಾದ ಭ್ರಷ್ಟಾಚಾರ, ಚಿನ್ನಾಭರಣದ ಕಳುವಿನ ಬಗ್ಗೆ ಅಧ್ಯಕ್ಷರು, ಟ್ರಸ್ಟಿಗಳು ಮೌನವಾಗಿದ್ದು, ಆ ಎಲ್ಲರೂ ತಪ್ಪಿತಸ್ಥರಾಗಿದ್ದಾರೆ. ಟ್ರಸ್ಟ್‌ನ ಸದಸ್ಯರೆಲ್ಲರೂ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು. ಮತ್ತೆ ದುಗ್ಗಮ್ಮನ ಭಕ್ತರು, ಸಾರ್ವಜನಿಕರಿಂದ ಟ್ರಸ್ಟ್‌ಗೆ ಆಯ್ಕೆಯಾಗಿ ಬರಲಿ. ಇಲ್ಲವಾದರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಪಾದ ಮುಟ್ಟಿ, ತಮ್ಮಿಂದ ಯಾವುದೇ ಲೋಪ, ಅನ್ಯಾಯವಾಗಿಲ್ಲ ಎಂದು ಆಣೆ, ಪ್ರಮಾಣ ಮಾಡಲಿ ನೋಡೋಣ ಎಂದು ಪಂಥಾಹ್ವಾನ ನೀಡಿದರು.

ಹೋರಾಟ ರೂಪಿಸುತ್ತೇವೆ:

ಟ್ರಸ್ಟಿಗಳೆಲ್ಲರೂ ಕಳ್ಳರಲ್ಲ. ನೂರಕ್ಕೆ ನೂರರಷ್ಟು ಕಳ್ಳತನಕ್ಕೆ ಅಧ್ಯಕ್ಷರೇ ಕಾರಣ. ಈ ಬಗ್ಗೆ ತನಿಖೆ ಆಗಬೇಕು. ಟ್ರಸ್ಟಿನಲ್ಲಿ ಕೆಲ ಪ್ರತಿಷ್ಟಿತ ಮನೆತನಗಳೂ ಇದ್ದು, ಅಂತಹವರಾರೂ ಸಭೆಗೆ ಬರುವುದಿಲ್ಲ. ಸಮಿತಿ, ಟ್ರಸ್ಟಿಗಳನ್ನು ಅಪ್ಪ-ಮಕ್ಕಳೇ ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ನಾಲ್ಕೈದು ವರ್ಷದಿಂದ ಲೆಕ್ಕ ಕೇಳುತ್ತಿದ್ದರೂ ಈವರೆಗೆ ಟ್ರಸ್ಟ್ ಲೆಕ್ಕ ನೀಡಿಲ್ಲ. ಎಲ್ಲ ಅಕ್ರಮಗಳ ಸಮಗ್ರ ದಾಖಲೆ ತಮ್ಮ ಬಳಿ ಇದ್ದು, ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲು ಹಾಗೂ ಬಹಿರಂಗ ಚರ್ಚೆಗೆ ತಾವು ಸಿದ್ಧ. 4 ದಿನದಲ್ಲೇ ಸಭೆ ಕರೆಯುವುದಾಗಿ ಹೇಳಿದ್ದು, ಟ್ರಸ್ಟ್‌ನ ಮುಂದಿನ ನಡೆ ನೋಡಿ, ಮುಂದಿನ ಹೋರಾಟ ರೂಪಿಸಲಿದ್ದೇವೆ ಎಂದು ತಿಳಿಸಿದರು.

ಊರಿನ ಪುಣ್ಯಾತ್ಮರು ಕಟ್ಟಿದ ವಿದ್ಯಾಸಂಸ್ಥೆ ಇದಲ್ಲ. ನೀವು ಮಾಡಿದ ಹಗರಣಗಳ ಬಗ್ಗೆ ನಮಗೆಲ್ಲವೂ ಗೊತ್ತಿದೆ. ಟ್ರಸ್ಟ್‌ನವರು ಸಾಮೂಹಿಕ ರಾಜೀನಾಮೆ ನೀಡುವವರೆಗೂ ನಾವೇನೂ ಸುಮ್ಮನೆ ಇರುವುದೂ ಇಲ್ಲ. ದುಗ್ಗಮ್ಮ ದೇವಸ್ಥಾನದಲ್ಲಿ ಆದ ಅವ್ಯವಹಾರಗಳ ಬಗ್ಗೆ ಬಿಡಿಬಿಡಿಯಾಗಿ ತಿಳಿಸುತ್ತೇನೆ. ಚರ್ಚೆಗೆ ಬರಲು ನಿಮಗೆ ತಾಕತ್ತಿದೆಯಾ? ನಿಮ್ಮ ಹೆದರಿಕೆ, ಬೆದರಿಕೆಗೆ ಹೆದರುವವರು ಇಲ್ಲಿ ಯಾರೂ ಇಲ್ಲ. ಹೋರಾಟ ನಡೆಸುವ ಜೊತೆಗೆ ನ್ಯಾಯಾಲಯದ ಮೆಟ್ಟಿಲನ್ನೂ ಏರುತ್ತೇವೆ. ದುಗ್ಗಮ್ಮ ದೇವಸ್ಥಾನದ ಭಕ್ತನಾಗಿ ಅನ್ಯಾಯ, ಹಗರಣವನ್ನು ಪ್ರಶ್ನಿಸುವುದು ನನ್ನ ಕರ್ತವ್ಯ ಎಂದು ಯಶವಂತ ರಾವ್ ಜಾಧವ್ ಸ್ಪಷ್ಟಪಡಿಸಿದರು.

ಅಯೋಧ್ಯೆಗೆ ತೆರಳಿ ಪರಿಶೀಲಿಸಿ:

ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಮಾತನಾಡಿ, ಶ್ರೀರಾಮ ಮಂದಿರದ ಅಕ್ರಮದ ಕುರಿತಂತೆ ತನಿಖೆ ನಡೆದಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ತಪ್ಪಿದ್ದಲ್ಲ. ನಾವೂ ಅದನ್ನೇ ಒತ್ತಾಯಿಸಿದ್ದೇವೆ. ರಾಮ ಮಂದಿರಕ್ಕೆ ನಾವು ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ಬಗ್ಗೆ ಕಾಂಗ್ರೆಸ್ಸಿನ ದಿನೇಶ ಕೆ. ಶೆಟ್ಟಿಗೆ ಯಾವುದೇ ಅನುಮಾನವಿದ್ದರೆ ಖುದ್ದಾಗಿ ಅಯೋಧ್ಯೆಗೆ ತೆರಳಿ, ಪರಿಶೀಲಿಸಬಹುದು. ದುಗ್ಗಮ್ಮ ದೇವಸ್ಥಾನದಲ್ಲಿ ಚಿನ್ನಾಭರಣ ಕಳವು, ಅಕ್ರಮಗಳ ಕುರಿತಂತೆ ದಾಖಲೆ ಸಂಗ್ರಹಿಸುತ್ತಿದ್ದೇವೆ. ಎಲ್ಲವನ್ನೂ ಕಲೆ ಹಾಕಿದ ನಂತರ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲಿದ್ದೇವೆ ಎಂದರು.

ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ, ಬಿ.ರಮೇಶ ನಾಯ್ಕ, ಟಿಂಕರ್ ಮಂಜಣ್ಣ, ಬಾಲಚಂದ್ರ, ಶಿವನಗೌಡ ಟಿ.ಪಾಟೀಲ, ಸೋಗಿ ಗುರುಶಾಂತ, ಬಿ.ಪುಲಯ್ಯ, ಶಿವಾನಂದ, ಹರೀಶ ಹೊನ್ನೂರು, ಕುಮಾರ್ ಘಾಟ್ಗೆ ಇತರರು ಇದ್ದರು.

- - -

(ಬಾಕ್ಸ್‌) * ಪ್ರಮುಖ ಅಂಶಗಳು - ಬೆಳ್ಳಿ ಇಟ್ಟಿಗೆ- ದುಗ್ಗಮ್ಮ ಟ್ರಸ್ಟ್ ವಿಚಾರಕ್ಕೆ ಜಟಾಪಟಿ

- ಬೆಳ್ಳಿ ಇಟ್ಟಿಗೆ ರಾಮ ಮಂದಿರಕ್ಕೆ ನೀಡಿದ್ದ ಯಶವಂತ ರಾವ್ ಇತರರು

- ಮಂದಿರವನ್ನು ಬೆಳ್ಳಿ ಇಟ್ಟಿಗೆ ತಲುಪಿದೆಯೋ ಇಲ್ಲವೋ ಅಂದಿದ್ದ ಎಸ್ಸೆಸ್ಸೆಂ

- ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ನೀಡಿದ ಸಾಕ್ಷ್ಯ ಪ್ರದರ್ಶಿಸಿದ ಯಶವಂತ ರಾವ್‌

- ದಾವಣಗೆರೇಲಿ ಪೇಜಾವರರು ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸಿದ ಸಾಕ್ಷ್ಯಗಳು

- 11 ಕೆಜಿ 655 ಗ್ರಾಂ ಬೆಳ್ಳಿ ಇಟ್ಟಿಗೆ ಕೊಟ್ಟ ದೇಣಿಗೆ ರಸೀದಿ ಪ್ರತಿ ಬಿಡುಗಡೆ

- ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಚೇರಿ ನೀಡಿದ ದೇಣಿಗೆ ರಸೀದಿ

- ಲೆಡ್ಜರ್ ಬುಕ್‌ನಲ್ಲಿ ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ಬಗ್ಗೆ ಉಲ್ಲೇಖವಿರುಪ ಪ್ರತಿ

- ಕಚೇರಿಯಲ್ಲಿ ಬೆಳ್ಳಿ ಇಟ್ಟಿಗೆ ತೂಕ ಹಾಕಿದ ಫೋಟೋ ಜಾಧವ್‌ ಬಿಡುಗಡೆ

- ಜ.12ರಂದು ನೀಡಿದ್ದ ದೇಣಿಗೆ ರಸೀದಿ, ಫೋಟೋ, ವೀಡಿಯೋ ರಿಲೀಸ್

- ಒಟ್ಟು 26 ಜನ ಸೇರಿ ₹9.50 ಲಕ್ಷ ಸಂಗ್ರಹಿಸಿ ಮಾಡಿಸಿದ್ದ ಬೆಳ್ಳಿಯ ಇಟ್ಟಿಗೆ

- - -

-27ಕೆಡಿವಿಜಿ1: ಪೇಜಾವರ ಶ್ರೀಗಳು ಬೆಳ್ಳಿ ಇಟ್ಟಿಗೆಗೆ ಪೂಜಿಸುವ ಹಾಗೂ ಅಯೋಧ್ಯೆ ರಾಮ ಮಂದಿರಕ್ಕೆ ಬಸವಪ್ರಭು ಶ್ರೀ ಸಮಕ್ಷಮ ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ಫೋಟೋ, ವೀಡಿಯೋವನ್ನು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

-27ಕೆಡಿವಿಜಿ2: ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.