ರಾಜ್ಯಾದ್ಯಂತ ಸ್ವಾಭಿಮಾನಿ ಬಳಗ ಕ್ರಾಂತಿ: ವಿನಯ್‌

| Published : Feb 24 2025, 12:31 AM IST

ಸಾರಾಂಶ

ರಾಜ್ಯವ್ಯಾಪಿ ಎಲ್ಲ ತಾಲೂಕುಗಳಿಗೂ ಭೇಟಿ ನೀಡಿ, ಸ್ವಾಭಿಮಾನಿ ಕ್ರಾಂತಿ ಮೊಳಗಿಸುವ ಜೊತೆಗೆ ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ವಿಚಾರವನ್ನೂ ಜನರ ಮುಂದಿಡಲಾಗುವುದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಹೇಳಿದ್ದಾರೆ.

- ಕೃಷಿ, ಶಿಕ್ಷಣ, ಆರೋಗ್ಯ, ಸಾಮಾಜಿಕ ವಿಚಾರ ಜನರ ಮುಂದಿಡುತ್ತೇವೆ: ಸಂಘಟನಾ ಸಭೆಯಲ್ಲಿ ರಾಜ್ಯಾಧ್ಯಕ್ಷ ಹೇಳಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯವ್ಯಾಪಿ ಎಲ್ಲ ತಾಲೂಕುಗಳಿಗೂ ಭೇಟಿ ನೀಡಿ, ಸ್ವಾಭಿಮಾನಿ ಕ್ರಾಂತಿ ಮೊಳಗಿಸುವ ಜೊತೆಗೆ ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ವಿಚಾರವನ್ನೂ ಜನರ ಮುಂದಿಡಲಾಗುವುದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಹೇಳಿದರು.

ನಗರದ ಎಸ್‌.ಎಸ್‌. ಬಡಾವಣೆ 10ನೇ ಕ್ರಾಸ್‌ನ ಸ್ವಾಭಿಮಾನಿ ಬಳಗ ಗೃಹ ಕಚೇರಿಯಲ್ಲಿ ಭಾನುವಾರ ಸಂವಿಧಾನವೇ ನಮ್ಮ ಸಿದ್ಧಾಂತ ಸಂಘಟನಾ ಸಭೆ ಹಾಗೂ ರಾಜ್ಯ, ಜಿಲ್ಲಾ, ತಾಲೂಕು ಸಮಿತಿಗಳ ರಚನೆ, ಮೈಸೂರಿನಲ್ಲಿ ನಡೆಯುವ 2 ದಿನಗಳ ನಾಯಕತ್ವ-ವ್ಯಕ್ತಿತ್ವ ವಿಕಸನ ಶಿಬಿರ, ಸಂಘಟನೆ ಬಗ್ಗೆ ಮುಕ್ತ ಚರ್ಚೆ ನಡೆಸುವ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ತಾಲೂಕಿಗೂ ಕನಿಷ್ಠ 3 ಸಲ ಭೇಟಿ ನೀಡಲಾಗುವುದು. ಡಿಸೆಂಬರ್ 2026 ರೊಳಗೆ ಅಭಿಮಾನ ಪೂರ್ಣಗೊಳಿಸುವ ಉದ್ದೇಶವಿದೆ. ರಾಜ್ಯಾದ್ಯಂತ ಸ್ವಾಭಿಮಾನಿ ಬಳಗ ಕ್ರಾಂತಿ ಎಬ್ಬಿಸಲಿದೆ. ಹೆಚ್ಚಿನ ವಿರೋಧಿಗಳು, ಟೀಕೆಗಳು, ಬಲಾಢ್ಯ ನಾಯಕರ ಪ್ರತಿರೋಧ ವ್ಯಕ್ತವಾದರೂ ಹಿಂದೆ ಸರಿಯುವುದಿಲ್ಲ. 8 ತಿಂಗಳಲ್ಲೇ ಜಿಲ್ಲಾದ್ಯಂತ ಪಾದಯಾತ್ರೆ ಮಾಡಿ, ಜನರ ಸಂಕಷ್ಟ ಆಲಿಸಿದ್ದೇನೆ ಎಂದರು.

