ಸಾರಾಂಶ
ಹಾವೇರಿ: ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಜಯಂತ್ಯುತ್ಸವದ ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಏ. ೧೦ರಿಂದ ಏ. ೧೫ರ ವರೆಗೆ ರಾಜ್ಯಮಟ್ಟದ ೯ನೇ ವರ್ಷದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷ, ಶ್ರೀಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ಏ. ೧೦ರೊಳಗಾಗಿ ಶ್ರೀಮಠದ ಟ್ರಸ್ಟ್ ಕಮಿಟಿ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಭಜನಾ ಮೇಳದವರಿಗೆ ಶ್ರೀಮಠದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.ಭಜನಾ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ೧ ಲಕ್ಷ ರು., ದ್ವಿತೀಯ ಬಹುಮಾನ ೮೦ ಸಾವಿರ, ತೃತೀಯ ಬಹುಮಾನ ೭೦ ಸಾವಿರ ರು. ಸಮಾಧಾನಕರ ಬಹುಮಾನವಾಗಿ ಹತ್ತು ತಂಡಗಳನ್ನು ಆಯ್ಕೆ ಮಾಡಿ ಪ್ರತಿ ತಂಡಕ್ಕೆ ತಲಾ ೯ಸಾವಿರ ರು. ನೀಡಲಾಗುವುದು. ೧೬ ವರ್ಷದೊಳಗಿನ ಒಂದು ಬಾಲಕರ ತಂಡ ಹಾಗೂ ಒಂದು ಬಾಲಕಿಯರ ತಂಡಕ್ಕೆ, ಒಂದು ಮಹಿಳಾ ಭಜನಾ ತಂಡಕ್ಕೆ ತಲಾ ೧೦ಸಾವಿರ ರು. ಪುರಸ್ಕಾರ ನೀಡಲಾಗುವುದು ಎಂದರು.
ವೈಯಕ್ತಿಕವಾಗಿ ಇಬ್ಬರು ಉತ್ತಮ ಹಾಡುಗಾರರಿಗೆ, ಹಾರ್ಮೋನಿಯಂ ವಾದಕರಿಗೆ, ಉತ್ತಮ ತಾಳ ವಾದಕರಿಗೆ, ಉತ್ತಮ ಧಮಡಿ ವಾದಕರಿಗೆ ಬಹುಮಾನ ವಿತರಿಸಲಾಗುವುದು. ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದವರಿಗೆ ಮೂರು ಪದಗಳನ್ನು ಹಾಡುವ ಅವಕಾಶವಿದ್ದು, ಮೂರು ಪದಗಳನ್ನು ೧೮ನಿಮಿಷದಲ್ಲಿ ಹಾಡಬೇಕು. ಪ್ರತಿ ತಂಡದವರು ಎರಡು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು. ಪ್ರತಿ ತಂಡದವರು ಮೂರನೇ ಪದ್ಯವನ್ನು ಜಗದ್ಗುರು ಶ್ರೀ ಸಿದ್ಧಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶಿಶುನಾಳ ಶರೀಫರ ಪದ್ಯ ಹಾಗೂ ವಚನ ಸಾಹಿತ್ಯ ಇವುಗಳನ್ನು ಯಾವುದಾದರೊಂದು ಹಾಡಬಹುದು ಎಂದರು.ಒಂದು ತಂಡದಲ್ಲಿ ಭಾವಹಿಸಿದ ಕಲಾವಿದರಿಗೆ ಮತ್ತೊಂದು ತಂಡದಲ್ಲಿ ಹಾಡಲು ಅವಕಾಶ ಇರುವುದಿಲ್ಲ, ಒಂದು ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದ ಕಲಾವಿದರ ಸಂಖ್ಯೆ ೬ಕ್ಕಿಂತ ಕಡಿಮೆ ಇರಬಾರದು ಮತ್ತು ೧೦ಕ್ಕಿಂತ ಹೆಚ್ಚು ಇರಬಾರದು. ಪ್ರತಿದಿನ ೨೫ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವುದು. ೧೩ನೇ ತಾರೀಖಿನ ವರೆಗೆ ಪ್ರಥಮ ಸುತ್ತು ಜರುಗುವುದು. ಇದರಲ್ಲಿ ಆಯ್ಕೆಯಾದ ತಂಡಗಳಿಗೆ ಕೊನೆಯ ದಿನ ೧೪ನೇ ತಾರೀಖಿನ ದಿನ ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗುವುದು. ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ತಂಡದವರಿಗೆ ಮಾತ್ರ ಬಹುಮಾನಗಳನ್ನು ನೀಡಲಾಗುವುದು. ಬಹುಮಾನ ವಿತರಣಾ ಕಾರ್ಯಕ್ರಮ ಏ. ೧೫ರಂದು ಜರುಗುವುದು. ಹೆಚ್ಚಿನ ಮಾಹಿತಿಗಾಗಿ ೯೮೮೦೧೬೯೮೮೧, ೮೦೯೫೮೮೨೦೩೩ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಜಗದ್ಗುರು ಶ್ರೀ ಸಿದ್ಧಾರೂಢರ ೧೯೦ನೇ ಜಯಂತ್ಯುತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ ೧೧೫ನೇ ಜಯಂತ್ಯುತ್ಸವದ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ತ ೨೦೧೪ನೇ ಸಾಲಿನ ಶಿವರಾತ್ರಿ ಮಹೋತ್ಸವದಿಂದ ೨೦೨೫ನೇ ಸಾಲಿನ ಶಿವರಾತ್ರಿ ಮಹೋತ್ಸವದ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸಿದ್ಧಾರೂಢಮಠದ ಪೋಷಕರು, ಆಶ್ರಯದಾತರು, ಆಜೀವ ಸದಸ್ಯರ ಮನೆಯ ಅಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಹುಬ್ಬಳ್ಳಿಯ ಸಿದ್ಧಾರೂಢರ ಮಠ ಯಾವುದೇ ಜಾತಿ, ಮತ, ಪಂಥಗಳಿಗೆ ಸೇರಿಲ್ಲ, ಮುಸ್ಲಿಂರು ಸಹ ಸಿದ್ಧಾರೂಢರಿಗೆ ಭಕ್ತರಿದ್ದಾರೆ. ಇವತ್ತು ಜಗತ್ತಿಗೆ ನಾವೆಲ್ಲರೂ ಒಂದು ಎಂಬ ಭಾವ ಬೇಕಾಗಿದೆ. ಹುಟ್ಟಿನಿಂದ ಸಾವಿನವರೆಗೆ ನಮ್ಮ ಎಲ್ಲಾ ಸಹ ಜೀವಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಸಿದ್ಧಾರೂಢರ ಬದುಕಿನಿಂದ, ಪರಂಪರೆಯ ಸಾಹಿತ್ಯದ ಓದಿನಿಂದ ತಿಳಿದುಕೊಳ್ಳಬೇಕು. ಅದು ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಿರ್ಣಾಯಕ ಪಾತ್ರದಲ್ಲಿರುವ ಅಧಿಕಾರಸ್ಥರಿಗೆ ನಾವೆಲ್ಲಾ ಒಂದು ಎಂಬ ಸಬ್ಧುದ್ಧಿ ಬರಬೇಕು. ಜಾತಿ ಎಂಬ ಅಡ್ಡಗೋಡೆ ಒಡೆದು ಜನರು ದೇಹಭಾವದಿಂದ ಆತ್ಮಭಾವಕ್ಕೆ ತಿರುಗಬೇಕು. ಸಿದ್ಧಾರೂಢರು, ಗುರುನಾಥರೂಢರು ತೋರಿಸಿಕೊಟ್ಟ ದಾರಿಯಲ್ಲಿ ನಡೆದರೆ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅಂತಹ ವಾತಾವರಣ ಸೃಷ್ಠಿಸಲು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಮಾಜಿ ಶಾಸಕ, ಆತ್ಮಾನಂದ ಶ್ರೀಗಳು, ಶ್ರೀಮಠದ ಚೇರ್‌ಮನ್ ಬಸವರಾಜ ಕಲ್ಯಾಣಶೆಟ್ಟರ್ ಇದ್ದರು.ನಾನೂ ಸಿದ್ಧಾರೂಢರ ಭಕ್ತ. ಹೀಗಾಗಿ ಖಂಡೇರಾಯನಹಳ್ಳಿಯಲ್ಲಿ ಹುಬ್ಬಳ್ಳಿ ಮಠದ ಮಾದರಿಯಲ್ಲೇ ಸಿದ್ಧಾರೂಢರ ಮಠ ಕಟ್ಟಿದ್ದೇನೆ. ಗೋಶಾಲೆ ತೆರೆದಿದ್ದೇನೆ. ಪ್ರತಿ ಹಳ್ಳಿ-ಹಳ್ಳಿಗಳಲ್ಲೂ ಸಿದ್ಧಾರೂಢರ ಭಕ್ತರಿದ್ದಾರೆ. ನಾಡಿನೆಲ್ಲೆಡೆ ಇರುವ ಸಿದ್ಧಾರೂಢರ ಮಠಗಳನ್ನು ಒಗ್ಗೂಡಿಸುವ ಕೆಲಸವಾಗಬೇಕಿದೆ ಎಂದು ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.