ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ರಾಜ್ಯಮಟ್ಟದ ವಾಲಿಬಾಲ್ ಪಂದ್ಯಗಳನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸುವ ಸಂದರ್ಭದಲ್ಲಿ ಎಲ್ಲಿಯೂ ಪ್ರಮಾದವಾಗದಂತೆ ನಿಗಾ ವಹಿಸಲಾಗಿತ್ತು. ನಿರಾತಂಕವಾಗಿ ಜರುಗಲು ಸಂಸ್ಥೆಯ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಬೋಧಕರ ನೇತೃತ್ವದಲ್ಲಿ ಒಟ್ಟು ೧೬ ತಂಡಗಳ ಸಮಿತಿ ರಚಿಸಿ, ಆಯಾ ಕೆಲಸಗಳನ್ನು ನಿರ್ವಹಿಸಲು ನಿರ್ಧರಿಸಲಾಗಿತ್ತು. ಸಂಘಟಿತ ಕಾರ್ಯದಿಂದ ರಾಜ್ಯಮಟ್ಟದ ಪಂದ್ಯಾವಳಿಗಳು ಯಶಸ್ವಿಯಾಗಲು ಕಾರಣವಾಯಿತು ಎಂದು ಎಸ್‌ಡಿಎಂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ದಾನಿಗೊಂಡ ಹೇಳಿದರು.ದಾನಿಗೊಂಡ ಸಮೂಹ ಸಂಸ್ಥೆಗಳ ಸಿದ್ಧಾಂತ ನಗರದ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಪಾರಿತೋಷಕ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ೯೪ ಕಾಲೇಜುಗಳ ೧೫೦೦ ಕ್ರೀಡಾಳುಗಳು, ೬೨ ತರಬೇತುದಾರರು, ೩೨ ನಿರ್ಣಾಯಕರು ಪಾಲ್ಗೊಳ್ಳುವ ಪಂದ್ಯಗಳ ನಿರಾತಂಕ ಸಾಗುವಿಕೆಗೆ ಊಟ, ಉಪಾಹಾರ ಮತ್ತು ವಸತಿ ವ್ಯವಸ್ಥೆಯನ್ನು ಮೊದಲೇ ಮಾಡಿಕೊಳ್ಳಲಾಗಿತ್ತು. ಪಂದ್ಯಗಳು ಸರಾಗವಾಗಿ ಸಾಗಲು ಫ್ಲೂಡ್‌ಲೈಟ್ ವ್ಯವಸ್ಥೆಯ ೬ ಸುಸಜ್ಜಿತ ವಿಶಾಲ ಆಟದ ಮೈದಾನ ಸಜ್ಜುಗೊಳಿಸಲಾಗಿತ್ತು. ಪ್ರಮುಖವಾಗಿ ೧೨ ತಂಡಗಳ ಸಮಿತಿ ರಚಿಸಿ, ಅವುಗಳಿಗೆ ಉಪ ಸಮಿತಿಗಳನ್ನು ಸೇರಿಸಿ ಖಚಿತ ಕಾರ್ಯಗಳ ಉಸ್ತುವಾರಿ ನೇಮಿಸಿದೆವು. ಪ್ರಕೃತಿಯೂ ನಮ್ಮೊಡನೆ ಸಹಕರಿಸಿದ ಕಾರಣ ಮಳೆಯು ಅಡ್ಡಿಯಾಗಲಿಲ್ಲ. ಶಿಕ್ಷಣ ಇಲಾಖೆ ತೀರ್ಪುಗಾರರನ್ನು ಕಳಿಸಿದ್ದರಿಂದ ಪಂದ್ಯಾವಳಿ ಪಾರದರ್ಶಕತೆ ಕಾಯ್ದುಕೊಳ್ಳಲು ನೆರವಾಯಿತು. ರಾಜೀವಗಾಂಧಿ ವಿಶ್ವವಿದ್ಯಾಲಯ ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಗ್ರಾಮೀಣ ಭಾಗವಾದ ತೇರದಾಳದ ನಮ್ಮ ಸಂಸ್ಥೆಗೆ ರಾಜ್ಯಮಟ್ಟದ ಪಂದ್ಯಾವಳಿ ನಡೆಸಲು ವಿಶ್ವಾಸವಿರಿಸಿ ನೀಡಿದ ಅವಕಾಶವನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ನಮಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮುಧೋಳದ ಡಾ.ಉದಯ ನಾಯಕ ಮಾತನಾಡಿ, ಡಾ.ಮಹಾವೀರ ದಾನಿಗೊಂಡ ಮತ್ತು ಡಾ.ಪುಷ್ಪದಂತರು ಅಹರ್ನಿಶಿ ಶ್ರಮಿಸಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದ್ದು, ಇಲ್ಲಿನ ಸೌಕರ್ಯಗಳು ಮತ್ತು ಹಸಿರುಮಯ ಕ್ಯಾಂಪಸ್ ನಿಂದ ಶಿಕ್ಷಣ ಕಾಶಿಯಾಗಿದೆ. ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸುವ ಮೂಲಕ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆ ತನ್ನ ಬದ್ಧತೆ ತೋರಿ ಯಶಸ್ವಿಗೊಳಿಸುವ ಮೂಲಕ ಉತ್ತರ ಕರ್ನಾಟಕದ ಸಂಸ್ಥೆಗಳು ಯಾರಿಗೂ ಕಮ್ಮಿಯಿಲ್ಲವೆಂದು ನಿರೂಪಿಸಿದೆ ಎಂದರು.ವೇದಿಕೆಯಲ್ಲಿ ವಿ.ವಿ.ಕ್ರೀಡಾ ಸಂಯೋಜಕ ಡಾ. ಜೋಸೆಫ್ ಅನೀಲ, ಪ್ರಾಚಾರ್ಯ ಡಾ.ಪ್ರಭಾಕರ ಅಪರಾಜ, ದೈಹಿಕ ಶಿಕ್ಷಣ ನಿರ್ದೇಶಕ ರಾಮು ಹಾಡಕರ ಉಪಸ್ಥಿತರಿದ್ದರು.