ಸಾರಾಂಶ
ತುಮಕೂರು : ಮೂವತ್ತು ವರ್ಷಗಳ ಮಾದಿಗರ ಒಳಮೀಸಲಾತಿಗೆ ಸುಪ್ರೀಂಕೋರ್ಟಿನಿಂದ ಅನುಮೋದನೆ ಸಿಕ್ಕರೂ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಒಳ ಮೀಸಲಾತಿಯನ್ನು ಜಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಆಪಾದಿಸಿದ್ದಾರೆ.
ನಗರದ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಮಾದಿಗ ದಂಡೋರ (ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ) ಮಾದಿಗ ವಿದ್ಯಾರ್ಥಿ ಯುವ ಪರಿಷತ್ ಆಶ್ರಯದಲ್ಲಿ ಶ್ರೀಆದಿ ಜಾಂಬವ ಜಯಂತಿ, 7ನೇ ಶೈಕ್ಷಣಿಕ ಜಾಗೃತಿ ಸಮಾವೇಶ, ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ, ಜಿಲ್ಲೆಯ ಮಾದಿಗ ಸಮುದಾಯದ ಜನಗಣತಿ ಅಭಿಯಾನ ಹಾಗೂ ಮಾದಿಗ ಸಮುದಾಯದ ವಧು-ವರರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾದಿಗ ಸಮುದಾಯವು ಸುಮಾರು ವರ್ಷಗಳಿಂದ ಅಂಬೇಡ್ಕರ್ ಅವರು ನೀಡಿದ ಶಿಕ್ಷಣ, ಸಂಘಟನೆ, ಹೋರಾಟದ ಹಾದಿಯಲ್ಲಿ ತಮಗೆ ಬರಬೇಕಾದ ಒಳ ಮೀಸಲಾತಿ ಪಾಲನ್ನು ನೀಡಬೇಕು ಎಂದು ಅನೇಕ ರೀತಿಯ ಸಂಘರ್ಷ ಹೋರಾಟಗಳ ಕಾರಣದಿಂದಾಗಿ ಪ್ರ ಸುಪ್ರೀಂ ಕೋರ್ಟಿನಿಂದ ಸಿಹಿ ಸುದ್ದಿ ನೀಡಿತು. ಆದರೆ ರಾಜ್ಯ ಸರಕಾರ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಕಾಂಗ್ರೆಸ್ ಪಕ್ಷದಲ್ಲಿರುವ ಮಾದಿಗ ಸಮುದಾಯದ ಮುಖಂಡರು ಸಮುದಾಯವನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸುಮಾರು ಆರು ತಿಂಗಳಿನಿಂದ ನಾಗಮೋಹನ್ ಅವರಿಗೆ ಒಳ ಮೀಸಲಾತಿ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ತಿಳಿಸಿ, ಅವರಿಗೆ ಸರಿಯಾದ ಮಾಹಿತಿ ಸರಕಾರದ ಕಡೆಯಿಂದ ಒದಗಿಸುತ್ತಿಲ್ಲ. ಸುಖಾ ಸುಮ್ಮನೆ ವಿಳಂಬ ಮಾಡುತ್ತಾ ಕುಂಟುನೆಪ ಹೇಳಿ ಮಾದಿಗ ಸಮುದಾಯದ ಬಡ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗ ಹಾಗೂ ಸರಕಾರಿ ಸೌಲಭ್ಯಗಳನ್ನು ಕಡೆಗಣಿಸಲು ಕುತಂತ್ರ ರೂಪಿಸಿ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ಒಡಕು ಧ್ವನಿ ಸಮಸ್ಯೆಯನ್ನು ಮುಂದೆ ಇರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಹು ಸಂಖ್ಯಾತರಾದ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಬೇಕು ಎಂಬ ದೃಷ್ಟಿಯಿಂದ ಪ್ರಧಾನಿ ನೇರೆಂದ್ರ ಮೋದಿಯವರು ಕಳೆದ ಸಂಸತ್ ಚುನಾವಣೆ ವೇಳೆ ಪಕ್ಕದ ಆಂಧ್ರಪ್ರದೇಶದಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡುತ್ತೇನೆ ಎಂದು ಭರವಸೆ ನೀಡಿ ಮಾದಿಗ ಸಮುದಾಯವನ್ನು ಗೌರವಪೂರ್ವಕವಾಗಿ ನಡೆಸಿಕೊಂಡಿದ್ದಾರೆ. ಪಕ್ಕದ ರಾಜ್ಯದ ಸರಕಾರ ಒಳ ಮೀಸಲಾತಿಯನ್ನು ಜಾರಿ ಮಾಡಿದ್ದರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕಾರಣದಿಂದಾಗಿ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಕಾಂಗ್ರೆಸ್ ನಾಯಕರು ಮಾದಿಗ ಸಮುದಾಯದ ಎಂಎಲ್‌ಎ ಸಚಿವರುಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.
ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಮಾತನಾಡಿ,ಜಗಜೀವನ್ ರಾಮ್,ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕಿದ್ದು,ಮಾದಿಗ ಸಮುದಾಯದಲ್ಲಿ ಐಎಎಸ್, ಕೆಎಎಸ್ ಓದುವವರ ಸಂಖ್ಯೆ ಕಡಿಮೆ ಇದ್ದು,ಪರಿಶಿಷ್ಟ ಜಾತಿ ಸಮುದಾಯದ ಇತರೆ ಸಮುದಾಯಗಳಂತೆ ಮಾದಿಗ ಸಮುದಾಯ ಸುಶಿಕ್ಷಿತರಾಗಬೇಕು ಬಡತನವನ್ನ, ದಾರಿದ್ರ್ಯ ವನ್ನು ದೂರಮಾಡುವ ಶಕ್ತಿ ಶಿಕ್ಷಣಕ್ಕೆ ಇದ್ದು,ಅಂತಹ ಶಿಕ್ಷಣದಿಂದ ಮಾದಿಗ ಸಮುದಾಯ ವಂಚಿತವಾಗುತ್ತಿದೆ ಡಾ.ಬಿ.ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನಿಕ ಶಿಕ್ಷಣ ವ್ಯವಸ್ಥೆಯನ್ನ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಕ್ಯಾನ್ಸರ್ ಕಿದ್ವಾಯಿ ಆಸ್ಪತ್ರೆಯ ಮಾಜಿ ನಿರ್ದೇಶಕರು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ವಿಜಯಲಕ್ಷ್ಮಿ ದೇಶಮಾನೆ ಮಾತನಾಡಿ,ನಮ್ಮ ದೇಶದಲ್ಲಿ ತುಳಿತಕ್ಕೆ ಒಳಗಾದ ಮಾದಿಗ ಸಮುದಾಯವನ್ನು ಗೌರವಿಸುವಂತಹ ಕೆಲಸವಾಗುತ್ತಿದೆ.ನರೇಂದ್ರ ಮೋದಿಯವರು ಹಿಂದುಳಿದ ಸಮುದಾಯದಿಂದ ಬಂದ ಕಾರಣದಿಂದಾಗಿ ಅನೇಕ ನೋವುಗಳನ್ನ ದುಃಖ ದುಮ್ಮಾನಗಳನ್ನ ಕಂಡಿರುವುದಕ್ಕೆ ಮಾದಿಗ ಸಮುದಾಯದ ನಮ್ಮಂತ ಅಸಂಖ್ಯಾತ ಸಾಧಕರನ್ನು ಗುರುತಿಸಿ ದೇಶದ ಅತ್ಯುನ್ನತ ಗೌರವ ಪ್ರಶಸ್ತಿಗಳನ್ನು ನೀಡುತ್ತಿದ್ದಾರೆ. ಪ್ರಧಾನಿ ಮೋದಿಯವರು ನಿಜವಾಗಿಯೂ ನಮ್ಮ ಸಮುದಾಯದ ಪರವಾಗಿದ್ದು ನಾವುಗಳು ಅವರನ್ನ ಬೆಂಬಲಿಸಬೇಕಾಗಿದೆ ಎಂದರು.
ಮಾದಿಗ ವಿದ್ಯಾರ್ಥಿ ಯುವ ಪರಿಷತ್‌ನ ರಾಜ್ಯಾಧ್ಯಕ್ಷ ವಿ. ರವಿವರ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಆಗಮಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಮಾದಿಗ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು ಪ್ರಥಮ ಬಾರಿಗೆ ಯುವ ಪರಿಷತ್ ವತಿಯಿಂದ ಕರೆಯಲಾಗಿದ್ದ ವಧು ವರರ ಅನ್ವೇಷಣೆಗಾಗಿ ಸುಮಾರು 200 ಹೆಚ್ಚು ಅರ್ಜಿಗಳು ಹೆಣ್ಣು ಗಂಡಿಗಾಗಿ ಶೋಧನ ಕಾರ್ಯದಲ್ಲಿ ತೊಡಗಿದ್ದವು. ಈ ಸಂದರ್ಭದಲ್ಲಿ ಮಾದಿಗ ದಂಡೋರದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಂ.ಶಂಕ್ರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಆರ್. ಪ್ರಕಾಶ್,ಮಾಜಿ ಶಾಸಕ ಗಂಗಹನುಮಯ್ಯ,ಭಾಜಪ ಎಸ್.ಸಿ.ಘಟಕ ಜಿಲ್ಲಾಧ್ಯಕ್ಷ ಅಂಜಿನಪ್ಪ,ಯುವ ಮುಖಂಡರಾದ ಪ್ರಕಾಶ್, ನವೀನ್ ಕುಮಾರ್, ಕಿರಣ್ ಕುಮಾರ್ ಸೇರಿದಂತೆ ವಿವಿಧ ಜಿಲ್ಲೆಗಳ ಮಾದಿಗ ಯುವ ಪರಿಷತ್ ಸಂಘಟನೆಯ ಮುಖಂಡರು, ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.