ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯಾದ್ಯಂತ ಕೃಷಿ ಕ್ರಿಯಾ ಯೋಜನೆ

| Published : Jul 22 2024, 01:25 AM IST

ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯಾದ್ಯಂತ ಕೃಷಿ ಕ್ರಿಯಾ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ 4,000 ಕೃಷಿ ತಾಂತ್ರಿಕ ತರಬೇತಿಗಳು ಮತ್ತು1,700 ಅಧ್ಯಯನ ಪ್ರವಾಸಗಳನ್ನು ಹಮ್ಮಿಕೊಂಡಿದ್ದು ಒಟ್ಟು 10 ಲಕ್ಷಕ್ಕೂ ಅಧಿಕ ರೈತರು ಇದರ ಪ್ರಯೋಜನ ಪಡೆಯಲಿರುವರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

‘ಶಾಶ್ವತ ಅಭಿವೃದ್ಧಿಗಾಗಿ ಸಮಗ್ರ ಯೋಜನೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಸಂಘಟಿಸಿ ಕೃಷಿ ಕ್ರಿಯಾ ಯೋಜನೆಯನ್ನು ರೂಪಿಸಿ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಅದರಂತೆ ವಿವಿಧ ಭೌಗೋಳಿಕ ಸನ್ನಿವೇಶಗಳಿಗೆ ಅನುಗುಣವಾಗಿ 2024- 25ನೇ ಸಾಲಿನಲ್ಲಿ ರಾಜ್ಯದ 96 ತಾಲೂಕುಗಳ 38,050 ಎಕರೆಯಲ್ಲಿ ಯಾಂತ್ರೀಕೃತ ಭತ್ತ ಬೇಸಾಯ, 91 ತಾಲೂಕುಗಳ 5,000 ಎಕರೆಯಲ್ಲಿ ಸಿರಿಧಾನ್ಯ ಬೇಸಾಯ, 33 ತಾಲೂಕುಗಳ 1,650 ಎಕರೆಯಲ್ಲಿ ಕಬ್ಬಿನ ಸುಸ್ಥಿರ ಬೇಸಾಯ ಮತ್ತು ಕಲ್ಯಾಣ ಕರ್ನಾಟಕ ವ್ಯಾಪ್ತಿಯ 24 ತಾಲೂಕುಗಳ 2,400 ಹೈನುಗಾರರಲ್ಲಿ ಲಾಭದಾಯಕ ಹೈನುಗಾರಿಕಾಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ರೈತರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್‌ ಎಸ್.ಎಸ್‍. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ 4,000 ಕೃಷಿ ತಾಂತ್ರಿಕ ತರಬೇತಿಗಳು ಮತ್ತು1,700 ಅಧ್ಯಯನ ಪ್ರವಾಸಗಳನ್ನು ಹಮ್ಮಿಕೊಂಡಿದ್ದು ಒಟ್ಟು 10 ಲಕ್ಷಕ್ಕೂ ಅಧಿಕ ರೈತರು ಇದರ ಪ್ರಯೋಜನ ಪಡೆಯಲಿರುವರು. ಈ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 20.00 ಕೋಟಿ ರು ಅನುದಾನವನ್ನುನಿಗದಿಗೊಳಿಸಲಾಗಿದೆ.

