ಕರ್ನಾಟಕ ರಾಜ್ಯದಲ್ಲೂ ಯೋಗಿ ಆದಿತ್ಯನಾಥ್‌ ಅವರಂತಹ ನಾಯಕತ್ವ ಬೇಕು : ಪ್ರತಾಪ್‌ ಸಿಂಹ

| Published : Sep 06 2024, 01:08 AM IST / Updated: Sep 06 2024, 11:31 AM IST

Pratap simha
ಕರ್ನಾಟಕ ರಾಜ್ಯದಲ್ಲೂ ಯೋಗಿ ಆದಿತ್ಯನಾಥ್‌ ಅವರಂತಹ ನಾಯಕತ್ವ ಬೇಕು : ಪ್ರತಾಪ್‌ ಸಿಂಹ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಯೋಗಿ ಆದಿತ್ಯನಾಥ್‌ ಹೆಸರು ಹೇಳಿ ಇಲ್ಲಿ ಚಪ್ಪಾಳೆ ತಟ್ಟುತ್ತೇವೆ. ಉತ್ತರಪ್ರದೇಶದ ಪೊಲೀಸರಿಗಿಂತ ನಮ್ಮವರೇನು ಕಡಿಮೆ ಇಲ್ಲ. ಕರ್ನಾಟಕದಲ್ಲೂ ಯೋಗಿ ಆದಿತ್ಯನಾಥ್‌ರಂತಹ ನಾಯಕರು ಬೇಕು ಎಂದವರು ಹೇಳಿದರು.

 ಸುಳ್ಯ :  ಕರ್ನಾಟಕ ರಾಜ್ಯಕ್ಕೆ ಯೋಗಿ ಆದಿತ್ಯನಾಥ್‌ ಅವರಂತಹ ನಾಯಕತ್ವ ಬೇಕೇ ಹೊರತು ಜಾತಿವಾದಿ ನಾಯಕರಲ್ಲ. ದುಡ್ಡು ಮಾಡುವ, ರಿಯಲ್‌ ಎಸ್ಟೇಟ್‌ ಮಾಡುವವರಿಗೆ ನಾಯಕತ್ವ ನೀಡುವ ಬದಲು ಧರ್ಮ ಬದ್ಧತೆ ಇರುವ ನಾಯಕರಿಗೆ ನಾಯಕತ್ವ ನೀಡಬೇಕು ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಪರೋಕ್ಷವಾಗಿ ಸ್ವಪಕ್ಷ ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಗುಡುಗಿದ್ದಾರೆ.

ಬುಧವಾರ ರಾತ್ರಿ ಸುಳ್ಯದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ದಿಕ್ಸೂಚಿ ಭಾಷಣದ ವೇಳೆ ಅವರು ಈ ಮಾತುಗಳನ್ನಾಡಿದರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಕೆಲವು ಹಿಂದೂ ಸಂಘಟನೆ ನಾಯಕರು ಸ್ಥಳೀಯ ಪೊಲೀಸ್‌ ಇಲಾಖೆಯ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದ್ದರು. ಆ ಬಳಿಕ ಮಾತನಾಡಿದ ಪ್ರತಾಪ್‌ ಸಿಂಹ , ಪೊಲೀಸರನ್ನೇಕೆ ದೂರುತ್ತೀರಿ ? ನಮ್ಮ ಪೊಲೀಸರಿಗೆ ಶಕ್ತಿಯೂ ಇದೆ, ಕಾರ್ಯ ಕ್ಷಮತೆಯೂ ಇದೆ. ಆದರೆ ರಾಜಕಾರಣಿಗಳಂತಹ ವ್ಯಕ್ತಿಗಳ ಕೈಗೆ ಪೊಲೀಸ್‌ ಇಲಾಖೆ ಸಿಕ್ಕಿ ಹಾಕಿಕೊಂಡಿದೆ. ಸರಿಯಾದ ನಾಯಕರು ಇಲಾಖೆಯ ಚುಕ್ಕಾಣಿ ಹಿಡಿದರೆ ಪೊಲೀಸ್‌ ಇಲಾಖೆ ಸಮಾಜದ ಕೆಲಸವನ್ನೂ ಮಾಡುತ್ತದೆ, ರಾಷ್ಟ್ರೀಯತೆ ಕೆಲಸವನ್ನೂ ಮಾಡುತ್ತದೆ ಎಂದರು.

ಇಲ್ಲಿನ ಪ್ರವೀಣ್‌ ನೆಟ್ಟಾರ್‌ ಕೊಲೆಯಾದಾಗ, ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಆದಾಗ ಕೊಲೆಗಡುಕರು ಇರುವ ಜಾಗ ಗೊತ್ತಾಗಿತ್ತು. ಪೋಲೀಸರ ಕೈಯಲ್ಲಿ ಬಂದೂಕು ಇತ್ತು, ನಳಿಕೆಯಲ್ಲಿ ಕ್ಯಾಟ್ರಿಡ್ಜ್‌ ಇದ್ದವು, ಪೊಲೀಸ ಎದೆಯಲ್ಲಿ ಗುಂಡಿಗೆಯೂ ಇತ್ತು. ಆದರೆ ಟ್ರಿಗರ್‌ ಎಳೆಯುವಂತೆ ಆದೇಶ ನೀಡಲು ಬಿಜೆಪಿ ಸರ್ಕಾರವನ್ನು ತಡೆದವರಾರು? ಎಂದು ಪ್ರಶ್ನಿಸಿದರು.

ನಾವು ಯೋಗಿ ಆದಿತ್ಯನಾಥ್‌ ಹೆಸರು ಹೇಳಿ ಇಲ್ಲಿ ಚಪ್ಪಾಳೆ ತಟ್ಟುತ್ತೇವೆ. ಉತ್ತರಪ್ರದೇಶದ ಪೊಲೀಸರಿಗಿಂತ ನಮ್ಮವರೇನು ಕಡಿಮೆ ಇಲ್ಲ. ಕರ್ನಾಟಕದಲ್ಲೂ ಯೋಗಿ ಆದಿತ್ಯನಾಥ್‌ರಂತಹ ನಾಯಕರು ಬೇಕು ಎಂದವರು ಹೇಳಿದರು.

ಪರಧರ್ಮ ಸಹಿಷ್ಣುತೆ ಇಲ್ಲದವರ ಜತೆ ಸಹಿಷ್ಣುತೆಯಿಂದ ಬಾಳಲು ಸಾಧ್ಯವೇ ? ಪಕ್ಕದ ಕಾಸರಗೋಡನ್ನು ನೋಡಿಯೂ ನಮಗೆ ಬುದ್ಧಿ ಬಾರದಿದ್ದರೆ ಕಷ್ಟ. ಪರಶುರಾಮನ ನಾಡು ಉಳಿದೀತಾ? ಎಂದು ಅವರು ಪ್ರಶ್ನಿಸಿದರು