ಕುಂದೂರು ಬೆಟ್ಟದ ಸುಕ್ಷೇತ್ರದಲ್ಲಿ ಗುರುಕುಲ ಆರಂಭಿಸಿ: ನಿರ್ಮಲಾನಂದನಾಥ ಶ್ರೀಗಳ ಸಲಹೆ

| Published : May 04 2025, 01:36 AM IST

ಕುಂದೂರು ಬೆಟ್ಟದ ಸುಕ್ಷೇತ್ರದಲ್ಲಿ ಗುರುಕುಲ ಆರಂಭಿಸಿ: ನಿರ್ಮಲಾನಂದನಾಥ ಶ್ರೀಗಳ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಮಠಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಜೊತೆಗೆ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಮಠಗಳು ಸಮಾಜವನ್ನು ಜಾಗೃತಗೊಳಿಸುವುದಲ್ಲದೆ ಸರ್ವರಿಗೂ ಸಮಾನತೆ ಕಲ್ಪಿಸಿ ಜನರಿಗೆ ಉತ್ತಮ ಸಂಸ್ಕಾರ ನೀಡಲಿವೆ. ದೇಶದಲ್ಲಿ ಮಠಗಳ ಪರಂಪರೆ, ಸೇವೆಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅರ್ಥಿಕ, ಶೈಕ್ಷಣಿಕವಾಗಿ ಬೆಳೆಯಲು ದಾರಿದೀಪವಾಗಿವೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸುಕ್ಷೇತ್ರ ರಸಸಿದ್ದೇಶ್ವರ ಮಠದಿಂದ ಗುರುಕುಲ ಆರಂಭಿಸುವಂತೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾ ಸ್ವಾಮಿಗಳು ಸಲಹೆ ನೀಡಿದರು.

ತಾಲೂಕಿನ ಇತಿಹಾಸ ಪ್ರಸಿದ್ಧ ಕುಂದೂರು ಬೆಟ್ಟದ ಸುಕ್ಷೇತ್ರ ಶ್ರೀರಸಸಿದ್ದೇಶ್ವರ ಮಠದ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಮಠದ ಶ್ರೀಗಳನ್ನು ಅಭಿನಂದಿಸಿ ಮಾತನಾಡಿ, ಕುಂದೂರು ಬೆಟ್ಟದ ತಪಲಿನಲ್ಲಿ ಮರಗಿಡಗಳ ನೆರಳಿನಲ್ಲಿ ಶ್ರೀಮಠ ಉತ್ತಮ ವಾತವಾರಣ ಹೊಂದಿದೆ ಎಂದರು.

ಕುಂದೂರು ಬೆಟ್ಟದ ವೀಕ್ಷಣೆ ಮಾಡಿ ಬೆಟ್ಟದ ಐತಿಹಾಸಿಕತೆ ಬಗ್ಗೆ ಮಾಹಿತಿ ಪಡೆದ ಶ್ರೀಗಳು ಇಂತಹ ವಾತಾವರಣದಲ್ಲಿ ಗುರುಕುಲ ಆರಂಭಿಸಿ ಬಡ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡಿದರೆ ಮಠದ ಪರಂಪರೆ ಬೆಳೆಯುವ ಜೊತೆಗೆ ಶ್ರೀಮಠವು ಅಭಿವೃದ್ಧಿಯಾಗಲಿದೆ ಎಂದರು.

ಮಠಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಜೊತೆಗೆ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಮಠಗಳು ಸಮಾಜವನ್ನು ಜಾಗೃತಗೊಳಿಸುವುದಲ್ಲದೆ ಸರ್ವರಿಗೂ ಸಮಾನತೆ ಕಲ್ಪಿಸಿ ಜನರಿಗೆ ಉತ್ತಮ ಸಂಸ್ಕಾರ ನೀಡಲಿವೆ. ದೇಶದಲ್ಲಿ ಮಠಗಳ ಪರಂಪರೆ, ಸೇವೆಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅರ್ಥಿಕ, ಶೈಕ್ಷಣಿಕವಾಗಿ ಬೆಳೆಯಲು ದಾರಿದೀಪವಾಗಿವೆ ಎಂದರು.

