ಎಪಿಎಂಸಿ ಆಡಳಿತ ಮಂಡಳಿ ಕಳೆದ ಐದು ತಿಂಗಳ ಹಿಂದೆಯೇ ತೆರವಿಗೆ ತಿಳಿವಳಿಕೆ ಪತ್ರ ನೀಡಿದ್ದರೂ ಗೂಡಂಗಡಿ ಮಾಲೀಕರು ಮಾತ್ರ ಡೋಂಟ್ ಕೇರ್

ಏಕನಾಥ ಮೆದಿಕೇರಿ ಹನುಮಸಾಗರ

ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿನ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ರಾಜಕೀಯ ಗ್ರಹಣ ಹಿಡಿದಂತಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವ, ಅಪಘಾತಗಳಿಗೆ ಆಹ್ವಾನ ನೀಡುತ್ತಿರುವ ಈ ಅಂಗಡಿಗಳನ್ನು ತೆರವುಗೊಳಿಸಲು ಎಪಿಎಂಸಿ ಅಧಿಕಾರಿಗಳು ಮುಂದಾಗಿದ್ದರೂ ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ನನೆಗುದಿಗೆ ಬಿದ್ದಿದೆ.

ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮುಂಭಾಗದ ತಂತಿ ಬೇಲಿ ಆಕ್ರಮಿಸಿಕೊಂಡು ಸುಮಾರು 33ಕ್ಕೂ ಹೆಚ್ಚು ಗೂಡಂಗಡಿ ತಲೆ ಎತ್ತಿವೆ. ಇದರಿಂದ ಮಾರುಕಟ್ಟೆಗೆ ಆಗಮಿಸುವ ರೈತರಿಗೆ ಮತ್ತು ಸಾರ್ವಜನಿಕರಿಗೆ ಒಳ ಹೋಗಲು ಹರಸಾಹಸ ಪಡುವಂತಾಗಿದೆ.

ಈ ಕುರಿತು ಎಪಿಎಂಸಿ ಆಡಳಿತ ಮಂಡಳಿ ಕಳೆದ ಐದು ತಿಂಗಳ ಹಿಂದೆಯೇ ತೆರವಿಗೆ ತಿಳಿವಳಿಕೆ ಪತ್ರ ನೀಡಿದ್ದರೂ ಗೂಡಂಗಡಿ ಮಾಲೀಕರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಅಧಿಕಾರಿಗಳ ಈ ಜಾಣ ಕುರುಡುತನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜನಪ್ರತಿನಿಧಿಗಳ ಶಕ್ತಿ ಪ್ರದರ್ಶನ?: ಅಂಗಡಿ ತೆರವುಗೊಳಿಸಲು ಅಧಿಕಾರಿಗಳು ಸನ್ನದ್ಧರಾದಾಗಲೆಲ್ಲ ಗೂಡಂಗಡಿ ಮಾಲೀಕರು ಜನಪ್ರತಿನಿಧಿಗಳ ಮೊರೆ ಹೋಗುತ್ತಿದ್ದಾರೆ. ರಾಜಕೀಯ ನಾಯಕರ ಮಧ್ಯ ಪ್ರವೇಶದಿಂದ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಾಗದೆ ಅಸಹಾಯಕರಾಗಿದ್ದಾರೆ. ಇಲಾಖೆಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ಪಪಂ ಮತ್ತು ಪೊಲೀಸ್ ಇಲಾಖೆಯ ಸಹಕಾರ ಕೋರಿದ್ದರೂ ದಿನಾಂಕ ನಿಗದಿಯಾಗದ ನೆಪದಲ್ಲಿ ತೆರವು ಪ್ರಕ್ರಿಯೆ ವಿಳಂಬವಾಗುತ್ತಿದೆ.

ಹಣ ಮಧ್ಯವರ್ತಿಗಳ ಪಾಲು: ಅನಧಿಕೃತ ಅಂಗಡಿಗಳಿಂದ ಸರ್ಕಾರ ಅಥವಾ ಎಪಿಎಂಸಿಗೆ ಒಂದು ರೂಪಾಯಿ ತೆರಿಗೆ ಸಂದಾಯವಾಗುತ್ತಿಲ್ಲ. ಆದರೆ, ಪ್ರಭಾವಿ ವ್ಯಕ್ತಿಗಳು ಇಲ್ಲಿ ಶೆಡ್‌ ನಿರ್ಮಿಸಿ ಬಡ ವ್ಯಾಪಾರಿಗಳಿಂದ ತಿಂಗಳಿಗೆ ₹1,500 ರಿಂದ ₹5,000 ವರೆಗೆ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಇದು ಸರ್ಕಾರದ ಬೊಕ್ಕಸಕ್ಕೆ ನೇರ ನಷ್ಟ ಉಂಟು ಮಾಡುತ್ತಿದ್ದಾರೆ.

ಎಪಿಎಂಸಿ ಮುಂದಿರುವ ಅನಧಿಕೃತ ಅಂಗಡಿಗಳಿಗೆ ಈಗಾಗಲೇ ಅಂತಿಮ ನೋಟಿಸ್ ನೀಡಲಾಗಿದೆ. ಪಪಂ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಶೀಘ್ರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಕುಷ್ಟಗಿ ಎಪಿಎಂಸಿ ಕಾರ್ಯದರ್ಶಿ ಸುರೇಶ ತಂಗನೂರು ತಿಳಿಸಿದ್ದಾರೆ.