ಸಾರಾಂಶ
ಬಾಗಲಕೋಟೆ : ಜಿಲ್ಲೆಯ ಮಲಪ್ರಭಾ ಹಾಗೂ ಘಟಪ್ರಭಾ ನದಿ ಪಾತ್ರದ ಒತ್ತುವರಿ ಹಾಗೂ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೂಡಲೇ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನದಿ ತೀರಗಳಲ್ಲಿನ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭೂದಾಖಲೆ ಇಲಾಖೆಯವರು ಈಗಾಗಲೇ ಅಳತೆ ಕಾರ್ಯ ಕೈಗೊಂಡಿದೆ. ಯಾವ ಯಾವ ಗ್ರಾಮದಲ್ಲಿ ಎಷ್ಟು ಒತ್ತುವರಿಯಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದ್ದರೆ, ನೀರಾವರಿ ನಿಗಮದ ಅಧಿಕಾರಿಗಳಿಗೆ ಒತ್ತುವರಿ ತೆರವುಗೊಳಿಸಿ, ನದಿ ಪಾತ್ರದ ಗುಂಟ ಎರಡೂ ಬದಿಗಳಲ್ಲಿ ಬಯೋ ಪೆನಸಿಂಗ್ ಮತ್ತು ಟ್ರೆಂಚ್ ಅಳವಡಿಸಿ, ಹಂತ ಹಂತವಾಗಿ ಕಾರ್ಯಾಚರಣೆ ಕೈಗೊಳ್ಳಲು ಸೂಚಿಸಿದರು.
ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗಿಡಗಳನ್ನು ನೆಡಲು ಹಾಗೂ ಮತ್ತೆ ನದಿ ಪಾತ್ರದಲ್ಲಿ ಒತ್ತುವರಿಯಾಗದಂತೆ ಕ್ರಮಕೈಗೊಳ್ಳುವ ಕುರಿತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿ, ಕೈಗೊಂಡ ಕ್ರಮದ ಬಗ್ಗೆ ವರದಿ ಸಹ ಸಲ್ಲಿಸಲು ಸೂಚಿಸಿದರು. ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೂಡಲೇ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಭೂದಾಖಲೆ ಇಲಾಖೆಯ ಉಪ ನಿರ್ದೇಶಕ ರವಿಕುಮಾರ ಎಂ ಅವರು, ಜಲ್ಲೆಯಲ್ಲಿ ಒಟ್ಟು 268 ಕೆರೆಗಳಿದ್ದು, ಈಗಾಗಲೇ ಅಳತೆ ಕಾರ್ಯ ಕೈಗೊಳ್ಳಲಾಗಿದೆ. ಅದರಲ್ಲಿ 70 ಕೆರೆಗಳಲ್ಲಿ ಒತ್ತುವರಿ ಆಗಿರುವದನ್ನು ಗುರುತಿಸಲಾಗಿದೆ. ಈ ಬಗ್ಗೆ ಕಡತಗಳನ್ನು ಈಗಾಗಲೇ ಸಂಬಂಧಿಸಿದ ಇಲಾಖೆಗೆ ನೀಡಲಾಗಿದೆ. ಸದ್ಯಕ್ಕೆ 31 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದ್ದು, ಇನ್ನೂ 39 ಕೆರೆಗಳ ಒತ್ತುವರಿ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಸಭೆಗೆ ತಿಳಿಸಿದರು.
ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೆರೆ ಒತ್ತುವರಿ ತೆರವುಗೊಳಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದ ಜಿಲ್ಲಾಧಿಕಾರಿಗಳು, ಕೆರೆ ಒತ್ತುವರಿ ತೆರವುಗೊಳಿಸಿದ ನಂತರ ಕೆರೆ ಸುತ್ತಲೂ ಪುನಃ ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಲು ಪಿಆರ್‌ಡಿ ಮತ್ತು ಸಣ್ಣ ನೀರಾವರಿ ಇಲಾಖೆಗೆ ಸೂಚಿಸಿದರು. ಈಗಾಗಲೇ ಒತ್ತುವರಿ ತೆರವುಗೊಳಿಸಿದ ಕೆರೆಗಳ ವರದಿಯನ್ನು ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ, ಜಿಪಂ ಎಂಜಿನಿಯರ್ ವಿಭಾಗದ ಅಭಿಯಂತರರು ಹಾಗೂ ಸಹಾಯಕ ಭೂದಾಖಲೆಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.