ಸಾರಾಂಶ
- ಕೇಂದ್ರ ರೇಷ್ಮೆ ಮಂಡಳಿ ಆಯೋಜನೆ: ಇಲಾಖೆ ಉಪನಿರ್ದೇಶಕ ಪಿ.ಎಲ್.ಚಂದ್ರಪ್ಪ ಮಾಹಿತಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ನನ್ನ ರೇಷ್ಮೆ ನನ್ನ ಹೆಮ್ಮೆ ಎಂಬ ಮಹಾತಂತ್ರಜ್ಞಾನ ಹಂಚಿಕೆ ಅಭಿಯಾನವನ್ನು ಕೇಂದ್ರ ರೇಷ್ಮೆ ಮಂಡಳಿ ದೇಶವ್ಯಾಪ್ತಿ ಅಭಿಯಾನ ಆರಂಭಿಸಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಪಿ.ಎಲ್.ಚಂದ್ರಪ್ಪ ತಿಳಿಸಿದ್ದಾರೆ.
ಕೇಂದ್ರ ರೇಷ್ಮೆ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ತಂತ್ರಜ್ಞಾನಗಳು ಲಭ್ಯವಿದ್ದರೂ, ರೇಷ್ಮೆ ಕೃಷಿ ರೈತರು ಇನ್ನೂ ಹಳೆಯ ಪದ್ಧತಿಗಳನ್ನೇ ಅವಲಂಬಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ತಂತ್ರಜ್ಞಾನಗಳ ಪರಿಚಯದ ಕೊರತೆ. ಈ ಅಂತರ ದೂರಗೊಳಿಸುವ ಉದ್ದೇಶದಿಂದ ಈ ಅಭಿಯಾನದಡಿ ಕೇಂದ್ರ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆ, ಮೈಸೂರಿನಲ್ಲಿ ಅಭಿವೃದ್ಧಿಪಡಿಸಲಾದ ನೂತನ ತಂತ್ರಜ್ಞಾನಗಳನ್ನು ಫಲಪ್ರದವಾಗಿ ಅನುಷ್ಠಾನಗೊಳಿಸಲು ದಾವಣಗೆರೆ ಜಿಲ್ಲೆ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.ಸಿಎಸ್‌ಆರ್‌ಟಿಐ ವಿಜ್ಞಾನಿಗಳು ಮತ್ತು ರಾಜ್ಯ ರೇಷ್ಮೆ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ವಿಜ್ಞಾನಿ ಡಾ.ಮಂಜಪ್ಪ ಅವರನ್ನು ದಾವಣಗೆರೆ ಜಿಲ್ಲಾ ಸಂಯೋಜಕರಾಗಿ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಅವರು 8 ತಂತ್ರಜ್ಞಾನ ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ ಎಂದಿದ್ದಾರೆ.
ವಿವಿಧೆಡೆ ಜಾಗೃತಿ ಕಾರ್ಯಕ್ರಮ:ಈ ಚಟುವಟಿಕೆ ಭಾಗವಾಗಿ ಆ.5ರಂದು ದಾವಣಗೆರೆ ತಾಲೂಕಿನ ಕರಿಲಕ್ಕೆನಹಳ್ಳಿಯಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 43 ರೇಷ್ಮೆ ಬೆಳೆಗಾರರಿಗೆ ನೂತನ ತಂತ್ರಜ್ಞಾನಗಳು, ಉತ್ತಮ ಗುಣಮಟ್ಟದ ಮಲ್ಬರಿ ಸೊಪ್ಪನ್ನು ಉತ್ಪಾದಿಸಲು ರೈತರು ಅನುಸರಿಸಬೇಕಾದ ತಂತ್ರಜ್ಞಾನಗಳಾದ ಮಣ್ಣಿನ ಪರೀಕ್ಷೆ, ಹನಿ ನೀರಾವರಿ, ಸಾವಯವ ಗೊಬ್ಬರಗಳ ಬಳಕೆ, ಹೊಸ ಹಿಪ್ಪುನೇರಳೆ ತಳಿ, ಹಿಪ್ಪುನೇರಳೆ ಬೆಸಾಯ ಪದ್ದತಿ, ಹಿಪ್ಪುನೇರಳೆಗೆ ಮತ್ತು ರೇಷ್ಮೆ ಹುಳುವಿಗೆ ತಗುಲುವ ಪೀಡೆಗಳು ಮತ್ತು ರೋಗಗಳು, ಅವುಗಳ ನಿರ್ವಹಣೆ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು ಎಂದಿದ್ದಾರೆ.
ಆ.6ರಂದು ಹೊನ್ನಾಳಿ ತಾಲೂಕಿನ ಮದನಬಾವಿಯ ಶೇಖರಪ್ಪ ರೇಷ್ಮೆ ಬೆಳೆಗಾರರ ತೋಟದಲ್ಲಿ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮ ನಡೆಯಿತು. 37 ರೈತರಿಗೆ ರೇಷ್ಮೆಹುಳು ಸಾಕಣೆ ಮನೆಯ ಸ್ವಚ್ಛತೆ, ನುಶಿ, ಬಿಳಿನೋಣ ಮತ್ತು ಥ್ರಿಪ್ಸ್ ನುಶಿ ಕ್ರಿಮಿನಾಶಕಗಳ ಸಿಂಪರಣೆ ವಿಧಾನ, ಮಣ್ಣು ಸಂಗ್ರಹಣೆಯ ವಿಧಾನ ಇತ್ಯಾದಿಗಳ ಪ್ರದರ್ಶನ ನೀಡಲಾಯಿತು.ಕಾರ್ಯಕ್ರಮದಲ್ಲಿ ಸಿಎಸ್‌ಆರ್‌ಟಿಐ ವಿಜ್ಞಾನಿ ಡಾ.ಮಂಜಪ್ಪ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಪಿ. ಎಲ್., ಮತ್ತು ಸಹಾಯಕ ನಿರ್ದೇಶಕ ಡಾ.ಎಸ್.ಎ.ಶ್ರೀಹರ್ಷ, ರೇಷ್ಮೆ ನಿರೀಕ್ಷಕ ಸಿ. ಪ್ರದೀಪ್ ರೇಷ್ಮೆ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ವಿವರವಾಗಿ ಮಾಹಿತಿ ನೀಡಿದರು.
- - --7ಕೆಡಿವಿಜಿ35.ಜೆಪಿಜಿ:
ದಾವಣಗೆರೆ ತಾಲೂಕಿನ ಕರಿಲಕ್ಕೆನಹಳ್ಳಿ, ಮದನಬಾವಿಯಲ್ಲಿ ರೇಷ್ಮೆ ಬೆಳೆಗಾರರಿಗೆ ತಂತ್ರಜ್ಞಾನದ ಆಭಿಯಾನ ನಡೆಯಿತು.