ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್)ಗೆ ಅಗತ್ಯವಿರುವ 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ವನ್ನು ಪ್ರತಿ ಕ್ವಿಂಟಲ್‌ಗೆ ₹2400 ದರದಲ್ಲಿ ರೈತರಿಂದಲೇ ನೇರವಾಗಿ ಖರೀದಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ದಾವಣಗೆರೆ : ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್)ಗೆ ಅಗತ್ಯವಿರುವ 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ವನ್ನು ಪ್ರತಿ ಕ್ವಿಂಟಲ್‌ಗೆ ₹2400 ದರದಲ್ಲಿ ರೈತರಿಂದಲೇ ನೇರವಾಗಿ ಖರೀದಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಸಂಗ್ರಹಣಾ ಕೋಶದ ಅಧೀನ ಕಾರ್ಯದರ್ಶಿ ಎನ್.ಕಾಂತಮ್ಮ, 2025-26ನೇ ಸಾಲಿಗೆ ರಾಜ್ಯ ಹಾಲು ಮಹಾಮಂಡಲಕ್ಕೆ ಅಗತ್ಯವಿರುವ 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಪ್ರತಿ ಕ್ವಿಂ.ಗೆ ₹2400 ದಂತೆ ರೈತರಿಂದ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ)ರಡಿ ಆದೇಶ ಹೊರಡಿಸಿದ್ದಾರೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯನ್ನು ಮೆಕ್ಕೆಜೋಳ ಖರೀದಿ ನೋಡಲ್ ಏಜೆನ್ಸಿಯನ್ನಾಗಿ ಮಾಡಿ ಆದೇಶದಲ್ಲಿ ಸೂಚಿಸಲಾಗಿದೆ.
ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ:
ಈ ಹಿನ್ನೆಲೆಯಲ್ಲಿ ಕೆಎಂಎಫ್ ಕೂಡಲೇ ದಾವಣಗೆರೆ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಿ ₹2400 ದರದಲ್ಲಿ ಮೆಕೆಜೋಳ ಖರೀದಿ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯಿಸಿದ್ದಾರೆ.
ಕರ್ನಾಟದಲ್ಲಿ ಎಥೆನಾಲ್ ಉತ್ಪಾದನೆ ಮಾಡುವ ಕೈಗಾರಿಕೆಗಳು ಕೇಂದ್ರ ಸರ್ಕಾರದ ಏಜೆನ್ಸಿಗಳಾದ ನೆಫೆಡ್ ಹಾಗೂ ಎನ್‌ಸಿಸಿಎಫ್‌ಗಳಿಂದಲೇ ಖರೀದಿ ಮಾಡಬೇಕು ಎಂಬ ಆದೇಶವಿದೆ. ಆದ್ದರಿಂದ ರಾಜ್ಯದ ಎಲ್ಲ ಎಥೆನಾಲ್ ಉತ್ಪಾದಕರು ಕೇಂದ್ರ ಸರ್ಕಾರದ ಏಜೆನ್ಸಿಗಳಿಂದಲೇ ಜೋಳ ಖರೀದಿ ಮಾಡಬೇಕೇ ಹೊರತು ಎಪಿಎಂಸಿಗಳಿಂದ ಯಾವುದೇ ಕಾರಣಕ್ಕೂ ಖರೀದಿ ಮಾಡುವಂತಿಲ್ಲ ಎಂದು ಆಗ್ರಹಿಸಿದ್ದಾರೆ.
ಸಿಎಂ ಹೇಳಿದ ಮಾತಿನಂತೆ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದಿಂದ ರಾಜ್ಯದ ಯಾವ ಜಿಲ್ಲೆಯಲ್ಲೂ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಗೊಂಡಿಲ್ಲ. ಈ ಕೂಡಲೇ ಮಹಾಮಂಡಲ ಖರೀದಿ ಕೇಂದ್ರ ಆರಂಭಿಸಬೇಕೆಂದು ಹುಚ್ಚವ್ವನಹಳ್ಳಿ ಮಂಜುನಾಥ್, ಎಲೋದಹಳ್ಳಿ ರವಿಕುಮಾರ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜನಹಟ್ಟಿ ರಾಜು, ಕುರ್ಕಿ ಹನುಮಂತ, ಹುಚ್ಚವ್ವನಳ್ಳಿ ಪ್ರಕಾಶ್, ಕಡರನಾಯಕನಹಳ್ಳಿ ಪ್ರಭು, ಅಸ್ತಪನಹಳ್ಳಿ ಗಂಡುಗಲಿ ಮೊದಲಾದವರು ಒತ್ತಾಯಿಸಿದ್ದಾರೆ.