ನಿವೃತ್ತ ಪಿಎಸ್‌ಐ ಮಹದೇವುಗೆ ಸಿಬ್ಬಂದಿಯ ಬೀಳ್ಕೋಡುಗೆ

| Published : May 02 2025, 12:12 AM IST

ಸಾರಾಂಶ

ಸುಮಾರು ೩೧ ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಮಹದೇವ ಅವರು, ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಾರ್ವಜನಿಕರ ಕುಂದು- ಕೊರತೆಗಳನ್ನು ಆದ್ಯತೆ ಮೇರೆಗೆ ಆಲಿಸಿ ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಈಡೇರಿಸುವ ಕೆಲಸ ಮಾಡಿದ್ದರು.

ಚನ್ನಪಟ್ಟಣ: ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಮಹದೇವ ಸೇವೆಯಿಂದ ಬುಧವಾರ ನಿವೃತ್ತರಾದರು. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಶಿವನಸಮುದ್ರ ಬ್ಲಪ್‌ನವರಾದ, ರೈತಾಪಿ ಕುಟುಂಬದಿಂದ ಬಂದ ಮಹದೇವ ಅವರು ಪೇದೆಯಾಗಿ, ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸಿದ್ದರು, ಇವರ ಸೇವೆಯನ್ನು ಪರಿಗಣಿಸಿದ ಸರ್ಕಾರ ಪಿಎಸ್‌ಐ ಆಗಿ ಬಡ್ತಿ ನೀಡಿತ್ತು. ಸುಮಾರು ೩೧ ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಮಹದೇವ ಅವರು, ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಾರ್ವಜನಿಕರ ಕುಂದು- ಕೊರತೆಗಳನ್ನು ಆದ್ಯತೆ ಮೇರೆಗೆ ಆಲಿಸಿ ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಈಡೇರಿಸುವ ಕೆಲಸ ಮಾಡಿದ್ದರು. ಸೇವೆಯ ಸಂದರ್ಭದಲ್ಲಿ ಹಲವಾರು ಪುರಸ್ಕಾರಗಳು ಸಹ ಮಹಾದೇವ ಅವರಿಗೆ ಸಂದಿದ್ದವು. ಚನ್ನಪಟ್ಟಣ ತಾಲೂಕಿನ ಅಕ್ಕೂರು, ಪುರ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆ ಹೀಗೆ ತಾಲೂಕಿನ ವಿವಿಧ ಠಾಣೆಗಳಲ್ಲಿ ಮಹಾದೇವ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಅವರು ಮಹದೇವ ಅವರಿಗೆ ಶುಭ ಕೋರಿದರು. ಸಂದರ್ಭದಲ್ಲಿ ಮಹದೇವ ಅವರ ಕುಟುಂಬದವರು ಹಾಜರಿದ್ದರು. ೩೧ ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತಿಯಾಗುತ್ತಿರುವ ಮಹದೇವ ಅವರ ಮುಂದಿನ ಜೀವನ ಸಮಾಜ ಸೇವೆಗೆ ಮುಡಿಪಾಗಿಡಲಿ ಎಂದು ಅವರ ಹಿತೈಷಿಗಳು, ಸ್ನೇಹಿತರು ಶುಭಕೋರಿದರು.

ಪೊಟೋ೩೦ಸಿಪಿಟಿ೩: ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸೇವೆಯಿಂದ ನಿವೃತ್ತರಾದ ಮಹದೇವು ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಶುಭಕೋರಿದರು.