ಕಾವೇರಿ ನದಿ ಪಾತ್ರದಲ್ಲಿ ಅಸ್ಥಿ ವಿಸರ್ಜನೆಗೆ ಮಾನದಂಡ ಜಾರಿ: ಡಾ.ಕುಮಾರ

| Published : Aug 15 2025, 01:00 AM IST

ಸಾರಾಂಶ

ಕಾವೇರಿ ನದಿ ಪಾತ್ರದ ಗೋಸಾಯಿ ಘಾಟ್, ಕಾವೇರಿ ಸಂಗಮ, ಪಶ್ಚಿಮ ವಾಹಿನಿ, ಸ್ನಾನ ಘಟ್ಟಗಳಲ್ಲಿ ನಾಲ್ಕು ಸ್ಥಳಗಳಲ್ಲಿ ಅಸ್ಥಿ ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಏಜೆನ್ಸಿ ಅವರು ಸ್ನಾನ ಮಾಡಿದ ನಂತರ ಸಾರ್ವಜನಿಕರಿಗೆ ಬಟ್ಟೆ ಬದಲಾಯಿಸಲು ಕೊಠಡಿಗಳ ವ್ಯವಸ್ಥೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆ ಮಾಡಿ ನೀರು ಮಲೀನಗೊಳಿಸುವುದನ್ನು ತಡೆಗಟ್ಟಲು ನಿಯಮ ರೂಪಿಸಿ ಏಜೆನ್ಸಿಗೆ ಟೆಂಡರ್ ನೀಡಲಾಗಿದೆ. ಸಾರ್ವಜನಿಕರು ನಿಯಮ ಅನುಸರಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಡನೆ ಗುರುವಾರ ಸಭೆ ನಡೆಸಿ, ಕಾವೇರಿ ನದಿ ಪಾತ್ರದಲ್ಲಿ ಅಸ್ಥಿ ವಿಸರ್ಜನೆ ಸೇರಿದಂತೆ ಸ್ನಾನ ಮಾಡಿದ ನಂತರ ಬಟ್ಟೆಗಳನ್ನು ನೀರಿಗೆ ಬಿಸಾಡುವುದು ಸಾಮಾನ್ಯ. ಕಾವೇರಿ ನದಿ ಪಾತ್ರದಲ್ಲಿ ಮಾಲಿನ್ಯ ತಡೆಗಟ್ಟಲು ಅಸ್ಥಿ ವಿಸರ್ಜನೆಗೆ ದರ ನಿಗದಿ ಪಡಿಸಿ ನೋಡಿಕೊಳ್ಳಲು ಏಜೆನ್ಸಿಯನ್ನು ನೇಮಕ ಮಾಡಲಾಗಿದೆ ಎಂದರು.

ಕಾವೇರಿ ನದಿ ಪಾತ್ರದ ಗೋಸಾಯಿ ಘಾಟ್, ಕಾವೇರಿ ಸಂಗಮ, ಪಶ್ಚಿಮ ವಾಹಿನಿ, ಸ್ನಾನ ಘಟ್ಟಗಳಲ್ಲಿ ನಾಲ್ಕು ಸ್ಥಳಗಳಲ್ಲಿ ಅಸ್ಥಿ ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಏಜೆನ್ಸಿ ಅವರು ಸ್ನಾನ ಮಾಡಿದ ನಂತರ ಸಾರ್ವಜನಿಕರಿಗೆ ಬಟ್ಟೆ ಬದಲಾಯಿಸಲು ಕೊಠಡಿಗಳ ವ್ಯವಸ್ಥೆ ಮಾಡಬೇಕು. ಹಸಿ ಬಟ್ಟೆಗಳು, ಹೂವು, ಹಣ್ಣು ಇತರೆ ಪದಾರ್ಥಗಳನ್ನು ವಿಲೇವಾರಿ ಮಾಡಲು ಅಗತ್ಯ ಕಸದ ಬುಟ್ಟಿಗಳನ್ನು ಇಡಬೇಕು. ಇವುಗಳ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು‌.

ಅಧಿಕಾರಿಗಳು ಅಸ್ಥಿ ವಿಸರ್ಜನೆಗೆ ನಿಗದಿಪಡಿಸಿರುವ ಸ್ಥಳಗಳನ್ನು ಹೊರತು ಪಡಿಸಿ ಸಾರ್ವಜನಿಕರು ಕಾವೇರಿ ನದಿ ಪಾತ್ರದ ಬೇರೆ ಸ್ಥಳಗಳಲ್ಲಿ ಅಸ್ಥಿ ವಿಸರ್ಜನೆ ಮಾಡದಂತೆ ಪರಿಶೀಲನೆ ನಡೆಸಿ ಎಂದರು.

ಜಲ ಮೂಲಗಳನ್ನು ಕಾಪಾಡುವುದು ಕೇವಲ ಸರ್ಕಾರದ ಕರ್ತವ್ಯವಲ್ಲ. ಸಾರ್ವಜನಿಕರು ಸಹ ಸಾಮಾಜಿಕ ಹೊಣೆಗಾರಿಕೆಯಿಂದ ಜಲ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡಬೇಕು. ಹರಿಯವ ನದಿಗಳಿಗೆ ಕೆರೆ ಕಟ್ಟೆಗಳಿಗೆ ತ್ಯಾಜ್ಯ ವಸ್ತುಗಳನ್ನು ಹಾಕುವುದನ್ನು ನಿಲ್ಲಿಸುವ ಜೊತೆಗೆ ಅವುಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಅಧಿಕಾರಿಗಳು ಕಾವೇರಿ ನದಿ ಪಾತ್ರದಲ್ಲಿ ಅಸ್ಥಿ ವಿಸರ್ಜನೆ ಮಾಡುವ ಅರ್ಚಕರ ಪಟ್ಟಿಯನ್ನು ಸಿದ್ಧಪಡಿಸಿ ಪುರೋಹಿತರೊಂದಿಗೆ ಸಭೆ ನಡೆಸಿ ಅವರಿಗೆ ಯಾವುದೇ ತ್ಯಾಜ್ಯಗಳನ್ನು ನೀರಿಗೆ ಬಿಸಾಡದಂತೆ ತಿಳಿವಳಿಕೆ ನೀಡಿ ಎಂದರು

ಅಸ್ಥಿ ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಶೌಚಾಲಯ ವ್ಯವಸ್ಥೆ, ಹಸಿ ಬಟ್ಟೆಗಳನ್ನು ತ್ಯಾಜ್ಯಗಳನ್ನು ಬಿಸಾಡಲು ಕುಸದ ಬುಟ್ಟಿ ಇರಿಸಿ, ಸಾರ್ವಜನಿಕರಿಗೆ ತ್ಯಾಜ್ಯಗಳನ್ನು ನೀರಿಗೆ ಎಸೆಯಬಾರದು ಎಂಬುದನ್ನು ಧ್ವನಿ ವರ್ಧಕ ಬಳಸುವ ಮೂಲಕ ಜಾಗೃತಿ ಮೂಡಿಸಿ ಎಂದರು.

ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ನಾವು ನಮ್ಮ ಜಲ ಸಂಪನ್ಮೂಲವನ್ನು ಸಂರಕ್ಷಣೆ ಮಾಡದೆ ಹೋದರೆ ನಮ್ಮ ಮುಂದಿನ ಪೀಳಿಗೆ ನೀರಿಲ್ಲದೆ ಪರದಾಡುತ್ತಿರುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ಟಿ.ಎನ್.ನರಸಿಂಹಮೂರ್ತಿ, ನಗರಾಭಿವೃದ್ಧಿ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರತಾಪ್, ನಗರಸಭೆ ಪೌರಾಯುಕ್ತೆ ಪಂಪಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.