''ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ'' ಎಂಬ ಘೋಷವಾಕ್ಯದೊಂದಿಗೆ ಬಳ್ಳಾರಿ ವಿಭಾಗಮಟ್ಟದ ಬೃಹತ್ ಜಾಗೃತಿ ಮೆರವಣಿಗೆಯನ್ನು ನ. 6ರಂದು ಕೊಪ್ಪಳ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಹೇಳಿದರು.
ಕೊಪ್ಪಳ: ಬಿಟ್ಟಿ ಭಾಗ್ಯಗಳನ್ನು ನೀಡಿದ್ದೇವೆ ಎಂದು ಹೇಳಿಕೊಂಡಿದ್ದ ರಾಜ್ಯ ಸರ್ಕಾರ ಈಗ ಜನರಿಗೆ ತುಟ್ಟಿ ಭಾಗ್ಯಗಳನ್ನು ನೀಡುವ ಮೂಲಕ ಬೆಲೆ ಏರಿಕೆಯ ಬರೆ ಹಾಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಕೆ ಮಾಡಿದ ಬೆನ್ನಲ್ಲೇ ಬಸ್ ಪ್ರಯಾಣ ದರವನ್ನು ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ವಿಪರೀತವಾಗಿ ಹೆಚ್ಚಿಸಲಾಗಿದೆ. ಇದರಿಂದ ಜನಸಾಮಾನ್ಯರ ಮೇಲೆ ದೊಡ್ಡ ಹೊರೆ ಬಿದ್ದಿದೆ ಎಂದರು.ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಹೊರೆ ಮಾಡುತ್ತಿದೆಯೇ ಹೊರತು ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಕೂಡ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ದುಸ್ಥಿತಿ ಎಷ್ಟರಮಟ್ಟಿಗೆ ತಲುಪಿದೆ ಎಂದರೆ, ಸಾರಿಗೆ ಬಸ್ಗಳಿಗೆ ಬಳಸಿದ ಡೀಸೆಲ್ನ ಬಾಕಿ ಮೊತ್ತವೇ ₹1,111.88 ಕೋಟಿ ಇದೆ. ಈ ಮಾಹಿತಿಯನ್ನು ಸಾರಿಗೆ ಸಚಿವರೇ ನೀಡಿದ್ದಾರೆ. ಶಕ್ತಿ ಯೋಜನೆ ಆರಂಭಿಸಿದ ಸರ್ಕಾರ ಅದಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ನೀಡಬೇಕಿತ್ತು. ಹೆಚ್ಚು ಬಸ್ಗಳನ್ನು ರಸ್ತೆಗಿಳಿಸಬೇಕಿತ್ತು. ಆದರೆ, ಅನೇಕ ಬಸ್ಗಳು ಕೆಟ್ಟು ನಿಂತಿದ್ದರೆ, ಇನ್ನು ಕೆಲವು ಡೀಸೆಲ್ ಇಲ್ಲದೆ ನಿಂತಿವೆ ಎಂದು ದೂರಿದರು.ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಲಿನ ದರ ಹೆಚ್ಚಳದ ಬದಲು ರೈತರಿಗೆ ಸಹಾಯಧನ ನೀಡುವ ಮೂಲಕ ಪ್ರೋತ್ಸಾಹಿಸಿದ್ದರು. ಆದರೆ, ಈಗಿನ ಸರ್ಕಾರ ಹಾಲಿನ ದರ ಹೆಚ್ಚಿಸಿ ರೈತರಿಗೆ ₹7 ನೀಡುವುದಾಗಿ ಹೇಳಿದ್ದರೂ ನೀಡಿಲ್ಲ. ರೈತರಿಗೆ ಈ ಹಿಂದೆ ಇದ್ದ ಸಬ್ಸಿಡಿಯನ್ನೂ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಕ್ಕೆ ನೀಡಿರುವ ಯೋಜನೆಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ಹೋಗಲಿ ಎಂದು ಹೇಳಿದರು.
ನ. 6ರಂದು ಬಿಜೆಪಿ ಬೃಹತ್ ಮೆರವಣಿಗೆ: ''ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ'' ಎಂಬ ಘೋಷವಾಕ್ಯದೊಂದಿಗೆ ಬಳ್ಳಾರಿ ವಿಭಾಗಮಟ್ಟದ ಬೃಹತ್ ಜಾಗೃತಿ ಮೆರವಣಿಗೆಯನ್ನು ನ. 6ರಂದು ಕೊಪ್ಪಳ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ನಗರದ ಶಿರಸಪ್ಪಯ್ಯನ ಮಠದಿಂದ ಮೆರವಣಿಗೆ ಆರಂಭವಾಗಿ ಅಶೋಕ ವೃತ್ತದಲ್ಲಿ ಅಂತ್ಯಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಸಚಿವ ಶ್ರೀರಾಮುಲು, ಶಾಸಕ ಮಹೇಶ ತೆಂಗಿನಕಾಯಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಬಳಿಕ ಬೆಲೆ ಏರಿಕೆ ವಿರುದ್ಧ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸುನೀಲ ಹೆಸರೂರು, ಪ್ರದೀಪ ಹಿಟ್ನಾಳ ಇದ್ದರು.