ರಾಜ್ಯ ಸರ್ಕಾರವು ಗೃಹಜ್ಯೋತಿ ಹಣವನ್ನು ಜನರಿಂದವಸೂಲಿ ಮಾಡಲ್ಲ : ಇಂಧನ ಸಚಿವ ಕೆ.ಜೆ. ಜಾರ್ಜ್‌

| N/A | Published : Feb 25 2025, 12:46 AM IST / Updated: Feb 25 2025, 06:55 AM IST

electricity bill
ರಾಜ್ಯ ಸರ್ಕಾರವು ಗೃಹಜ್ಯೋತಿ ಹಣವನ್ನು ಜನರಿಂದವಸೂಲಿ ಮಾಡಲ್ಲ : ಇಂಧನ ಸಚಿವ ಕೆ.ಜೆ. ಜಾರ್ಜ್‌
Share this Article
  • FB
  • TW
  • Linkdin
  • Email

ಸಾರಾಂಶ

  ಗೃಹಜ್ಯೋತಿ ಹಣವನ್ನು ಮುಂಗಡವಾಗಿಯೇ ಎಸ್ಕಾಂಗಳಿಗೆ ಪಾವತಿಸುತ್ತಿದೆ. ಯಾವುದೇ ಕಾರಣಕ್ಕೂ ಗೃಹಜ್ಯೋತಿ ಹಣ ಗ್ರಾಹಕರಿಂದ ವಸೂಲಿ ಮಾಡುವುದಿಲ್ಲ. ಈ ಬಗ್ಗೆ ಕೆಇಆರ್‌ಸಿಗೆ ಅನಗತ್ಯವಾಗಿ ಪ್ರಸ್ತಾವನೆ ಸಲ್ಲಿಸಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಚೆಸ್ಕಾಂ) ನೋಟಿಸ್‌ ನೀಡುತ್ತೇವೆ  

 ಬೆಂಗಳೂರು : ರಾಜ್ಯ ಸರ್ಕಾರವು ಗೃಹಜ್ಯೋತಿ ಹಣವನ್ನು ಮುಂಗಡವಾಗಿಯೇ ಎಸ್ಕಾಂಗಳಿಗೆ ಪಾವತಿಸುತ್ತಿದೆ. ಯಾವುದೇ ಕಾರಣಕ್ಕೂ ಗೃಹಜ್ಯೋತಿ ಹಣ ಗ್ರಾಹಕರಿಂದ ವಸೂಲಿ ಮಾಡುವುದಿಲ್ಲ. ಈ ಬಗ್ಗೆ ಕೆಇಆರ್‌ಸಿಗೆ ಅನಗತ್ಯವಾಗಿ ಪ್ರಸ್ತಾವನೆ ಸಲ್ಲಿಸಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಚೆಸ್ಕಾಂ) ನೋಟಿಸ್‌ ನೀಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.ಅವಶ್ಯಬಿದ್ದರೆ ಜನರಿಂದಲೇ ನೇರ ಹಣ ಸಂಗ್ರಹಕ್ಕೆ ಅವಕಾಶ ಕೋರಿ ಚೆಸ್ಕಾಂ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದ್ದ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು. 

ಈ ವರದಿ ಭಾರೀ ಸಂಚಲನಕ್ಕೆ ಕಾರಣವಾದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಜಾರ್ಜ್‌, ‘ ರಾಜ್ಯ ಸರ್ಕಾರ ಮುಂಗಡವಾಗಿ ಹಣ ಪಾವತಿಸದಿದ್ದರೆ ಗ್ರಾಹಕರಿಂದ ವಸೂಲಿಗೆ ಅವಕಾಶ ನೀಡಬೇಕು ಎಂದು ಎಲ್ಲಾ ನಿಗಮಗಳು ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಕೇವಲ ಚೆಸ್ಕಾಂ ಮಾತ್ರ ಕೆಇಆರ್‌ಸಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಯ ಅಗತ್ಯವಿರಲಿಲ್ಲ. ಹೀಗಿದ್ದರೂ ಯಾಕೆ ಸಲ್ಲಿಕೆ ಮಾಡಿದರು ಎಂಬ ಬಗ್ಗೆ ಚೆಸ್ಕಾಂಗೆ ನೋಟಿಸ್‌ ನೀಡಿ ವಿವರಣೆ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

2005ರ ಏ.1ರಿಂದ ಅನ್ವಯವಾಗುವಂತೆ ವಿದ್ಯುತ್‌ ದರ ಹೆಚ್ಚಳಕ್ಕೆ ವಿವಿಧ ಎಸ್ಕಾಂಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ.

