ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಅಶೋಕ್‌ ಜಯರಾಂ

| Published : May 05 2024, 02:05 AM IST

ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಅಶೋಕ್‌ ಜಯರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲಿಗೆ ಪ್ರೋತ್ಸಾಹಧನ ನೀಡಿಲ್ಲ. ಬೆಳೆಪರಿಹಾರದ ಹಣವನ್ನು ನೀಡದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಬರದಿಂದ ರೈತರ ಬದುಕು ಜರ್ಜರಿತವಾಗಿದೆ. ಜಾನುವಾರುಗಳಿಗೆ ಮೇವು-ನೀರಿಲ್ಲದಂತಾಗಿದೆ. ತೀವ್ರ ಬರಗಾಲದಿಂದ ಬದುಕಲು ಸಾಧ್ಯವಾಗದಂತಿರುವ ಜಾನುವಾರುಗಳಿಗೆ ಸಕಾಲದಲ್ಲಿ ಮೇವು ಮತ್ತು ನೀರು ಒದಗಿಸುವಂತಹ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಬರ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್‌ ಜಯರಾಂ ಆರೋಪಿಸಿದರು.

ಕೆಆರ್‌ಎಸ್‌ನಲ್ಲಿದ್ದ ನೀರಿದ್ದ ಸಮಯದಲ್ಲಿ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಿ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಜನ-ಜಾನುವಾರುಗಳಿಗೆ ನೀರೊದಗಿಸಲು ಸಾಧ್ಯವಾಗದಂತಹ ಸಂಕಷ್ಟ ಸ್ಥಿತಿಗೆ ಸರ್ಕಾರ ದೂಡಿದೆ. ಡಿಎಂಕೆ ಮೇಲಿನ ವ್ಯಾಮೋಹಕ್ಕೊಳಗಾಗಿ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವ ಮೂಲಕ ಕಾವೇರಿ ಕಣಿವೆ ಪ್ರದೇಶದ ನೀರಿನ ಬವಣೆಗೆ ಕಾಂಗ್ರೆಸ್‌ ಸರ್ಕಾರ ನೇರ ಹೊಣೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.

ಹಾಲಿಗೆ ಪ್ರೋತ್ಸಾಹಧನ ನೀಡಿಲ್ಲ. ಬೆಳೆಪರಿಹಾರದ ಹಣವನ್ನು ನೀಡದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಬರದಿಂದ ರೈತರ ಬದುಕು ಜರ್ಜರಿತವಾಗಿದೆ. ಜಾನುವಾರುಗಳಿಗೆ ಮೇವು-ನೀರಿಲ್ಲದಂತಾಗಿದೆ. ತೀವ್ರ ಬರಗಾಲದಿಂದ ಬದುಕಲು ಸಾಧ್ಯವಾಗದಂತಿರುವ ಜಾನುವಾರುಗಳಿಗೆ ಸಕಾಲದಲ್ಲಿ ಮೇವು ಮತ್ತು ನೀರು ಒದಗಿಸುವಂತಹ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದರು.

ಪ್ರತಿ ಹಳ್ಳಿಗಳಲ್ಲಿ ಜಾನುವಾರುಗಳ ಕುಡಿಯುವ ನೀರಿಗಾಗಿ ನೀರಿನ ತೊಟ್ಟಿಗಳನ್ನು ನಿರ್ಮಿಸುವುದು ಅತ್ಯವಶ್ಯಕವಾಗಿದೆ. ಟ್ಯಾಂಕರ್‌ಗಳ ಮೂಲಕ ನೀರಿನ ತೊಟ್ಟಿಗಳಿಗೆ ನೀರು ತುಂಬಿಸುವ ಕೆಲಸ ತ್ವರಿತವಾಗಿ ನಡೆಯಬೇಕು. ಇಲ್ಲದಿದ್ದರೆ ಬಿಜೆಪಿ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಾನುವಾರುಗಳಿಗೆ ಹಗಲು-ರಾತ್ರಿ ಮೇವು, ಆಹಾರ, ನೀರು, ವಸತಿ ಮತ್ತು ಆರೋಗ್ಯ ನೀಡಲು ವಸತಿ ಶಿಬಿರಗಳನ್ನು ಏರ್ಪಡಿಸಬೇಕು. ರಾಜ್ಯದಲ್ಲಿ 469 ಶಿಬಿರಗಳ ಅವಶ್ಯಕತೆ ಇದ್ದು, ಎಷ್ಟು ಜಿಲ್ಲೆಗಳಲ್ಲಿ ವಸತಿ ಶಿಬಿರಗಳನ್ನು ಆರಂಭಿಸಿದ್ದಾರೆ ಎಂಬುದನ್ನು ತಿಳಿಸುವಂತೆ ಒತ್ತಾಯಿಸಿದರು.

