ಹಂಪಿಯಲ್ಲಿ ರಾಜ್ಯ ಮಟ್ಟದ ಯುವಜನ ಸೇವಾ ತರಬೇತಿ ಕೇಂದ್ರ

| Published : Dec 02 2023, 12:45 AM IST

ಹಂಪಿಯಲ್ಲಿ ರಾಜ್ಯ ಮಟ್ಟದ ಯುವಜನ ಸೇವಾ ತರಬೇತಿ ಕೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಸಬಲೀಕರಣ ಇಲಾಖೆಯಿಂದ ಯುವಜನರನ್ನು ಪ್ರೋತ್ಸಾಹಿಸಲು ಮತ್ತು ಅವರ ಅಭಿವೃದ್ಧಿಗಾಗಿ ರಾಜ್ಯ ಮಟ್ಟದ ಯುವಜನ ಸೇವಾ ತರಬೇತಿ ಕೇಂದ್ರ ಸ್ಥಾಪನೆಗೆ ಬೇಕಾದ 20 ಎಕರೆ ಜಾಗವನ್ನು ಹಂಪಿ ಅಥವಾ ಬಳ್ಳಾರಿ ಭಾಗದಲ್ಲಿ ಗುರುತಿಸಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಬಳ್ಳಾರಿಹಂಪಿಯಲ್ಲಿ ರಾಜ್ಯ ಮಟ್ಟದ ಯುವಜನ ಸೇವಾ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಸಂಘಗಳ ಒಕ್ಕೂಟ, ವಿವೇಕಾನಂದ ಯುವಕ ಸಂಘ ಹಾಗೂ ಸ್ಥಳೀಯ ಯುವಕ ಸಂಘಗಳ ಆಶ್ರಯದಲ್ಲಿ ನಗರದ ಡಾ. ರಾಜಕುಮಾರ್ ರಸ್ತೆಯ ಬಿಡಿಎಎ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ- 2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಸಬಲೀಕರಣ ಇಲಾಖೆಯಿಂದ ಯುವಜನರನ್ನು ಪ್ರೋತ್ಸಾಹಿಸಲು ಮತ್ತು ಅವರ ಅಭಿವೃದ್ಧಿಗಾಗಿ ರಾಜ್ಯ ಮಟ್ಟದ ಯುವಜನ ಸೇವಾ ತರಬೇತಿ ಕೇಂದ್ರ ಸ್ಥಾಪನೆಗೆ ಬೇಕಾದ 20 ಎಕರೆ ಜಾಗವನ್ನು ಹಂಪಿ ಅಥವಾ ಬಳ್ಳಾರಿ ಭಾಗದಲ್ಲಿ ಗುರುತಿಸಲಾಗುವುದು ಎಂದರು.

ಕಲಿಕೆ ಒಂದೇ ಮಾರ್ಗವಲ್ಲ, ಬದಲಾಗಿ ಅನೇಕ ರಂಗಗಳಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನಡೆಯಬೇಕು. ಪ್ರತಿಯೊಬ್ಬ ಯುವಕ- ಯುವತಿಯರಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾದ ಪ್ರತಿಭೆಯನ್ನು ಹೊಂದಿರುತ್ತಾರೆ. ಸಂಕಲ್ಪ ಇಟ್ಟುಕೊಂಡು ಗುರಿ ತಲುಪಿದರೆ, ಯಶಸ್ಸು ನಿಮ್ಮದಾಗುತ್ತದೆ ಎಂದರು.

ನಂತರದಲ್ಲಿ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಕಥೆ ಬರೆಯುವುದು, ಪೋಸ್ಟರ್ ಮೇಕಿಂಗ್, ಘೋಷಣೆ, ಛಾಯಾಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಉಪಮೇಯರ್ ಬಿ. ಜಾನಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ. ಗ್ರೇಸಿ, ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು, ಯುವಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.