ದರೋಜಿ-ಬಾಗಲಕೋಟೆ ರೈಲು ಮಾರ್ಗ ಕಾರ್ಯಾರಂಭ ಮಾಡಿ

| Published : Jul 14 2024, 01:34 AM IST

ಸಾರಾಂಶ

ದರೋಜಿ-ಬಾಗಲಕೋಟೆ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ತ್ವರಿತವಾಗಿ ಕಾರ್ಯಾರಂಭ ಮಾಡಬೇಕು ಎಂದು ಕನಕಗಿರಿ ತಾಲೂಕು ಹೋರಾಟ ಸಮಿತಿಯಿಂದ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಕನಕಗಿರಿ: ಬಹುದಿನಗಳ ಬೇಡಿಕೆಯಾಗಿರುವ ದರೋಜಿ-ಬಾಗಲಕೋಟೆ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ತ್ವರಿತವಾಗಿ ಕಾರ್ಯಾರಂಭ ಮಾಡಬೇಕು ಎಂದು ತಾಲೂಕು ಹೋರಾಟ ಸಮಿತಿಯಿಂದ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಹೋರಾಟ ಸಮಿತಿಯ ಸಹ ಸಂಚಾಲಕ ದುರ್ಗಾದಾಸ ಯಾದವ್ ಮಾತನಾಡಿ, ದರೋಜಿ-ಬಾಗಲಕೋಟೆ ರೈಲು ಮಾರ್ಗದ ಬೇಡಿಕೆ ಹಲವು ವರ್ಷಗಳಿಂದ ಇದೆ. ಹನುಮ ಜನ್ಮಸ್ಥಳ ಅಂಜನಾದ್ರಿ, ವಿಜಯನಗರದ ಸಾಮಂತರ ನಾಡು ಕನಕಗಿರಿ, ಗ್ರಾನೈಟ್ ಉದ್ಯಮಕ್ಕೆ ಹೆಸರಾದ ಇಲಕಲ್, ಹುನಗುಂದ ಮಾರ್ಗವಾಗಿ ಬಾಗಲಕೋಟೆ ವರೆಗೆ ರೈಲು ಮಾರ್ಗ ಪ್ರಾರಂಭಿಸಿದರೆ ಈ ಭಾಗದ ಪ್ರವಾಸೋದ್ಯಮ, ಉದ್ಯಮ ಹಾಗೂ ವ್ಯಾಪಾರೀಕರಣ ಉನ್ನರೀಕರಣಗೊಳ್ಳಲಿದೆ. ಅಲ್ಲದೇ ಗಂಗಾವತಿಯಲ್ಲಿ ರೈಲ್ವೆ ಜಂಕ್ಷನ್ ಆದರೆ ನೇರವಾಗಿ ತಿರುಪತಿ, ಚೆನ್ನೈ, ಬೆಂಗಳೂರು, ಮಹಾರಾಷ್ಟ್ರ, ಹೈದರಾಬಾದ್‌ಗೆ ಸಂಪರ್ಕ ಸಿಗಲಿದೆ. ಮುಂದಿನ ದಿನಮಾನಗಳಲ್ಲಿ ಗಂಗಾವತಿ ನಗರ ಪ್ರಮುಖ ವ್ಯಾಪಾರ ಕೇಂದ್ರವಾಗಲಿದೆ ಎಂದರು.

ಮನವಿ ಸ್ವೀಕರಿಸಿ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ದರೋಜಿ-ಬಾಗಲಕೋಟೆ ವರೆಗೂ ರೈಲ್ವೆ ಸರ್ವೆ ಮುಗಿದಿದ್ದು, ಅದಕ್ಕೆ ಅನುದಾನ ಮೀಸಲು ಇಡಲಾಗಿದೆ. ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವರಾದ ವಿ. ಸೋಮಣ್ಣ ಅವರಿಗೂ ಈ ಮಾರ್ಗವನ್ನು ಕಾರ್ಯರೂಪಕ್ಕೆ ತರುವಂತೆ ಒತ್ತಾಯಿಸುವುದಾಗಿ ಹೇಳಿದರು.

ಪ್ರಮುಖರಾದ ದೇವಪ್ಪ ಮಲ್ಲಿಗೆವಾಡ, ಮೃತ್ಯುಂಜಯಸ್ವಾಮಿ ಭೂಸನೂರಮಠ, ಚೇತನ ಯಾದವ್, ಬಸವರಾಜ ತುರವಿಹಾಳ, ರಂಗಣ್ಣ ಕುರುಬೂರು, ನಾರಾಯಣಪ್ಪ ಐಲಿ, ಷಣ್ಮುಖಪ್ಪ ಐಲಿ, ಬಸವರಾಜಗೌಡ ಪಾಟೀಲ್ ಇತರರು ಇದ್ದರು.