ಫೆ.3, 4ಕ್ಕೆ ನಗರದಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ: ಮಂಜುನಾಥ ಏಕಬೋಟೆ

| Published : Jan 24 2024, 02:04 AM IST

ಫೆ.3, 4ಕ್ಕೆ ನಗರದಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ: ಮಂಜುನಾಥ ಏಕಬೋಟೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮ್ಮೇಳನದಲ್ಲಿ ಪತ್ರಕರ್ತರ ಸಮಸ್ಯೆಗಳು, ಪತ್ರಿಕೋದ್ಯಮದ ಮುಂದಿರುವ ಸವಾಲುಗಳು, ಭಾಷಾ ಜ್ಞಾನ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಗೋಷ್ಠಿ ನಡೆಯಲಿವೆ. ಹಿಂದಿನ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳ ಪೈಕಿ ಕೆಲವನ್ನು ರಾಜ್ಯ ಸರ್ಕಾರವು ಈಡೇರಿಸಿದ್ದು, ಉಳಿದ ಹಾಗೂ ಪ್ರಸ್ತುತ ಪತ್ರಕರ್ತರ-ಪತ್ರಿಕೋದ್ಯಮದ ಸಮಸ್ಯೆಗಳ ಬಗ್ಗೆ ನಿರ್ಣಯ ಕೈಗೊಂಡು, ಸಮ್ಮೇಳನದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು.

ಎರಡು ದಿನ 5 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಭಾಗಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಫೆ.3 ಮತ್ತು 4ರಂದು ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ನಡೆಯಲಿದ್ದು, ಸಮ್ಮೇಳನ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಏಕಬೋಟೆ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದ ರಾಜ್ಯ ಘಟಕದ ನೇತೃತ್ವ ಹಾಗೂ ಜಿಲ್ಲಾ ಸಂಘದ ಆತಿಥ್ಯ ಹಾಗೂ ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ ನಡೆಯುವ 2 ದಿನಗಳ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಮ್ಮೇಳನದಲ್ಲಿ ಪತ್ರಕರ್ತರ ಸಮಸ್ಯೆಗಳು, ಪತ್ರಿಕೋದ್ಯಮದ ಮುಂದಿರುವ ಸವಾಲುಗಳು, ಭಾಷಾ ಜ್ಞಾನ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಗೋಷ್ಠಿ ನಡೆಯಲಿವೆ. ಹಿಂದಿನ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳ ಪೈಕಿ ಕೆಲವನ್ನು ರಾಜ್ಯ ಸರ್ಕಾರವು ಈಡೇರಿಸಿದ್ದು, ಉಳಿದ ಹಾಗೂ ಪ್ರಸ್ತುತ ಪತ್ರಕರ್ತರ-ಪತ್ರಿಕೋದ್ಯಮದ ಸಮಸ್ಯೆಗಳ ಬಗ್ಗೆ ನಿರ್ಣಯ ಕೈಗೊಂಡು, ಸಮ್ಮೇಳನದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ದಾವಣಗೆರೆಯಲ್ಲಿ ದಶಕಗಳ ನಂತರ ಸಮಾವೇಶ ನಡೆಯುತ್ತಿದ್ದು, ಸಮ್ಮೇಳನದ ಅಂಗವಾಗಿ ಪತ್ರಕರ್ತರ ಬೃಹತ್ ಮೆರವಣಿಗೆ, ಸಮ್ಮೇಳನ ಉದ್ಘಾಟನೆ, ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಯವರು ಸೇರಿದಂತೆ ಜನ ಪ್ರತಿನಿಧಿಗಳು, ನಾಡಿನ ಹಿರಿಯ-ಕಿರಿಯ ಪತ್ರಕರ್ತರು, ಅಂಕಣಕಾರರು ಭಾಗವಹಿಸುವರು. ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಹಿರಿಯರು, ಪ್ರತಿಭಾವಂತ ಪತ್ರಕರ್ತರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಆರ್‌.ಅಶೋಕ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿ ಜಿಲ್ಲೆಯ ಜನ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸೇರಿ ಜಿಲ್ಲೆಯ ಹಲವಾರು ದಾನಿಗಳ ಸಹಕಾರದಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ನಂತರ ಅನ್ಯ ಜಿಲ್ಲೆಗಳ ಪ್ರತಿನಿಧಿಗಳು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವರು ಎಂದು ವಿವರಿಸಿದರು.

ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್‌, ಖಜಾಂಚಿ ಎನ್.ವಿ.ಬದರೀನಾಥ, ಕಾರ್ಯದರ್ಶಿ ಜೆ.ಎಸ್‌.ವೀರೇಶ, ಸಮ್ಮೇಳನ ಪ್ರಚಾರ ಸಮಿತಿ ಪ್ರಮುಖ ಎ.ಎನ್‌.ನಿಂಗಪ್ಪ, ಎಸ್.ಕೆ.ಒಡೆಯರ್, ಮಧು ನಾಗರಾಜ, ನಿಂಗೋಜಿರಾವ್ ಇತರರಿದ್ದರು.

25 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಸಮ್ಮೇಳನ

ಅವಿಭಜಿತ ಚಿತ್ರದುರ್ಗ ಜಿಲ್ಲೆಯಾಗಿದ್ದಾಗ 31 ವರ್ಷಗಳ ಹಿಂದೆ ತಾಲೂಕು ಕೇಂದ್ರವಾಗಿದ್ದ ದಾವಣಗೆರೆಯಲ್ಲಿ ಸಮ್ಮೇಳನ ನಡೆದಿತ್ತು. 1992ರಲ್ಲಿ ಇಲ್ಲಿನ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ಸಮ್ಮೇಳನ ಆಗಿದ್ದು, ನೂತನ ಜಿಲ್ಲೆಯಾಗಿ 25 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಲ್ಲಿ ಸಮ್ಮೇಳನ ನಡೆಯುತ್ತಿರುವುದು ನಾವೆಲ್ಲರೂ ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಮಂಜುನಾಥ ಏಕಬೋಟೆ ಹೇಳಿದರು.ಏಕೈಕ ಬೃಹತ್ ಸಂಘಟನೆ

ನಾಡಿನ ಹಿರಿಯ ಸಾಹಿತಿ, ಪತ್ರಕರ್ತರೂ ಆಗಿದ್ದ ಡಿ.ವಿ.ಗುಂಡಪ್ಪನವರು 92 ವರ್ಷಗಳ ಹಿಂದೆ 1932ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವನ್ನು ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ದೇಣಿಗೆಯೊಂದಿಗೆ ಸ್ಥಾಪಿಸಿದ್ದರು. ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರ ಏಕೈಕ ಬೃಹತ್ ಸಂಘಟನೆ ಇದಾಗಿದ್ದು, ಸುಮಾರು ಎಂಟೂವರೆ ಸಾವಿರಕ್ಕೂ ಹೆಚ್ಚು ಪತ್ರಕರ್ತರು ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ.

ಮಂಜುನಾಥ ಏಕಬೋಟೆ ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ.