ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲೆಯಲ್ಲಿ ಸುಮಾರು ೩೦ ವರ್ಷಗಳ ನಂತರ ರಾಜ್ಯಮಟ್ಟದ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನ.೮ ರಿಂದ ೧೦ರವರೆಗೂ ಮೂರು ದಿನಗಳ ಕಾಲ ನಡೆಯುತ್ತಿದೆ, ರಾಜ್ಯದ ೩೫ ಶೈಕ್ಷಣಿಕ ಜಿಲ್ಲೆಗಳಿಂದ ಬರುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸಾರ್ವಜನಿಕರು ಆಗಮಿಸಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಕರೆ ನೀಡಿದರು.ಡೀಸಿ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಕೋಲಾರ ಜಿಲ್ಲೆಗೆ ರಾಜ್ಯಮಟ್ಟದ ಕ್ರೀಡಾಕೂಟ ನೀಡಿರುವುದು ಜಿಲ್ಲೆಯ ಹೆಮ್ಮೆಯಾಗಿದೆ, ಅತ್ಯಂತ ಸುಸೂತ್ರವಾಗಿ ಕ್ರೀಡಾಕೂಟ ನಡೆಸುವ ಮೂಲಕ ರಾಜ್ಯಕ್ಕೆ ಮಾದರಿಯಾಗೋಣ ಎಂದು ಮನವಿ ಮಾಡಿದರು.
ಕ್ರೀಡಾಕೂಟದಲ್ಲಿ ೩೨೫೦ ಮಂದಿ ೧೭ ವರ್ಷದೊಳಗಿನ ಬಾಲಕ, ಬಾಲಕಿಯರು ಪಾಲ್ಗೊಳ್ಳುತ್ತಿದ್ದಾರೆ, ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಅವರಿಗೆ ಅಗತ್ಯ ಊಟ, ವಸತಿ, ಸಾರಿಗೆ ಸೌಲಭ್ಯ ಒದಗಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.ಕ್ರೀಡಾಕೂಟದ ಸಿದ್ಧತೆಗಾಗಿ ೧೫೦ ಮಂದಿ ರೆಫ್ರಿಗಳು ಹಾಗೂ ಸಿಬ್ಬಂದಿ ನಿರಂತರ ದುಡಿಯುತ್ತಿದ್ದಾರೆ, ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲಾಗಿದೆ, ಯಾವುದೇ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮವಹಿಸಲು ನಿರ್ದೇಶನ ನೀಡಿದ್ದೇನೆ ಎಂದರು.
ಸಚಿವ ಬೈರತಿ ಸುರೇಶ್‌ರಿಂದ ಕ್ರೀಡಾಕೂಟಕ್ಕೆ ಚಾಲನೆ:ಕ್ರೀಡಾಕೂಟಕ್ಕೆ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನ.೮ ರ ಶುಕ್ರವಾರ ಮಧ್ಯಾಹ್ನ ೩ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ ನೀಡಲಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತಿ ವಹಿಸುವರು ಎಂದರು.
ಕ್ರೀಡಾಕೂಟದ ಧ್ವಜಾರೋಹಣವನ್ನು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಕೊತ್ತೂರು ಮಂಜುನಾಥ್ ವಹಿಸುವರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಕ್ರೀಡಾಜ್ಯೋತಿ ಸ್ವೀಕರಿಸುವರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ, ನಿರ್ದೇಶಕರಾದ ಕೃಷ್ಣಜೀ ಎಸ್.ಕರಿವಣ್ಣನವರ, ಸಿಪ್ರಿನ್ ಮಾಂಥೇರೋ, ಸಹನಿರ್ದೇಶಕ ನರಸಿಂಹಯ್ಯ ಹಾಗೂ ವಿಶೇಷ ಆಹ್ವಾನಿತರಾಗಿ ಸರ್ಕಾರದ ಕಾರ್ಯದರ್ಶಿ ಡಾ.ಏಕ್‌ರೂಪ್ ಕೌರ್ ಹಾಗೂ ಜಿಲ್ಲೆ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು, ನಗರಸಭೆ, ಕೆಯುಡಿಎ ಅಧ್ಯಕ್ಷ, ಉಪಾಧ್ಯಕ್ಷರು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿರುವರು ಎಂದು ತಿಳಿಸಿದರು.ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ:
ರಾಜ್ಯದ ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ೩೫ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ನಗರದ ಎಲ್ಲಾ ಪ್ರಮುಖ ಶಾಲೆಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದ ಅವರು, ಸೂಚಿಸಿರುವ ಜಿಲ್ಲೆಯ ವಿದ್ಯಾರ್ಥಿಗಳನ್ನು ಆಯಾ ಶಾಲೆಗಳಿಗೆ ತಲುಪಿಸಿ, ಅಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವಲ್ಲಿ ಅಲ್ಲಿನ ಮುಖ್ಯಸ್ಥರು ಗಮನಹರಿಸಬೇಕು ಎಂದು ತಿಳಿಸಿದರು.ಮೂರು ದಿನಗಳ ಕಾಲವೂ ವಸತಿ ವ್ಯವಸ್ಥೆ ಇರುವ ಶಾಲೆಗಳಿಂದ ಮಕ್ಕಳನ್ನು ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಕರೆತರಲು ಮತ್ತು ನಂತರ ಕರೆದೊಯ್ಯಲು ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಅತಿ ಮುಖ್ಯವಾಗಿದ್ದು, ಹೆಚ್ಚಿನ ನಿಗಾ ವಹಿಸಲು ಸೂಚಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಕೂಟಕ್ಕೆ ಆಗಮಿಸುವ ಸುಮಾರು ೩೨೫೦ ಮಕ್ಕಳು ಹಾಗೂ ೫೦೦ ಮಂದಿ ಶಿಕ್ಷಕರಿಗೆ ಊಟದ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಹತ್ತಿರವಾಗಿರುವ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.