೧೮ನೇ ರಿಂದ ನಾಲ್ಕು ದಿನಗಳ ಕಾಲ ತಿಪಟೂರಿನಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಖೋಖೋ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ ತಿಪಟೂರು
ಇದೇ ತಿಂಗಳು ೧೮ನೇ ರಿಂದ ನಾಲ್ಕು ದಿನಗಳ ಕಾಲ ತಿಪಟೂರಿನಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಖೋಖೋ ಪಂದ್ಯಾವಳಿ ನಡೆಯಲಿದ್ದು ಪುರುಷರು ಹಾಗೂ ಮಹಿಳಾ ತಂಡಗಳು ಸೇರಿ ದಾಖಲೆಯ ೧೩೦ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದು ರಾಜ್ಯ ಖೋಖೋ ಸಂಸ್ಥೆ ಅಧ್ಯಕ್ಷ ಹಾಗೂ ಭಾರತೀಯ ಖೋಖೋ ಫೆಡರೇಷನ್ ಉಪಾಧ್ಯಕ್ಷ ಲೋಕೇಶ್ವರ ತಿಳಿಸಿದರು. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಖೋಖೋ ಸಂಸ್ಥೆ, ತುಮಕೂರು ಜಿಲ್ಲಾ ಖೋಖೋಸಂಸ್ಥೆಯ ಸಹಯೋಗದಲ್ಲಿ ತಿಪಟೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ೩೯ನೇ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಖೋಖೋ ಚಾಂಪಿಯನ್‌ಷಿಪ್ ಪಂದ್ಯಾವಳಿಗಳು ಡಿ.೧೮ರಿಂದ ಡಿ೨೧ರವರೆಗೆ ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ನಡೆಯಲಿವೆ. ಈ ನಾಲ್ಕು ದಿನಗಳಲ್ಲಿ ೧೫೬ ಖೋಖೋ ಪಂದ್ಯಾವಳಿಗಳು ನಡೆಯಲಿದೆ. ರಾಜ್ಯದ ಎಲ್ಲ ೩೦ ಜಿಲ್ಲೆಗಳಿಂದ ಪುರುಷರ ೯೩ತಂಡಗಳು ಹಾಗೂ ೪೭ ಮಹಿಳಾ ತಂಡಗಳು ಸೇರಿ ಒಟ್ಟು ೧೩೦ ತಂಡಗಳು ಭಾಗವಹಿಸಲಿರುವ ಈ ಪಂದ್ಯಾವಳಿಗಾಗಿ ನಾಲ್ಕು ಅಂಕಣಗಳನ್ನು ಸಿದ್ದಪಡಿಸಲಾಗುತ್ತಿದೆ. ಇದರಲ್ಲಿ ಒಂದು ಅಂಕಣವನ್ನು ಸಂಪೂರ್ಣ ಸಿಂಥೆಟಿಕ್ ಮ್ಯಾಟ್ ಬಳಸಿ ಸಿದ್ದಗೊಳಿಸಲಾಗುತ್ತಿದೆ. ಸಂಜೆ ಮತ್ತು ರಾತ್ರಿಯ ವೇಳೆ ನಡೆಯುವ ಪಂದ್ಯಾವಳಿಗಳಿಗೆ ಎರಡು ಫೆಡ್‌ಲೈಟ್ ಅಂಕಣಗಳು ತಯಾರಾಗುತ್ತಿವೆ ಎಂದು ಮಾಹಿತಿ ನೀಡಿದರು. ಈ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಒಟ್ಟು ೧೩೦ ತಂಡಗಳ ಕ್ರೀಡಾಳುಗಳು, ೨೦೦ಕ್ಕೂ ಹೆಚ್ಚು ಮ್ಯಾಚ್ ರೆಫರಿಗಳು, ತೀರ್ಪುಗಾರರು, ಅಧಿಕಾರಿಗಳು ಸೇರಿ ರಾಜ್ಯದ ೩೦ ಜಿಲ್ಲೆಗಳಿಂದ ಸುಮಾರು ೨೫೦೦ ಜನರು ತಿಪಟೂರಿಗೆ ಆಗಮಿಸಲಿದ್ದು ಅವರೆಲ್ಲರಿಗೂ ಉಳಿದುಕೊಳ್ಳಲು ವಸತಿ, ಊಟ-ತಿಂಡಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅಧಿಕಾರಿಗಳು ಆಗಮಿಸಲಿದ್ದಾರೆ. ಈಗಾಗಲೇ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳನ್ನು ಆಯೋಜಿಸಿ ಅನುಭವವಿರುವ ತಿಪಟೂರು ಸ್ಪೋರ್ಟ್ಸ್ ಕ್ಲಬ್ ಈ ಪಂದ್ಯಾವಳಿಗಳನ್ನು ನಡೆಸಲು ಸಂಪೂರ್ಣ ತಯಾರಾಗಿದೆ. ಗೆದ್ದ ತಂಡಗಳಿಗೆ ಮೆಡಲ್ ಹಾಗೂ ಸರ್ಟಿಫಿಕೇಟ್ ಅನ್ನು ಖೋಖೋ ಸಂಸ್ಥೆ ನೀಡಿದರೆ ಬಹುಮಾನವನ್ನು ತಿಪಟೂರು ಸ್ಪೋರ್ಟ್ಸ್ ಕ್ಲಬ್ ನೀಡುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಮಾಜಿ ಉಪಾಧ್ಯಕ್ಷ ಸೊಪ್ಪು ಗಣೇಶ್, ಮಾಜಿ ನಗರಸಭಾ ಸದಸ್ಯೆ ಭಾರತಿ ಮಂಜುನಾಥ್, ಮುಖಂಡರಾದ ರೇಣು ಪಟೇಲ್, ಶಶಿಭೂಷಣ್, ನಾಗರಾಜು, ರೇಣು ಡಿ.ಸಿ ಇನ್ನಿತರರು ಉಪಸ್ಥಿತರಿದ್ದರು. ಪೊಟೋ ೯-ಟಿಪಿಟಿ೨ ರಲ್ಲಿ ತಿಪಟೂರಿನಲ್ಲಿ ರಾಜ್ಯ ಖೊಖೊ ಸಂಸ್ಥೆ ಅಧ್ಯಕ್ಷ ಹಾಗು ಭಾರತೀಯ ಖೊಖೊ ಫೆಡರೇಷನ್ ಉಪಾಧ್ಯಕ್ಷ ಲೋಕೇಶ್ವರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.