ರಾಜ್ಯಾದ್ಯಂತ ಜೆಡಿಎಸ್ - ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಮಾಜಿ ಪ್ರಧಾನಿ ದೇವೇಗೌಡ ವಿಶ್ವಾಸ

| Published : Apr 23 2024, 12:48 AM IST

ರಾಜ್ಯಾದ್ಯಂತ ಜೆಡಿಎಸ್ - ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಮಾಜಿ ಪ್ರಧಾನಿ ದೇವೇಗೌಡ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಯಡಿಯೂರಪ್ಪ ಹಾಗೂ ನಾವು ರಾಜ್ಯಾದ್ಯಂತ ಹಲವು ವೇದಿಕೆಗಳನ್ನು ಹಂಚಿಕೊಂಡಿದ್ದೇವೆ, ನಮ್ಮ ಶ್ರಮದ ಮೇಲೆ ನರೇಂದ್ರ ಮೋದಿಯವರು ತುಂಬಾ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ, ಆ ವಿಶ್ವಾಸವನ್ನು ನಾವು ಉಳಿಸಬೇಕು, ಇಡೀ ರಾಜ್ಯದ ಎಲ್ಲಾ ಮತದಾರು ಹಾಗೂ ಎರಡು ಪಕ್ಷದ ಕಾರ್ಯಕರ್ತರು ಬಿಜೆಪಿಯ ಹೋರಾಟಕ್ಕೆ ಕಂಕಣ ಕಟ್ಟಿ, ದೇಶವನ್ನು ಉಳಿಸಬೇಕೆಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣರನ್ನು ಜಿಲ್ಲಾ ಮತದಾರ ಪ್ರಭುಗಳು ಪ್ರಚಂಡ ಬಹುಮತಗಳಿಂದ ಗೆಲ್ಲಿಸಬೇಕೆಂದು ಮಾಜಿ ಪ್ರಧಾನಿ ಮಂತ್ರಿ ದೇವೇಗೌಡರು ಮನವಿ ಮಾಡಿದರು.

ಹಳೇಬೀಡಿನ ಕಲ್ಪತರು ವಿದ್ಯಾಸಂಸ್ಥೆಯ ಆವರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ನಡೆಸಿದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜನತೆಯನ್ನು ಸುರಕ್ಷಿತವಾಗಿ ಕಾಪಾಡಬೇಕೆಂಬ ಉದ್ದೇಶದಿಂದ ಜೆಡಿಎಸ್ ಮತ್ತು ಬಿಜೆಪಿ ಪಕ್ಷವನ್ನು ರಾಜ್ಯಾದ್ಯಂತ ಗೆಲ್ಲಿಸುವ ಗುರಿ ನಮ್ಮದಾಗಿದೆ. ಪ್ರಪಂಚದ ಶ್ರೇಷ್ಠ ನಾಯಕ ಎಂದರೆ ಅದು ನರೇಂದ್ರ ಮೋದಿ. ಈ ದೇಶ ಸದೃಢವಾಗಿ ಬೆಳೆಯಬೇಕಾದರೆ ರಾಜ್ಯಾದ್ಯಂತ ಯುವಕರು ಮತದಾನದಲ್ಲಿ ಭಾಗವಹಿಸಬೇಕು, ಇಡೀ ದೇಶವನ್ನು ಸುರಕ್ಷಿತವಾಗಿ ಕಾಪಾಡಲು ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡಬೇಕು ಎಂದು ಎಲ್ಲರಲ್ಲೂ ಮನವಿ ಮಾಡಿಕೊಂಡರು.

ಯಡಿಯೂರಪ್ಪ ಹಾಗೂ ನಾವು ರಾಜ್ಯಾದ್ಯಂತ ಹಲವು ವೇದಿಕೆಗಳನ್ನು ಹಂಚಿಕೊಂಡಿದ್ದೇವೆ, ನಮ್ಮ ಶ್ರಮದ ಮೇಲೆ ನರೇಂದ್ರ ಮೋದಿಯವರು ತುಂಬಾ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ, ಆ ವಿಶ್ವಾಸವನ್ನು ನಾವು ಉಳಿಸಬೇಕು, ಇಡೀ ರಾಜ್ಯದ ಎಲ್ಲಾ ಮತದಾರು ಹಾಗೂ ಎರಡು ಪಕ್ಷದ ಕಾರ್ಯಕರ್ತರು ಬಿಜೆಪಿಯ ಹೋರಾಟಕ್ಕೆ ಕಂಕಣ ಕಟ್ಟಿ, ದೇಶವನ್ನು ಉಳಿಸಬೇಕೆಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಶಾಂತಿಗಾಗಿ ಬಿಜೆಪಿ ಸರ್ಕಾರ ಬರಬೇಕು. ಈ ರಾಜ್ಯ ಸಕಾರ್ರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಎಲ್ಲಾ ಕಡೆ ಕೋಮು ಗಲಭೆಗಳು ಎದ್ದು ಕಾಣುತ್ತಿವೆ. ಹಾಗಾಗಿ ದೇಶದಲ್ಲಿ ಸುಭದ್ರ ಸರ್ಕಾರ ರಚನೆಯಾಗಬೇಕೆಂದರೆ ಬಿಜೆಪಿ ಸರ್ಕಾರವನ್ನು ಗೆಲ್ಲಿಸಬೇಕೆಂದರು.

