ಸಾರಾಂಶ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಜ್ದೂರ ಸಂಘ ಒಕ್ಕೂಟದ ಪದಾಧಿಕಾರಿಗಳು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ಕೇಂದ್ರ ಕಚೇರಿಯಲ್ಲಿ ಕಳೆದ 20 ವರ್ಷಗಳಿಂದ ಒಂದೇ ಹುದ್ದೆಗಳಲ್ಲಿ ಬೇರೂರಿದ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ ಸಂಘ ಒಕ್ಕೂಟ ಆಗ್ರಹಿಸಿದೆ.ಈ ಕುರಿತು ಮಜ್ದೂರ ಸಂಘದ ಬೀದರ್‌ನ ಅಧ್ಯಕ್ಷ ಜಾನಸನ್ ಜನವಾಡಕರ, ಪ್ರಧಾನ ಕಾರ್ಯದರ್ಶಿ ಗುಂಡಪ್ಪ ವಲ್ಲೂರೆ ಮತ್ತು ಭಾರತೀಯ ಮಜ್ದೂರ್ ಸಂಘದ ಪದಾಧಿಕಾರಿಗಳು ಶನಿವಾರ ಬೀದರ್‌ನಲ್ಲಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ವಿಭಾಗೀಯ ಎಲ್ಲ ಕಚೇರಿಗಳಲ್ಲಿ 3ವರ್ಷಕ್ಕಿಂತ ಹೆಚ್ಚು ಅವಧಿಯ ಸೇವೆ ಸಲ್ಲಿಸುತ್ತಿರುವವರ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಕೊಂಡು ತತಕ್ಷಣವೇ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಿ ಸಂಸ್ಥೆ ಸುಧಾರಣೆ ಕೈಕೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಬೀದರ್ ಘಟಕವೊಂದರಲ್ಲಿನ ಹಣಕಾಸು ಶಾಖೆಯಲ್ಲಿ ಅಂದಾಜು ₹79ಲಕ್ಷ ಮತ್ತು ಹುಮನಾಬಾದ ಘಟಕದ ವಿದ್ಯಾರ್ಥಿ ಪಾಸ್ ಹಣ ದುರುಪಯೋಗ, ಭಾಲ್ಕಿ ಘಟಕದಲ್ಲಿನ ಇಂಧನ ಶಾಖೆಯಲ್ಲಿ ಎರಡು ಬಾರಿ ಇಂಧನ ಕಳವು ಹಗರಣ ನಡೆದಿದೆ. ಬಸವಕಲ್ಯಾಣ ಘಟಕದಲ್ಲಿ ಬ್ಯಾಂಕಿಗೆ ಕಟ್ಟಬೆಕಾಗಿರುವ 17 ಲಕ್ಷ ರು. ಗುಳುಂ ಮಾಡಿದ್ದಾರೆ ಎಂದು ಆಪಾದಿಸಿರುವ ಸಂಘ 15 ದಿವಸದೊಳಗಾಗಿ ಕ್ರಮ ಕೈಕೊಳ್ಳದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ವೇಳೆ ಭಾರತೀಯ ಮಜ್ದೂರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಫತ್ತೆಪುರ, ಧನಶೆಟ್ಟಿ ಮಮದಾಪುರ, ಗಣಪತಿ ಸಕ್ರೆಪ್ಪನೋರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.