ಹುಬ್ಬಳ್ಳಿ: ಇಲ್ಲಿನ ಸಬ್‌ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬುದರ ಕುರಿತಂತೆ ವಿಡಿಯೋ ವೈರಲ್ ಆಗುತ್ತಿದ್ದಂತೆ, ಬೆಳಗಾವಿ ವಿಭಾಗದ ಡಿಐಜಿ ಟಿ.ಪಿ. ಶೇಷ್ ಅವರು ಶನಿವಾರ ಉಪ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತಂತೆ ತನಿಖೆ ಚುರುಕು ಪಡೆದಿದೆ.
ಇಲಾಖೆಗೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ವಿಡಿಯೋ ವೈರಲ್ ಮಾಡಲಾಗಿದೆ. ಇದರಲ್ಲಿ ತಪ್ಪಿತಸ್ಥರು ಯಾರೆಲ್ಲ ಇದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಶೇಷ್ ತಿಳಿಸಿದರು. ಡಿಜಿಪಿ ಅಲೋಕಕುಮಾರ ಬುಧವಾರವಷ್ಟೇ ಉಪಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಮಾಧಕ ವಸ್ತು ಸೇವನೆ ಕುರಿತು ಎನ್‌ಡಿಪಿಎಸ್ ತಪಾಸಣೆಗೊಳಪಡಿಸಲಾಗುವುದು ಎಂದಿದ್ದರು. ಅವರು ಬಂದು ಪರಿಶೀಲನೆ ಮಾಡಿ ಹೋದ ಎರಡೇ ದಿನದಲ್ಲೇ ಸಬ್‌ಜೈಲಲ್ಲಿ ಕೈದಿಗಳು ಗಾಂಜಾ ಬಳಕೆ ಮಾಡುತ್ತಿರುವುದು ಸೇರಿದಂತೆ ರಾಜ್ಯಾತಿಥ್ಯ ನೀಡಲಾಗುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ಬಂಧೀಖಾನೆ ಇಲಾಖೆ ತೀವ್ರ ಇರುಸು ಮುರುಸುವನ್ನುಂಟು ಮಾಡಿತ್ತು.ವಿಡಿಯೋ ವೈರಲ್ ಆಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ಬಂಧಿಖಾನೆ ಇಲಾಖೆ ದಾಖಲಿಸಿದೆ. ಕಾರಾಗೃಹದ ಅಧೀಕ್ಷಕ ಶಹಾಬುದ್ದೀನ್ ಕಾಲೇಖಾನ್ ಅವರು ಗಾಂಜಾ ಬಳಕೆ ಮಾಡುತ್ತಿದ್ದ 10 ವಿಚಾರಣಾಧೀನ ಕೈದಿಗಳ ವಿರುದ್ಧ ದೂರು ನೀಡಿದ್ದರೆ, ಪೊಲೀಸರು ವಿಡಿಯೋ ಆಧರಿಸಿ ಸುಮಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ನಡುವೆ ಬೆಳಗಾವಿ ವಿಭಾಗದ ಡಿಐಜಿ ಟಿ.ಪಿ. ಶೇಷ್ ಅವರು ಶನಿವಾರ ಉಪ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧೀಕ್ಷಕರ ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿರುವ ವಿಡಿಯೋ ವೀಕ್ಷಿಸಿದ್ದು, ಅದು 2025ರ ಡಿಸೆಂಬರ್ 9ರಂದು ನಡೆದ ಘಟನೆಯಾಗಿದೆ. ಜೈಲು ಸುಧಾರಣೆಗಾಗಿ ನಾವು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದಕ್ಕೆ ವಿರುದ್ಧವಾಗಿ ಕೆಲವರು ಉದ್ದೇಶ ಪೂರ್ವಕವಾಗಿ ವಿಡಿಯೋ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ವಿಡಿಯೋ ಮಾಡಿರುವ ಮೊಬೈಲ್ ಜೈಲಿನ ಹಿಂದಿರುವ ಗೋಡೆಯಿಂದ ಒಳಗೆ ಬಂದಿರಬಹುದು. ಅಥವಾ ಅದು ಪೆನ್ ಕ್ಯಾಮೆರಾ ಸಹ ಬಳಕೆಯಾಗಿರಬುದು. ವಿಡಿಯೋದಲ್ಲಿರುವುದು ಗಾಂಜಾ ಎನ್ನುವುದು ಪಕ್ಕಾ ಆಗಿಲ್ಲ. ಮರದ ಎಲೆ ಸಹ ಆಗಿರಬಹುದು. ತನಿಖೆ ನಡೆಯುತ್ತಿದೆ. ಜೈಲು ಸಿಬ್ಬಂದಿಯಿಂದ ಕರ್ತವ್ಯ ಲೋಪವಾಗಿದ್ದು, ಶಿಸ್ತುಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ 10 ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
2024ರಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಪ್ರಜ್ವಲ್, ಇಲಾಖೆಗೆ ಹಾಗೂ ಸಿಬ್ಬಂದಿಗೆ ಕೆಟ್ಟ ಹೆಸರು ತರಲು ವಿಡಿಯೋ ಹಂಚಿಕೆ ಮಾಡಿದ್ದಾನೆ. ಪ್ರಾಥಮಿಕ ವಿಚಾರಣೆ ವೇಳೆ ಇದು ಬಹಿರಂಗವಾಗಿದ್ದು, ತಪ್ಪು ಒಪ್ಪಿಕೊಂಡಿದ್ದಾನೆ. ಶೀಘ್ರದಲ್ಲಿ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ವರದಿ ಸಲ್ಲಿಸುತ್ತೇನೆ ಎಂದರು.