23ರಂದು ಪರಿಸರ ಸಂರಕ್ಷಣೆ ಕುರಿತು ರಾಜ್ಯ ಸಮ್ಮೇಳನ

| Published : Jun 06 2024, 12:31 AM IST

ಸಾರಾಂಶ

ಶಿರಸಿಯಲ್ಲಿ ನಡೆಯುವ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ಕುರಿತ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ವಿಷಯ ತಜ್ಞರು, ಸಾಮಾಜಿಕ ಮುಖಂಡರು, ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಭಟ್ಕಳ: ವೃಕ್ಷಲಕ್ಷ ಆಂದೋಲನದ ವತಿಯಿಂದ ಪರಿಸರ ಸಂರಕ್ಷಣೆ- ಸುಸ್ಥಿರ ಅಭಿವೃದ್ಧಿ ಕುರಿತ ರಾಜ್ಯ ಸಮ್ಮೇಳನವನ್ನು ಜೂ. 23ರಂದು ಶಿರಸಿಯ ರಾಘವೇಂದ್ರ ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿರಸಿಯಲ್ಲಿ ನಡೆಯುವ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ಕುರಿತ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ವಿಷಯ ತಜ್ಞರು, ಸಾಮಾಜಿಕ ಮುಖಂಡರು, ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ರಾಜ್ಯ ದೇಶದ ಪರಿಸರ ಸಂರಕ್ಷಣೆ ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜಸೇವಾ ಕಾರ್ಯಗಳಲ್ಲಿ ನಿರಂತರವಾಗಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ಹಿರಿಯ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಅವರಿಗೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

ಸಮಾವೇಶದಲ್ಲಿ ರಾಜ್ಯ ಮಟ್ಟದ ಪರಿಸರ ಕಾರ್ಯಕರ್ತರ ಸಮಾವೇಶ, ಅನಂತ ಹೆಗಡೆ ಅಶೀಸರ ಅಭಿನಂದನಾ ಗ್ರಂಥ ವೃಕ್ಷಮಿತ್ರ ಲೋಕಾರ್ಪಣೆ, ವೃಕ್ಷಲಕ್ಷ ಪ್ರಶಸ್ತಿ ಪ್ರದಾನ, ವೃಕ್ಷಲಕ್ಷ ಆಂದೋಲನ ಸಾಗಿಬಂದ ದಾರಿ ಅವಕೋಕನ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಪ್ರಸಕ್ತ ಸವಾಲುಗಳು ಚಿಂತನಗೋಷ್ಠಿ, ಪರಿಸರ ಹೋರಾಟಗಳ ಪ್ರದರ್ಶಿನಿ ಇರಲಿದೆ ಎಂದರು.

ಕಾರ್ಯಕ್ರಮದಲ್ಲಿ ಸೋಂದಾ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಇರಲಿದೆ. ಉದ್ಘಾಟಕರಾಗಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯ ಅತಿಥಿಗಳಾಗಿ ಕೇಂದ್ರ ಸರ್ಕಾರದ ನ್ಯಾಶನಲ್ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ. ಬಿ.ಎನ್. ಗಂಗಾಧರ್, ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಚ.ಮೂ. ಕೃಷ್ಣಶಾಸ್ತ್ರಿ, ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಡಾ. ವಿಜಯಲಕ್ಷ್ಮೀ ದೇಶಮಾನೆ, ವಿಜ್ಞಾನ ಲೇಖಕ ನಾಗೇಶ ಹೆಗಡೆ, ಡಾ. ವಾಮನ ಆಚಾರ್ಯ, ವೈ.ಜಿ. ರಾಮಕೃಷ್ಣ, ಡಾ. ಟಿ.ವಿ. ರಾಮಚಂದ್ರ, ಡಾ. ಎಂ.ಡಿ. ಸುಭಾಶ್ಚಂದ್ರನ್, ಶ್ರೀಧರ ಸಾಗರ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.