ರಾಜ್ಯದ ಪ್ರತಿ ತಾಲೂಕಿನಲ್ಲಿ ಕನಿಷ್ಠ 50 ಸಾವಿರ ಸ್ವಾಭಿಮಾನಿಗಳಿರಬೇಕು. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. 15-20 ದಿನ ಕಲ್ಯಾಣ ಕರ್ನಾಟಕದಲ್ಲಿ ಉಳಿದು, ಪ್ರತಿ ತಾಲೂಕಿನಲ್ಲೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಜ್ಞೆ ಮೂಡಿಸಲಾಗುವುದು ಎಂದು ತಿಳಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ 43 ಸಾವಿರಕ್ಕೂ ಅಧಿಕ ಮತಗಳನ್ನು ಮತದಾರರು ನೀಡಿದ್ದಾರೆ. ಇದು ಜನರು ನೀಡಿರುವ ಪ್ರೀತಿ. ಹರಿಹರ ತಾಲೂಕಿನಲ್ಲಿ ರಸ್ತೆ, ಭೈರನಪಾದ ಏತ ಯೋಜನೆ, ಕೆರೆಗಳಿಗೆ ನೀರು ಸಿಗಬೇಕೆಂಬ ಜನರ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲು ಹೋದರೆ ಹರಿಹರಕ್ಕೆ ಬರಲು ಅನುಮತಿ ನೀಡಿದ್ದು ಯಾರೆಂದು ಬೆದರಿಕೆ ಹಾಕುವ ಮಟ್ಟಕ್ಕೆ ಕೆಲವರು ಬಂದಿದ್ದು ವಿಪರ್ಯಾಸ. ನಾನು ಮದುವೆಯಾಗಿದ್ದು ಹರಿಹರದಲ್ಲಿ. ಆ ತಾಲೂಕಿಗೆ ನಾನು ಅಳಿಯ. ನಿಸ್ವಾರ್ಥ ಸೇವೆ ಹಂಬಲ ನಮ್ಮಲ್ಲಿ ಬಲವಾಗಿದ್ದಾಗ ಸ್ವಾರ್ಥವು ನಶಿಸಿ ಹೋಗುತ್ತದೆ. ರಾಜಿಯಾಗುವ ಪ್ರಶ್ನೆ ಇಲ್ಲ ಎಂದರು.

ಬಳಗದ ಪ್ರಮುಖರಾದ ರಾಜು ಮೌರ್ಯ, ವಿರೂಪಾಕ್ಷಪ್ಪ ಪಂಡಿತ್, ಗೀತಾ ಮುರುಗೇಶ, ಕೇಶವಮೂರ್ತಿ, ಗಂಗಾಧರ, ಹಿರಿಯ ಪತ್ರಕರ್ತ ಪುರಂದರ ಲೋಕಿಕೆರೆ, ಶಿವಕುಮಾರ ಡಿ.ಶೆಟ್ಟರ್ , ಮೊಹಮ್ಮದ್ ಸಾದಿಕ್, ಎಂ.ಪ್ರವೀಣಕುಮಾರ, ಎಂ.ರಾಮಕೃಷ್ಣ, ಸುದೀಪ ಇತರರು ಇದ್ದರು.

- - -

ಬಾಕ್ಸ್‌ * ವಿಧಾನಸಭೆಗೆ ಸ್ಪರ್ಧೆ ನಿಶ್ಚಿತ: ವಿನಯಕುಮಾರ ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಯಾವುದಾದರೂ ವಿಧಾನಸಭಾ ಕ್ಷೇತ್ರಕ್ಕೆ ನಾನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತ. ಆದರೆ, ಯಾವ ಕ್ಷೇತ್ರ ಎಂಬುದನ್ನು ನಿರ್ಧರಿಸಿಲ್ಲ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ತಿಳಿಸಿದರು.