ಈ ವೇಳೆ ಕೆಇಆರ್‌ಸಿ (ಸಬ್ಸಿಡಿ ಪಾವತಿ ವಿಧಾನದ) ನಿಯಮಾವಳಿಯ-2008ರ 6.1ರ ನಿಯದ ಪ್ರಕಾರ ರಾಜ್ಯ ಸರ್ಕಾರ ಎಸ್ಕಾಂಗಳಿಗೆ ಮುಂಗಡವಾಗಿ ಸಬ್ಸಿಡಿ ಹಣ ಪಾವತಿಸಬೇಕು. 200 ಯುನಿಟ್‌ವರೆಗಿನ ಗೃಹ ಬಳಕೆದಾರರಿಗೆ ರಾಜ್ಯ ಸರ್ಕಾರ ಸಬ್ಸಿಡಿ ಘೋಷಣೆ ಮಾಡಿದ್ದು, (ಗೃಹಜ್ಯೋತಿ) ಯೋಜನೆಯಡಿ ಮುಂಗಡವಾಗಿ ಹಣ ಪಾವತಿಸದಿದ್ದರೆ ಗ್ರಾಹಕರಿಂದ ಸಂಗ್ರಹ ಮಾಡಲು ಅವಕಾಶ ನೀಡಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಪ್ರಸ್ತಾವನೆ ಸಲ್ಲಿಸಿದೆ.

ಬಿಜೆಪಿಯೇ ತಂದಿದ್ದ ನಿಯಮ:

ಸಬ್ಸಿಡಿ ಹಣವನ್ನು ರಾಜ್ಯ ಸರ್ಕಾರಗಳು ಎಸ್ಕಾಂಗಳಿಗೆ ಮುಂಗಡವಾಗಿ ಪಾವತಿಸಬೇಕು. ಇಲ್ಲದಿದ್ದರೆ ಗ್ರಾಹಕರಿಂದ ಎಸ್ಕಾಂಗಳು ಸಂಗ್ರಹಿಸಬಹುದು ಎಂಬ ಬಗ್ಗೆ 2008ರ ಬಿಜೆಪಿ ಅವಧಿಯಲ್ಲೇ ಕೆಇಆರ್‌ಸಿ ನಿಯಮಾವಳಿ ಮಾಡಿದೆ. ಇದನ್ನು ಚೆಸ್ಕಾಂ ಅವರು ಪ್ರಸ್ತಾಪಿಸಿರುವುದರಿಂದ ಗೊಂದಲ ಉಂಟಾಗಿದೆ. ಹೀಗಾಗಿ ಬಿಜೆಪಿಯವರು ಅನಗತ್ಯ ಆರೋಪ ಮಾಡುವುದು ಬೇಡ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಾರ್ವಜನಿಕರಿಂದ ಗೃಹಜ್ಯೋತಿ ಹಣ ವಸೂಲಿ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಮುಂಗಡ ಪಾವತಿಸುತ್ತಿದ್ದೇವೆ:

ನಾವು ಗೃಹಜ್ಯೋತಿ ಸಬ್ಸಿಡಿ ಹಣವನ್ನು ಮುಂಗಡವಾಗಿಯೇ ಪಾವತಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲೇ ಹಣ ಮೀಸಲಿಟ್ಟಿದ್ದಾರೆ. ಹೀಗಾಗಿ ಗೃಹಜ್ಯೋತಿ ಯೋಜನೆಗೆ ಯಾವುದೇ ತೊಂದರೆ ಇಲ್ಲ. ಇದನ್ನು ಹೆಚ್ಚು ಚರ್ಚೆ ಮಾಡುವುದು ಬೇಡ. ಜೀರೋ ಬಿಲ್‌ ಬರುತ್ತಿರುವ ಎಲ್ಲರಿಗೂ ಈ ಪ್ರಯೋಜನ ಮುಂದುವರೆಯಲಿದೆ. ಈ ಬಗ್ಗೆ ಯಾವುದೇ ಗೊಂದಲಗಳು ಬೇಡ ಎಂದು ಕೆ.ಜೆ. ಜಾರ್ಜ್‌ ಹೇಳಿದರು.2 ವರ್ಷ ಬಳಿಕ ದರ ಹೆಚ್ಚಳ: ಕೆ.ಜೆ.ಜಾರ್ಜ್

ವಿದ್ಯುತ್‌ ದರ ಹೆಚ್ಚಳಕ್ಕೆ ಎಸ್ಕಾಂಗಳು ಕೆಇಆರ್‌ಸಿಗೆ ಮನವಿ ಸಲ್ಲಿಸಿವೆ. ಕಳೆದ ವರ್ಷ ನಾವೇ ದರ ಹೆಚ್ಚಳ ಬೇಡ ಎಂದು ಹೇಳಿದ್ದೆವು. ದರ ಹೆಚ್ಚಿಸಿ ಎರಡು ವರ್ಷವಾಗಿದ್ದು, ನಿಯಮದಂತೆ ಎಸ್ಕಾಂಗಳು ಕೆಇಆರ್‌ಸಿಗೆ ಮನವಿ ಸಲ್ಲಿಸಿವೆ. ಕೆಇಆರ್‌ಸಿ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.