ಹೈನುಗಾರಿಕೆ ರೈತರ ಜೀವನಾಡಿಯಾಗಿದ್ದು ಪ್ರತಿಯೊಂದು ಹಳ್ಳಿಗಳಲ್ಲಿ ಡೈರಿ ಇರುವುದು ಸರಿಯಷ್ಟೇ. ಆದರೆ, ಬಿಸಿಲ ತಾಪದಿಂದ ಡಿಗ್ರಿ ಅಥವಾ ಟೆಸ್ಟ್‌ ಕಡಿಮೆ ಬಂದಿರುವುದರಿಂದ ರೈತರಿಗೆ ತೊಂದರೆ ನೀಡದೆ ಮಾಮೂಲಿ ದರವನ್ನೇ ನೀಡಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಎಚ್‌.ಆರ್‌.ಅಶೋಕ್‌ಕುಮಾರ್‌, ಧರ್ಮ, ಲಿಂಗರಾಜು, ಜವರೇಗೌಡ, ಸಿ.ಟಿ.ಮಂಜುನಾಥ್‌ ಇತರರಿದ್ದರು.

ನಾಳೆ ಜನಪದಗೀತೆ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಮಂಡ್ಯನಗರದಲ್ಲಿರುವ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌, ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ೨೮ನೇ ವರ್ಷದ ಸ್ಮರಣಾರ್ಥ ಮೇ ೬ರಂದು ಬೆಳಗ್ಗೆ ೧೦.೩೦ಕ್ಕೆ ರಾಜ್ಯಮಟ್ಟದ ಜನಪದಗೀತೆ ಸ್ಪರ್ಧೆ ಏರ್ಪಡಿಸಿದೆ.

ಅಧ್ಯಕ್ಷತೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ವಹಿಸಲಿದ್ದು, ಉದ್ಘಾಟನೆಯನ್ನು ರಂಗನಟಿ ಮತ್ತು ಜಾನಪದ ಗಾಯಕಿ ಸವಿತಕ್ಕ ನೆರವೇರಿಸಲಿದ್ದಾರೆ, ವೇದಿಕೆಯಲ್ಲಿ ಪ್ರಾಂಶುಪಾಲ ಡಾ.ಮಂಜುನಾಥ್, ತೀರ್ಪುಗಾರಾಗಿ ರಾಷ್ಟ್ರೀಯ ಜಾನಪದ ಗಾಯಕ ಕೆ.ಆರ್.ರಮೇಶ್, ಆಕಾಶವಾಣಿ ಕಲಾವಿದ ಜಿ.ಜಿ.ನವೀನ್‌ಕುಮಾರ್, ಉಪನ್ಯಾಸಕ ಎಸ್.ಪಿ ಕ್ಯಾತೇಗೌಡ ಹಾಜರಿರುವರು.ಸಂಜೆ ೪-೩೦ಕ್ಕೆ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಿಇಟಿ ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ್ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ವಿ.ಸವಿತಾ, ಪ್ರೊ.ವೀರೇಶ್ ಮತ್ತು ಸದಸ್ಯರು ಪಾಲ್ಗೊಳ್ಳಲಿದ್ದಾರೆ, ಹೆಚ್ಚಿನ ಮಾಹಿತಿಗಾಗಿ ಪ್ರೊ.ನಂದೀಶ್‌ಕುಮಾರ್ ಮೊ. ೯೭೪೩೦೦೨೧೩ ಎಂದು ಪ್ರಕಟಣೆ ತಿಳಿಸಿದೆ.