ಪಟ್ಟಣದ ಸಂತ ಜೋಸೆಫರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ವಿದ್ಯಾರ್ಥಿಗಳನ್ನು ಕೇವಲ ವೃತ್ತಿಪರರನ್ನಾಗಿ ರೂಪಿಸುವುದರಿಂದ ಸಮಾಜ ಸಂಪೂರ್ಣವಾಗುವುದಿಲ್ಲ. ಮಕ್ಕಳಿಗೆ ಮನೆ ಮೊದಲ ಪಾಠಶಾಲೆ, ತಾಯಿ, ತಂದೆ ಮೊದಲ ಗುರುಗಳು. ಈ ನಿಟ್ಟಿನಲ್ಲಿ ತಂದೆ ತಾಯಿಯರು ಮಕ್ಕಳಿಗೆ ಮಾದರಿಯಾಗಬೇಕು ಎಂದು ಮೈಸೂರು ಡಯಾಸಿಸನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿಷಪ್ ಡಾ. ಫ್ರಾನ್ಸಿಸ್ ಸೆರವೊ ಅಭಿಪ್ರಾಯಿಸಿದರು.

ಪಟ್ಟಣದ ಸಂತ ಜೋಸೆಫರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು. ತಾಯಿಯ ಮಡಿಲು ಮಗುವಿನ ಮೊದಲ ಬೆಂಚು, ಅಪ್ಪ, ಅಮ್ಮನ ಜೀವನ ಶೈಲಿ ಮಗುವಿನ ಮೊದಲ ಪುಸ್ತಕವಾಗಿದೆ. ಈ ಪುಸ್ತಕ ಗೊಂದಲದಲ್ಲಿದ್ದರೆ, ಮಗುವಿನ ಕಲಿಕೆ ದಾರಿ ತಪ್ಪುವ ಸಂಭವವೇ ಹೆಚ್ಚು. ಈ ಕಾರಣದಿಂದ ತಂದೆ ತಾಯಿಗಳು ಮಕ್ಕಳನ್ನು ಬೆಳೆಸುವಾಗ ಎಚ್ಚರಿಕೆ ವಹಿಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಮಕ್ಕಳ ಎದುರಿಗೆ ತಪ್ಪುಗಳನ್ನು ಮಾಡಬಾರದು. ಫೋಷಕರು ಜೀವನದಲ್ಲಿ ತೋರಿಸುವ ಮೌಲ್ಯಗಳೇ ಮಕ್ಕಳ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ. ಮಕ್ಕಳಲ್ಲಿ ಗೊಂದಲ, ಅಸಹನೆ, ಅಥವಾ ಮೌಲ್ಯಗಳ ಕೊರತೆ ಉಂಟಾದರೆ, ಅದು ಅವರ ಭವಿಷ್ಯವಷ್ಟೇ ಅಲ್ಲ, ಸಮಾಜದ ಭವಿಷ್ಯವನ್ನು ಪ್ರಶ್ನಿಸುತ್ತದೆ. ಆದ್ದರಿಂದ ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಕೈಜೋಡಿಸಿ, ಮಕ್ಕಳಿಗೆ ಸುರಕ್ಷಿತ, ಮೌಲ್ಯಧಾರಿತ ಮತ್ತು ಪ್ರೇರಣಾದಯಕ ವಾತಾವರಣವನ್ನು ಒದಗಿಸಬೇಕು ಎಂದು ಹೇಳಿದರು.ವೇದಿಕೆಯಲ್ಲಿ ಅರಟ್ ಆ್ಯಡ್ ಆಯತಾನ ಸಂಸ್ಥೆಯ ಅಧ್ಯಕ್ಷ ಟೋನಿ ವಿನ್ಸೆಂಟ್, ಡಯಾಸಿಸನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಾಲ್ಡಾನ, ಖಜಾಂಚಿ ನವೀನ್ ಕುಮಾರ್, ಧರ್ಮಗುರುಗಳಾದ ಜಾನ್ ಡಿಕುನ್ಹಾ, ಗಿಲ್ಬರ್ಟ್ ಡಿಸಿಲ್ವಾ, ವಿಜಯಕುಮಾರ್, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ.ಪಾರ್ವತಿ, ಓಎಲ್‌ವಿ ಚರ್ಚ್ ಕಾರ್ಯದರ್ಶಿ ಶೀಲಾ ಡಿಸೋಜ, ಕಾಲೇಜಿನ ಸಂತ ಜೋಸೆಫರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಅವಿನಾಶ್, ಹಳೆ ವಿದ್ಯಾರ್ಥಿನಿ ಮೆಟಿಲ್ಡಾ ಡಿಸೋಜ ಇದ್ದರು.ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವರ್ಣರಂಜಿತ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.