ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸ

| Published : Nov 01 2025, 01:15 AM IST

ಸಾರಾಂಶ

ರಾಜ್ಯ ಸರ್ಕಾರ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಕಾರ್ಯಕ್ರಮವನ್ನು ರೂಪಿಸಿದೆ

ಕನ್ನಡಪ್ರಭ ವಾರ್ತೆ ನಂಜನಗೂಡುವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯ ಸಲಕರಣೆಗಳನ್ನು ಉಚಿತವಾಗಿ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ, ವಿಶೇಷ ಅಗತ್ಯವುಳ್ಳ ಮಕ್ಕಳ ಪೋಷಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು. ಪಟ್ಟಣದ ನಾಗಮ್ಮ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಅಲಿಂಕೂ ಸಂಸ್ಥೆಯ ಆಯೋಗದಲ್ಲಿ ಆಯೋಜಿಸಿದ್ದ ವಿಶೇಷ ಅಗತ್ಯವುಳ್ಳ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಮತ್ತು ಮೌಲ್ಯಾಂಕನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಕಾರ್ಯಕ್ರಮವನ್ನು ರೂಪಿಸಿದೆ, ವಿಶೇಷ ಅಗತ್ಯವುಳ್ಳ ಮಕ್ಕಳ ಶೈಕ್ಷಣಿಕ, ಕಲಿಕೆ ಕುಂಠಿತಗೊಳ್ಳಬಾರದು ಎಂಬ ಸದುದ್ದೇಶದಿಂದ ವಿಶೇಷ ಅಗತ್ಯವುಳ್ಳ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ನಡೆಸಿ, ಅವರಿಗೆ ಅಗತ್ಯವಾದ ಸಾಧನ ಸಲಕರಣೆಗಳನ್ನು ಒದಗಿಸುವ ಕಾರ್ಯವನ್ನು ನಡೆಸುತ್ತಿದೆ. ಈ ಕಾರ್ಯಕ್ರಮವು ವಿಶೇಷ ಚೇತನ ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 290 ವಿಶೇಷ ಚೇತನ ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ, ಅವರಲ್ಲಿ ಸುಮಾರು 34 ಮಂದಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಗೃಹ ಪಾಠ ಯೋಜನೆ ಮೂಲಕ ಶಿಕ್ಷಣ ನೀಡಲಾಗುತ್ತಿದೆ, ವಿಶೇಷ ಚೇತನ ವಿದ್ಯಾರ್ಥಿಳ ಕಲಿಕೆಗೆ ತೊಂದರೆಯಾಗದಂತೆ ಸರ್ಕಾರ ಅಗತ್ಯ ಸಲಕರಣೆಗಳನ್ನು ಒದಗಿಸುತ್ತಿದೆ, ಇದನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದರು. ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣೆ ನಡೆಸಿ ಸ್ಥಳದಲ್ಲೇ ಅಗತ್ಯ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಮುಖಂಡರಾದ ಮುರುಗೇಶ್, ದೇವರಾಜು, ನಂಜನಹಳ್ಳಿಎನ್.ಎಸ್. ಮಾದಪ್ಪ, ನಂಜಪ್ಪ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರತ್ನಾಕರ, ಶಿಕ್ಷಣ ಇಲಾಖೆಯ ನಾಗೇಂದ್ರ ಕುಮಾರ್, ಗುರುಸ್ವಾಮಿ, ಸೌಜನ್ಯ, ಸುಮಿತ್ರ ಬಾಯಿ ಹಾಗೂ ಸಿಆರ್.ಪಿ ಮತ್ತು ಬಿಆರ್.ಪಿಗಳು ಇದ್ದರು.