ಇದೇ ವೇಳೆ ರಸಸಿದ್ದೇಶ್ವರ ಮಠಾಧ್ಯಕ್ಷ ನಂಜುಂಡಸ್ವಾಮಿಗಳು ಹಾಗೂ ಪಟ್ಟಾಧಿಕಾರ ಸ್ವೀಕರಿಸಿದ ನೂತನ ಶ್ರೀ ರುದ್ರಮಹಾಂತ ಸ್ವಾಮಿಗಳನ್ನು ಅಭಿನಂದಿಸಿದರು. ಆದಿಚುಂಚನಗಿರಿ ಶ್ರೀಗಳನ್ನು ಶ್ರೀಮಠದಿಂದ ಅಭಿನಂದಿಸಲಾಯಿತು.

ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡ ಹಾಡ್ಲಿ ಪ್ರಕಾಶ್, ಮಹಾಂತೇಶ್ವರ ಜ್ಞಾನ ವಿಕಾಸ ಸಮಿತಿ ವಕೀಲ ಎಂ.ಎಸ್.ಶ್ರೀಕಂಠಸ್ವಾಮಿ, ಬಬ್ರುವಾಹನ, ಶಿವಕುಮಾರ್, ಭಕ್ತರು, ಹಲವು ಗಣ್ಯರು ಉಪಸ್ಥಿತರಿದ್ದರು.

ಕಾಶ್ಮೀರದ ಪೆಹಲ್ಗಾಂನಲ್ಲಿ ದಾಳಿ ಖಂಡಿಸಿ ಜಾಮಿಯ ಮಸ್ಜಿದ್ ಕಮಿಟಿ ಮನವಿ ಸಲ್ಲಿಕೆ

ಮದ್ದೂರು:

ಕಾಶ್ಮೀರದ ಪೆಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ಖಂಡಿಸಿ ಪಟ್ಟಣದ ಜಾಮಿಯ ಮಸ್ಜಿದ್ ಕಮಿಟಿ ವತಿಯಿಂದ ಪಟ್ಟಣದ ತಾಲೂಕು ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮುಖಂಡ ಆದಿಲ್ ಆಲಿ ಖಾನ್ ಮಾತನಾಡಿ, ಪೆಹಲ್ಗಾಂನಲ್ಲಿ ನಡೆದಿರುವ ಉಗ್ರರ ದಾಳಿಯನ್ನು ನಾವು ತೀವ್ರ ಖಂಡಿಸುತ್ತೇವೆ. ಈ ಕೃತ್ಯದಲ್ಲಿ ಭಾಗಿಯಾದ ಭಯೋತ್ಪಾದಕರನ್ನು ಹುಡುಕಿ ಶಿಕ್ಷಿಸಬೇಕು ಹಾಗೂ ಆಜಾದ್ ಕಾಶ್ಮೀರವನ್ನು ಪಾಕಿಸ್ತಾನದ ಹಿಡಿತದಿಂದ ಬೇರ್ಪಡಿಸಿ ಭಾರತದಲ್ಲಿ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಈ ಕೃತ್ಯವನ್ನು ಬಳಸಿಕೊಂಡು ಭಾರತದ ಎಲ್ಲಾ ಮುಸ್ಲಿಂರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಜಾತಿವಾದಿಗಳ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತೇವೆ. ನಾವು ಎಲ್ಲಾ ಭಾರತೀಯರು ಕಷ್ಟದ ಸಮಯದಲ್ಲಿ ಒಗ್ಗಟ್ಟಾಗಿ ಇರಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ಈ ವೇಳೆ ಜಾಮಿಯ ಮಸ್ಜಿದ್ ಕಮಿಟಿ ಆದಿಲ್ ಆಲಿ ಖಾನ್, ಘನಿ ಷರೀಪ್, ಪವೀಜ್ ಖಾನ್, ಮಹಮದ್ ನಾಸೀರ್, ಮಹಮದ್ ರಿಯಾಜ್, ನವೀದ್ ಖಾನ್, ಮುನ್ಸಿಪ್ ಪಾಷ, ಇಂತಿಯಾಜ್ವುಲ್ಲಾ ಖಾನ್, ಹಜರತ್ ಸೈಯದ್ ಅಹಮದ್, ಅಯೂಬ್ ಖಾನ್, ಮಹಮದ್ ಅಕ್ಮಲ್, ಜಮೀರ್ಪಾಷ್, ನಿಸಾರ್ ಪಾಷ ಇದ್ದರು.