ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಇದು ಬರಗಾಲದ ಕಾಲ. ಅಧಿಕಾರಿಗಳು ಪರಿಸ್ಥಿತಿ ಗಂಭೀರತೆ ಅರಿತು ಕಾರ್ಯನಿರ್ವಹಿಸದೆ ಜಡ್ಡುಗಟ್ಟಿದ ವಾತಾವರಣದಲ್ಲಿಯೇ ಮುಳುಗಿದ್ರೆ ಸಹಿಸಲು ಆಗದೆಂದು ಸಚಿವ ಟಿ.ರಘುಮೂರ್ತಿ ಎಚ್ಚರಿಕೆ ನೀಡಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ವಿಷಯಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ನಿಖರ ಮಾಹಿತಿಯೊಂದಿಗೆ ಸಭೆಗೆ ಬರಬೇಕು. ಅಂತೆ ಕಂತೆಗಳ ವಿವರ ಬೇಕಿಲ್ಲ. ಬರಗಾಲದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೈ ಚಳಿ ಬಿಟ್ಟು ಕೆಲಸ ಮಾಡಬೇಕು ಎಂದರು.

ಕೃಷಿ ಇಲಾಖೆ ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ತೋಟಗಾರಿಕೆ ಇಲಾಖೆಯೊಂದಿಗೆ ನಿಕಟ ಸಂಪರ್ಕ ಸಾಧಿಸಬೇಕು. ರೈತರ ಸಂಖ್ಯೆ, ಹಿಂಗಾರು-ಮುಂಗಾರು ಬಿತ್ತನೆ ಇಂತಹ ಅಂಶಗಳಲ್ಲಿ ವ್ಯತ್ಯಾಸಗಳಿರಬಾರದು. ಕೆಡಿಪಿ ಸಭೆಗಳಿಗೆ ಬರುವ ಹಾಗೆ ಕೈ ಬೀಸಿಕೊಂಡು ಬರಬಾರದೆಂದು ಸೋಮಾರಿಗಳಿಕೆ ಮಾತಿನ ಚಾಟಿ ಬೀಸಿದರು.

ಚಳ್ಳಕೆರೆ ತಾಲೂಕು 1 ಲಕ್ಷದ 94 ಸಾವಿರ ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು. 98ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ಬಿತ್ತನೆ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಸಭೆ ಮಾಹಿತಿ ನೀಡುವಾಗ, ಸಚಿವರು ಮದ್ಯ ಪ್ರವೇಶಿಸಿ ಮಳೆಯ ಮಾಪನಗಳು ಎಲ್ಲೆಲ್ಲಿವೆ? ಪ್ರಶ್ನಿಸಿದರು.


ಉತ್ತರಿಸಲು ತಡವರಿಸಿದ ಮಂಜುನಾಥ್ ಅವರ ಮೇಲೆ ಸಚಿವರು ನಿಖರ ಮಾಹಿತಿ ತರಬೇಕೆಂದು ಖಡಕ್ ಎಚ್ಚರಿಕೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಎಲ್ಲಿಯೂ ಕಾಣಬಾರದು. ಅಧಿಕಾರಿಗಳು ರೆಡಿಯಾಗಿರಬೇಕು.

ಆರ್‌ಓ ಪ್ಲಾಂಟ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ದುರಸ್ತಿ ಆಗಬೇಕಾದ ಕಡೆಗೆ ತುರ್ತಾಗಿ ಗಮನಹರಿಸಬೇಕು. ನಗರಂಗೆರೆ ಗೋಪನಹಳ್ಳಿ ರಸ್ತೆ ಕಾಮಗಾರಿಗೆ ವೇಗದ ಚಾಲನೆ ನೀಡಬೇಕು ಎಂದು ಸೂಚಿಸಿದರು.

ದೇವರ ಎತ್ತುಗಳಿಗೆ ಮೇವು ವಿತರಣೆ ಸೇರಿದಂತೆ ಬೀದಿ ನಾಯಿಗಳ ಕಾಟಕ್ಕೆ ಮುಕ್ತಿ ನೀಡಬೇಕು. ಬಿಡಾಡಿ ದನಗಳಿಂದ ನಾಗರೀಕರಿಗೆ ವಾಹನ ಚಾಲಕರಿಗೆ ತೊಂದರೆ ಆಗುತ್ತಿರುವುದನ್ನು ತಪ್ಪಿಸಬೇಕು. ಸಿಸಿ ಕ್ಯಾಮೆರಾಗಳ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು.

ಎಪಿಎಂಸಿ ಇಲಾಖೆಯ ರೈತ ಭವನವನ್ನು ಖಾಸಗಿಯವರ ಹೆಸರಿಗೆ ಟೆಂಡರ್ ಕರೆದು ಅವರ ಖಾಸಗಿ ಕಲ್ಯಾಣ ಮಂಟಪ ಎಂಬಂತೆ ಅವರ ಸಂಬಂಧಿಕರ ಹೆಸರು ಇಟ್ಟುಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಕ್ಷೇತ್ರದಲ್ಲಿ ಈ ರೀತಿ ಆಗಿದೆ ಎಂಬಂತೆ ಬಿಂಬಿಸಲಾಗುತ್ತದೆ. ಅಧಿಕಾರಿಗಳು ಮಾಡುವ ತಪ್ಪಿಗೆ ನಾವುಗಳು ತೆಲೆ ತಗ್ಗಿಸಬೇಕಾಗುತ್ತದೆ. ಅಧಿಕಾರಿಗಳು ಕೆಲಸ ಮಾಡುವುದಾದರೆ ಮಾಡಿ. ಇಲ್ಲವಾದರೆ ಆರಾಮ ಇರುವ ಕಡೆಗೆ ಹೋಗಿ ಎಂದು ಹೇಳಿದರು.

ಚಳ್ಳಕೆರೆ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಅಧಿಕಾರಿಗಳ ನೂರಾರು ಸಭೆ ಮಾಡಿದ್ದರು. ಆದರೆ, ಸಚಿವರಾಗಿ ಮೊದಲ ಬಾರಿಗೆ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಚಳ್ಳಕೆರೆಯಲ್ಲಿ ನಡೆಸಿದ್ದು ವಿಶೇಷವಾಗಿತ್ತು. ಜಿಲ್ಲಾ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಆಗಮಿಸಿದ್ದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಸಿಇಓ ಆಕಾಶ್, ಬೋವಿ ನಿಗಮದ ಅಧ್ಯಕ್ಷ ಡಾ. ರಾಮಪ್ಪ, ಗ್ಯಾರೆಂಟಿ ಯೋಜನೆ ಜಿಲ್ಲಾಧ್ಯಕ್ಷ ಶಿವಣ್ಣ, ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಂಜುನಾಥ್, ಕೆಡಿಪಿ ಸದಸ್ಯ ಮೀರಾಸಾಬಿಹಳ್ಳಿ ರಂಗಸ್ವಾಮಿ, ಸಚಿವರ ಆಪ್ತ ಕಾರ್ಯದರ್ಶಿ ಸೈಯ್ಯದ್ ಇಸಾಕ್ ಇದ್ದರು.