ಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್‌ ನೀರು ಪೋಲು

| Published : Jul 06 2024, 12:57 AM IST / Updated: Jul 06 2024, 12:56 PM IST

ಸಾರಾಂಶ

ಭದ್ರಾ ಜಲಾಶಯದಲ್ಲಿ ದೊಡ್ಡದೊಂದು ಯಡವಟ್ಟು ನಡೆದಿದ್ದು, ಆ ಯಡವಟ್ಟಿನಿಂದಾಗಿ ಡ್ಯಾಂಗೆ ಹರಿಯುತ್ತಿರುವ ಒಳಹರಿವಿನಷ್ಟೆ ಪ್ರಮಾಣದ ನೀರು ಸಂಗ್ರಹವಾಗದೇ ನದಿಗೆ ಹರಿಯುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

 ಶಿವಮೊಗ್ಗ : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್‌ ನೀರು ಪೋಲಾಗುತ್ತಿದ್ದು, ಗೇಟ್‌ ನಿರ್ವಹಣೆ ವೇಳೆ ತಾಂತ್ರಿಕ ದೋಷ ಉಂಟಾಗಿ ಗೇಟ್‌ ಬಂದ್‌ ಆಗದೆ ಇರುವುದರಿಂದ ನೀರು ಹೊಳೆಗೆ ಹರಿದು ಹೋಗುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಭದ್ರಾ ಜಲಾಶಯದಲ್ಲಿ ದೊಡ್ಡದೊಂದು ಯಡವಟ್ಟು ನಡೆದಿದ್ದು, ಆ ಯಡವಟ್ಟಿನಿಂದಾಗಿ ಡ್ಯಾಂಗೆ ಹರಿಯುತ್ತಿರುವ ಒಳಹರಿವಿನಷ್ಟೆ ಪ್ರಮಾಣದ ನೀರು ಸಂಗ್ರಹವಾಗದೇ ನದಿಗೆ ಹರಿಯುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ನದಿಗೆ ನೀರು ಹರಿಸಲು ಎರಡು ಸ್ಲೂಯಿಸ್‌ ಗೇಟ್‌ ಅಥವಾ ರಿವರ್‌ ಗೇಟ್‌ ನಿರ್ಮಿಸಲಾಗಿದೆ. ಈ ಪೈಕಿ ಒಂದು ಗೇಟ್‌ನಿಂದ ಅನಾಯಾಸವಾಗಿ ನೀರು ಹೊಳೆಗೆ ಹರಿದು ಹೋಗುತ್ತಿದೆ. ಮಳೆಗಾಲಕ್ಕೂ ಮೊದಲು ಭದ್ರಾ ಜಲಾಶಯದ ನಿರ್ವಹಣೆ ಮಾಡಬೇಕು. ಆದರೆ ಮಳೆಗಾಲದ ಹೊತ್ತಿಗೆ ನಿರ್ವಹಣೆ ಮಾಡಲು ಮುಂದಾಗಿದ್ದರು ಎಂಬ ಆರೋಪವಿದೆ. ಈ ಸಂದರ್ಭ ರಿವರ್‌ ಗೇಟ್‌ಗಳ ಪೈಕಿ ಒಂದು ಗೇಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ನೀರು ಹರಿದು ಹೋಗುತ್ತಿದೆ.

ಡ್ಯಾಂಗೆ ಸಂಬಂಧಿಸಿದಂತೆ ರಿಪೇರಿಯನ್ನು ಅಧಿಕಾರಿಗಳು ಮಳೆಗಾಲದಲ್ಲಿ ಕೈಗೊಂಡಿದ್ದಾರೆ. ಜಲಾಶಯದಿಂದ ನದಿಗೆ ನೀರು ಬಿಡುವ ಎರಡು ಕ್ರೂಸ್ ಗೇಟ್‍ಗಳಿವೆ. ಈ ಗೇಟ್‍ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದನ್ನ ಈಗ ಪರಿಶೀಲನೆ ಮಾಡಿದ್ದಾರೆ.