ಹರಿಹರ, ಹೊನ್ನಾಳಿ, ದಾವಣಗೆರೆ ಉತ್ತರ, ದಕ್ಷಿಣ ಹಾಗೂ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಜನರು ಕೇಳುತ್ತಿದ್ದಾರೆ. ನಾಲ್ಕೂ ಕ್ಷೇತ್ರದಿಂದ ಒತ್ತಡ ಇರುವುದು ನಿಜ. ರಾಜಕಾರಣಕ್ಕೆ ಹೆದರಿ, ಸಣ್ಣಪುಟ್ಟ ಹುದ್ದೆ ಹೋಗುತ್ತವೆಂಬ ಕಾರಣಕ್ಕೆ ದಾಸರಾಗಿ ಕೆಲವರು ಬದುಕುತ್ತಿದ್ದಾರೆ. ಇಂದಿನ ಶೇ.90 ಮಕ್ಕಳಿಗೆ ನ್ಯಾಯಯುತ, ಭಯಮುಕ್ತ ವಿದ್ಯಾಭ್ಯಾಸ ಸಿಗುತ್ತಿಲ್ಲವೆನಿಸುತ್ತಿದೆ. ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ ನಡೆಸಿದಾಗ ಇದು ಮನವರಿಕೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕನಿಷ್ಟ ಮೂಲ ಸೌಲಭ್ಯಗಳೂ ಇಲ್ಲ. ಗ್ರಂಥಾಲಯಗಳಿದ್ದರೂ, ಅವು ಕಾರ್ಯಾಚರಿಸುತ್ತಿಲ್ಲ ಎಂದು ಬೇಸರಿಸಿದರು.

- - -

ಟಾಪ್‌ ಕೋಟ್‌ ನಾನು ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ನಾಯಕರು ತಪ್ಪೆಂದರೆ, ಜನರು ಸರಿ ಅಂದರು. 20 ವರ್ಷ ಹಿಂಬಾಲಕರಾಗಿ ಓಡಾಡಿ ಸಣ್ಣಪುಟ್ಟ ಹುದ್ದೆ ಪಡೆದು ತೃಪ್ತಿಪಟ್ಟುಕೊಳ್ಳುತ್ತಾರೆ. ನಾನು ಸ್ವಾರ್ಥಿಯಾಗಿದ್ದರೆ ಸಿದ್ದರಾಮಯ್ಯರ ಕಾರಿನಲ್ಲೂ ಪ್ರಯಾಣಿಸಬಹುದಿತ್ತು. ಸಾಮಾನ್ಯನಾಗಿ ಐಎಎಸ್ ಇನ್ ಸೈಟ್ಸ್ ಸಂಸ್ಥೆ ಹುಟ್ಟು ಹಾಕಿದ್ದೇನೆ. ಕಷ್ಟಪಟ್ಟು ಕಟ್ಟಿದ್ದೇನೆ. ಯಾವ ಪಕ್ಷದವರೊಂದಿಗೆ ವ್ಯವಹಾರ ಹೊಂದಿಲ್ಲ. ರಾಜಕಾರಣಿಗಳ ಬಳಿ ಏನನ್ನೂ ಕೇಳಿಕೊಂಡಿಲ್ಲ

- ಜಿ.ಬಿ.ವಿನಯಕುಮಾರ, ರಾಜ್ಯಾಧ್ಯಕ್ಷ, ಸ್ವಾಭಿಮಾನಿ ಬಳಗ

- - - -23ಕೆಡಿವಿಜಿ4, 5: ದಾವಣಗೆರೆಯಲ್ಲಿ ಸ್ವಾಭಿಮಾನಿ ಬಳಗದ ರಾಜ್ಯಮಟ್ಟದ ಸಭೆಯಲ್ಲಿ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಇತರರು ಪಾಲ್ಗೊಂಡರು.