ರಾಜ್ಯದಿಂದ ವಸತಿ, ವರ್ಗಕ್ಕೆ ‘ಎಸ್ ಟ್ಯಾಕ್ಸ್’: ನಿಖಿಲ್

| Published : Jun 25 2025, 12:32 AM IST / Updated: Jun 25 2025, 12:33 AM IST

ಸಾರಾಂಶ

ರಾಜ್ಯ ಸರ್ಕಾರದವರು ‘ಎಸ್’ ಟ್ಯಾಕ್ಸ್ ಎಂಬ ನೀತಿಯನ್ನು ಜಾರಿಗೆ ತಂದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ರಾಜ್ಯ ಸರ್ಕಾರದವರು ‘ಎಸ್’ ಟ್ಯಾಕ್ಸ್ ಎಂಬ ನೀತಿಯನ್ನು ಜಾರಿಗೆ ತಂದಿದ್ದಾರೆ. ಗುತ್ತಿಗೆದಾರರಿಗೆ, ಅಧಿಕಾರಿಗಳ ವರ್ಗಾವಣೆಗೆ ಹಾಕುವ ಟ್ಯಾಕ್ಸ್ ಅಂದರೆ ‘ಎಸ್ ಟ್ಯಾಕ್ಸ್’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರಿಗೆ ವಸತಿ ಕೊಡಿಸಲು ಸ್ವಪಕ್ಷದ ನಾಯಕರೇ ಮಂತ್ರಿಗಳನ್ನು ಭೇಟಿ ಮಾಡಿದರೂ ಆಗುತ್ತಿಲ್ಲ. ಮಧ್ಯವರ್ತಿಗಳ ಮಟ್ಟದಲ್ಲಿ ವಸತಿ ಪಡೆದುಕೊಳ್ಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕೈ ನಾಯಕರು ಅಸಹಾಯಕರಾಗಿದ್ದಾರೆ. ಇವೆಲ್ಲ ನೋಡಿದಾಗ ಸರ್ಕಾರ ಎಲ್ಲಿಗೆ ಬಂದು ನಿಂತಿದೆ ಎಂದು ಅವರ ಸ್ವಪಕ್ಷೀಯರೇ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದೆ ರಾಜ್ಯವನ್ನು ಇವರು ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೋ ಗೊತ್ತಿಲ್ಲ ಎಂದರು.

ಡಿಕೆ ಬ್ರದರ್ಸ್ ಆಶಿರ್ವಾದ ಇದ್ದರೆ ಅನುದಾನ ಗ್ಯಾರಂಟಿ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಯಾರ ಆಶಿರ್ವಾದ ಎಲ್ಲಿದೆ? ಇದ್ದರೆ, ಸ್ವಪಕ್ಷದವರೇ ಯಾಕೆ ಈ ರೀತಿ ಅಸಹಾಯಕರಾಗಿದ್ದಾರೆ. ಬಾಲಕೃಷ್ಣ ಡಿಕೆ ಬ್ರದರ್ಸ್ ಆಶಿರ್ವಾದದ ಲಿಸ್ಟ್‌ನಲ್ಲಿದ್ದರಾ, ಇಲ್ವಾ? ಬಾಲಕೃಷ್ಣ ಕೂಡ ಬೊಗಳೆ ಭಾಷಣ ಮಾಡುತ್ತಿದ್ದಾರ ಎಂಬುದು ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ವಿಶೇಷ ಅನುದಾನ ಕೊಡತ್ತೇವೆ ಅಂತ ಹೇಳುತ್ತಾರೆ. ಆದರೆ, ಯಾವ ಶಾಸಕರಿಗೆ ಯಾವ ಅನುದಾನ ಸಿಕ್ಕಿದೆ. ಯಾವ ನಾಯಕರಿಗೂ ೧೦ ರೂ ಅನುದಾನ ಸಿಕ್ಕಿಲ್ಲ. ಅಭಿವೃದ್ಧಿ ಎನ್ನುವುದು ಶೂನ್ಯ ಅಷ್ಟೇ ಎಂದರು.