ಡ್ಯಾಂ ರಿವರ್ಸ್ ಗೇಟ್‍ನ್ನು ಎತ್ತಿಕೊಂಡು ಗೇಟಿನ ರಿಪೇರಿ ಕೈಗೊಳ್ಳಲಾಗಿದೆ. ಆದರೆ, ರಿಪೇರಿ ಮುಗಿದ ಮೇಲೆ ಒಂದು ಡ್ಯಾಂ ರಿವರ್ಸ್ ಗೇಟ್ ಇಳಿಯುತ್ತಿಲ್ಲ. ಇದರಿಂದ ಡ್ಯಾಂಗೆ ಬರುತ್ತಿರುವ ನೀರು ಸರಾಗವಾಗಿ ಹೊರಕ್ಕೆ ಹೋಗುತ್ತಿದೆ ಎನ್ನಲಾಗಿದೆ. ಬರೋಬ್ಬರಿ ನಾಲ್ಕೈದು ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿಯುತ್ತಿದೆ. ಹೀಗಾಗಿ ಡ್ಯಾಂನಲ್ಲಿ ನೀರು ಸಂಗ್ರಹ ಪ್ರಮಾಣ ಹೆಚ್ಚುತ್ತಿಲ್ಲ. ನದಿಯಲ್ಲಿ ಸರಾಗವಾಗಿ ಹರಿಯುತ್ತಿರುವ ನೀರನ್ನು ಗಮನಿಸಿರುವ ರೈತರು ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ಪ್ರತಿಭಟನೆಯ ಎಚ್ಚರಿಕೆ ಯನ್ನು ನೀಡಿದ್ದಾರೆ.

ಸಾಮಾನ್ಯವಾಗಿ ಭದ್ರಾ ಜಲಾಶಯದಲ್ಲಿ ನೀರು ಸಂಗ್ರಹವಾಗುವುದು ನಿಧಾನ. ದೊಡ್ಡ ಡ್ಯಾಂನಿಂದ ಬೇಸಿಗೆಯಲ್ಲಿ ರೈತರಿಗೆ ವೇಳಾಪಟ್ಟಿ ನಿಗದಿಪಡಿಸಿ ನೀರು ಹರಿಸಲಾಗುತ್ತದೆ. ಮಳೆಗಾಲದಲ್ಲಿ ಡ್ಯಾಂನಲ್ಲಿ ಸಂಗ್ರಹವಾಗುವ ನೀರು ಅಧಿಕಾರಿಗಳ ಯಡವಟ್ಟಿನಿಂದ ಹೊರಕ್ಕೆ ಹೋದರೆ ಜಲಾಶಯದಲ್ಲಿ ನೀರು ಹೇಗೆ ಬೇಸಿಗೆಯಲ್ಲಿ ಉಳಿಯುತ್ತದೆ. ಬೇಸಿಗೆ ಯಲ್ಲಿ ಕೈಗೊಳ್ಳಬೇಕಾದ ರಿಪೇರಿ ಕೆಲಸವನ್ನು ಮಳೆಗಾಲದ ಹೊತ್ತಿಗೆ ಕೈಗೊಂಡಿರುವುದು ಏಕೆ ಎಂದು ರೈತರು ಪ್ರಶ್ನಿಸಿದ್ದಾರೆ. ಜಲಾಶಯದ ಅಧಿಕಾರಿಗಳ ಯಡವಟ್ಟಿನಿಂದ ರೈತರಿಗೆ ದೊಡ್ಡ ಸಮಸ್ಯೆಯಾಗುತ್ತಿದ್ದು, ವಿವಿಧ ಹಳ್ಳಿಗಳಿಂದ ರೈತರು ಜಲಾಶಯದತ್ತ ಬರುತ್ತಿದ್ದಾರೆ.

ತಾಂತ್ರಿಕ ಕಾರಣದಿಂದ ಸ್ವಲ್ಪ ಲೋಪವಾಗಿದೆ. ಆದರೆ, ಅದನ್ನು ಸರಿಪಡಿಸಲು ಸ್ವಲ್ಪಮಟ್ಟಿನ ನೀರು ಬಿಡುವುದು ಅನಿವಾರ್ಯ. ಅಧಿಕಾರಿಗಳಿಗೆ ಗಂಭೀರವಾಗಿ ಪರಿಗಣಿಸು ವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಶೀಘ್ರದಲ್ಲೇ ಇದು ಸರಿಹೋಗುತ್ತದೆ. ಆತಂಕ ಪಡುವುದು ಬೇಡ ಎಂದು ಕಾಡಾಧ್ಯಕ್ಷ ಡಾ.ಅಂಶುಮಾನ್ ಹೇಳಿದರು.