ಇದುವರೆಗೆರಾಜ್ಯಾದ್ಯಂತಒಟ್ಟು 30,000 ಹೆಕ್ಟೇರ್‌ನಲ್ಲಿ ಯಾಂತ್ರೀಕೃತ ಭತ್ತ ಬೇಸಾಯ, 4,000 ಹೆಕ್ಟೇರ್‌ನಲ್ಲಿ ಕಬ್ಬು ಸುಸ್ಥಿರ ಬೇಸಾಯ ಮತ್ತು 3,000 ಹೆಕ್ಟೇರ್‌ನಲ್ಲಿ ಸಿರಿಧಾನ್ಯ ಬೇಸಾಯವನ್ನು ಅನುಷ್ಠಾನಿಸಲಾಗಿದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ 4,963 ಹೈನುಗಾರರಿಗೆ ಪ್ರೇರಣೆ ನೀಡಿ ಹೈನುಗಾರಿಕೆಯನ್ನು ಅಳವಡಿಸಲಾಗಿದೆ. ಈ ಕಾರ್ಯಕ್ರಮಗಳ ಅರ್ಥಪೂರ್ಣ ಅನುಷ್ಠಾನಕ್ಕಾಗಿ ಒಟ್ಟು 5,264 ಕೃಷಿ ತಾಂತ್ರಿಕ ತರಬೇತಿ ಮತ್ತು ಅಧ್ಯಯನ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿದ್ದು ಒಟ್ಟು 75.00 ಕೋಟಿ ರು. ಅನುದಾನವನ್ನು ವಿನಿಯೋಗಿಸಲಾಗಿದೆ. ಭತ್ತ ಬೇಸಾಯದಿಂದ ವಿಮುಖರಾಗುತ್ತಿರುವ ರೈತರಿಗೆ ಯಾಂತ್ರೀಕೃತ ಭತ್ತ ಬೇಸಾಯ, ಆರೋಗ್ಯವರ್ಧಕವಾಗಿ ಸಿರಿಧಾನ್ಯಗಳು, ನೀರಿನ ಸದ್ಬಳಕೆಗಾಗಿ ಕಬ್ಬಿನ ಸುಸ್ಥಿರ ಬೇಸಾಯ ಮತ್ತು ಸಾವಯವ ಕೃಷಿಯ ಪ್ರೋತ್ಸಾಹಕ್ಕಾಗಿ ಹೈನುದ್ಯೋಮವನ್ನು ತಾಲೂಕು ಮಟ್ಟದಲ್ಲಿ ಅನುಷ್ಠಾನಿಸಲು 256 ಮಂದಿ ಕೃಷಿ ಮೇಲ್ವಿಚಾರಕರು ಸ್ಥಳೀಯ ಪ್ರಾಥಮಿಕ ಮಟ್ಟದ ಕಾರ್ಯಕರ್ತರ ಮತ್ತು ಪ್ರಗತಿಬಂಧು ತಂಡಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಮಟ್ಟದಲ್ಲಿ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳು, ಪರ್ಯಾಯ ಬೆಳೆ ಪದ್ಧತಿಗಳು, ತರಬೇತಿ, ಅಧ್ಯಯನ ಪ್ರವಾಸ ಇತ್ಯಾದಿಗಳ ಮೂಲಕ ಖರ್ಚು-ವೆಚ್ಚಗಳನ್ನು ನಿಯಂತ್ರಣಗೊಳಿಸಿ ನಿರಂತರ ಆದಾಯ ಪಡೆಯಲು ಮಾರ್ಗದರ್ಶನ ಮತ್ತು ಪ್ರೇರಣೆ ನೀಡಲಾಗಿದೆ

- ಡಾ. ವೀರೇಂದ್ರ ಹೆಗ್ಗಡೆ---

ಪ್ರಪಂಚದ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ನಮ್ಮದೇಶವು ರಾಷ್ಟ್ರೀಯ ಆಹಾರ ಭದ್ರತೆಯನ್ನು ನಿರ್ಧರಿಸುವುದು ಅತ್ಯಂತ ಪ್ರಾಮುಖ್ಯತೆಯ ವಿಷಯವಾಗಿದೆ. ಜಲ, ನೆಲ ಮತ್ತು ಪರಿಸರಕ್ಕೆ ಪೂರಕವಾದ ಹಾಗೂ ವೈಜ್ಞಾನಿಕವಾದ ಬೇಸಾಯ ಪದ್ಧತಿಗಳ ಮೂಲಕ ಆರೋಗ್ಯಯುತವಾದ ಆಹಾರ ಬೆಳೆಗಳನ್ನು ರೈತರಿಗೆ ಸರ್ವ ಪ್ರೋತ್ಸಾಹ ನೀಡುವುದು ಹೆಗ್ಗಡೆಯವರ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಭತ್ತ ಬೇಸಾಯದ ಯಂತ್ರಶ್ರೀ, ಸಿರಿಧಾನ್ಯ ಬೇಸಾಯ ಯೋಜನೆ, ಕಬ್ಬಿನ ಸುಸ್ಥಿರ ಬೇಸಾಯ, ಹೈನುಗಾರಿಕೆ, ಕೆರೆಗಳ ಪುನಶ್ಚೇತನ, ರೈತೋತ್ಪಾದಕ ಕಂಪನಿ ಮುಂತಾದ ಕಾರ್ಯಕ್ರಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಿಸಲಾಗಿದೆ.

- ಅನಿಲ್ ಕುಮಾರ್ ಎಸ್.ಎಸ್.