ಎನ್ ಡಿಎ ಸರ್ಕಾರದಲ್ಲಿ ಸಾಮಾಜಿಕ, ಭೌತಿಕ, ಡಿಜಿಟಲ್ ಸೌಕರ್ಯದ ಮೇಲೆ ಹೂಡಿಕೆ ಮಾಡಲಾಗುತ್ತದೆ. ಕಳೆದ ವರ್ಷ ೧೦ ವರ್ಷಗಳಲ್ಲಿ ಬಡವರಿಗೆ ೧ ಕೋಟಿ ಮನೆಗಳನ್ನು ನೀಡಲಾಗಿದೆ. ೮೪ ಸಾವಿರ ಮನೆಗಳನ್ನು ಬೆಂಗಳೂರಿನಲ್ಲಿ ನೀಡಿದೆ, ಮಧ್ಯಮ ವರ್ಗದ ಜನರ ಕನಸುಗಳ ನನಸಾಗಿಸಲು ಬಡ್ಡಿ, ಸಬ್ಸಿಡಿ ಧನಸಹಾಯವನ್ನು ನೀಡಿದೆ. ಈ ಮೂಲಕ ಮಧ್ಯಮ ವರ್ಗದ ಜನರ ೬೦ ಸಾವಿರ ಕೋಟಿ ರು.ಗಳನ್ನು ಉಳಿತಾಯ ಮಾಡಿದೆ. ಮನೆ ನಿರ್ಮಾಣ ಅಪೂರ್ಣವಾಗಬಾರದು ಎಂದು ಕೇಂದ್ರವೇ ಹಣವನ್ನು ಗುತ್ತಿದಾರರಿಗೆ ನೀಡಿದೆ. ಒಟ್ಟಾರೆ ಕೇಂದ್ರ ಸರ್ಕಾರ ಬಡವರ ಹಸಿವನ್ನು ನೀಗಿಸಿದೆ ಎಂದು ತಿಳಿಸಿದರು.

ಬೇಲೂರು ಕ್ಷೇತ್ರ ಶಾಸಕ ಸುರೇಶ್ ಮಾತನಾಡಿ, ನಮ್ಮೆಲ್ಲರ ನಾಯಕರಾದ ದೇವೇಗೌಡರು ಮತ್ತು ಯಡಿಯೂರಪ್ಪನವರನ್ನು ಒಂದೇ ವೇದಿಕೆ ಮೇಲೆ ಕಂಡು ಸಂತೋಷವಾಗಿದೆ, ಪ್ರಜ್ವಲ್ ರೇವಣ್ಣನವರನ್ನು ೩ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲೇಬೇಕು ಎಂಬುದು ನಮ್ಮ ಗುರಿಯಾಗಿದೆ, ಇದಕ್ಕೆ ಎಲ್ಲಾ ಕಾರ್ಯಕರ್ತರು ಕಂಕಣಬದ್ಧರಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು. ಬೇಲೂರು ಮಾಜಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಲಿಂಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್, ಬೇಲೂರು ಮಂಡಲದ ಅಧ್ಯಕ್ಷ ಆನಂದ್, ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತ ಸುಬ್ಬರಾವ್ ಹಾಗೂ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ಕಾಂಗ್ರೆಸ್ ನಿಂದ ರೈತವಿರೋಧಿ ಧೋರಣೆ: ಬಿಎಸ್ ವೈ:

ಕೇಂದ್ರ ಸರ್ಕಾರದಿಂದ ೬ ಸಾವಿರ ರು.ಗಳ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ೪ ಸಾವಿರ ರು. ಗಳ ನೆರವು ಸೇರಿಸಿ ವಾರ್ಷಿಕ ೧೦ ಸಾವಿರ ರು. ರೈತರ ನೆರವು ಯೋಜನೆಯನ್ನು ಕಾಂಗ್ರೆಸ್ ರದ್ದುಗೊಳಿಸಿದೆ. ಇದು ರೈತರ ವಿರೋಧಿ ಸರ್ಕಾರದ ಧೋರಣೆಯಾಗಿದೆ, ಇಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ರಾಜ್ಯದ ಅಭಿವೃದ್ಧಿ ನಿರ್ಲಕ್ಷಿಸಿದ ಈ ಸರ್ಕಾರಕ್ಕೆ ಛೀಮಾರಿ ಹಾಕಬೇಕು. ಎಲ್ಲಿ ನೋಡಿದರೂ ರಸ್ತೆಗಳು ಗುಂಡಿಮಯವಾಗಿವೆ, ರಸ್ತೆಗುಂಡಿಗಳನ್ನು ಮುಚ್ಚುವ ಯೋಗ್ಯತೆ ಈ ಸರಕಾರಕ್ಕೆ ಇಲ್ಲ, ಇಂಥ ಸರ್ಕಾರವು ಇದ್ದರೂ ಒಂದೇ ಇಲ್ಲದ್ದಿರೂ ಒಂದೇ, ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಚಿತ್ರಣ ಬದಲಾವಣೆಯಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಪ್ರಧಾನಮಂತ್ರಿ ಯಾರು ಎಂಬುದೇ ತಿಳಿದಿಲ್ಲ, ಅವರಲ್ಲಿ ಗೊಂದಲ ಪ್ರಾರಂಭವಾಗಿದೆ ಎಂದರು.