ಧೂಮಪಾನ ಮದ್ಯಪಾನದಂತಹ ವ್ಯಸನಗಳು ಹದಿಹರೆಯದ ಮಕ್ಕಳ ಮೇಲೆ ಪರಿಣಾಮ ಬೀರಿ ಮಕ್ಕಳ ಮತ್ತು ಕುಟುಂಬದ ಬದುಕನ್ನು ನಾಶ ಮಾಡುತ್ತದೆ.

ರೋಣ: ತಂಬಾಕು, ಮದ್ಯಪಾನ ಇನ್ನೂ ಕೆಲವು ಕಾನೂನುಬಾಹಿರ ಮಾದಕ ವಸ್ತುಗಳು ಮನುಷ್ಯನ ಮೆದುಳಿನ ಮೇಲೆ ಮತ್ತು ಬರುವ ಪರಿಣಾಮ ಬೀರುತ್ತವೆ. ಜತೆಗೆ ನಶೆಯಲ್ಲಿರುವಂತೆ ಮಾಡುವ ಮಾದಕ ಪದಾರ್ಥಗಳು ಪ್ರಾಣಕ್ಕೆ ಕಂಟಕವಾಗುವುವು. ಆದ್ದರಿಂದ ಜನತೆ ಮಾದಕ ವ್ಯಸನದಿಂದ ದೂರವಿರಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ತಿಳಿಸಿದರು.ಗುರುವಾರ ಪಟ್ಟಣದ ಶರಣಬಸವೇಶ್ವರ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಗದಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಶರಣಬಸವೇಶ್ವರ ಪ್ರೌಢಶಾಲೆ ರೋಣ ಇವರ ಆಶ್ರಯದಲ್ಲಿ ಜರುಗಿದ ನಶಾ ಮುಕ್ತ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಾಂಜಾ, ಅಫೀಮು, ತಂಬಾಕು, ಮದ್ಯಪಾನ ಕೊಕೇನ್, ಹೇರಾಯಿನ್, ಮೆಥಾಫೆಂಟಾಮಿನಂಥ ಮಾದಕ ದ್ರವ್ಯಗಳು ಮನುಷ್ಯನ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರಿ ವಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸ್ವಾಸ್ತ್ಯವನ್ನು ಹಾಳು ಮಾಡುವುದಲ್ಲದೆ ಆತ್ಮಹತ್ಯೆ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗಲು ಮಾದಕ ವಸ್ತುಗಳು ಕಾರಣವಾಗುತ್ತವೆ. ಪಾಲಕರು ಮಕ್ಕಳ ಕಡೆಗೆ ಗಮನ ಕೊಡುವುದರ ಜತೆಗೆ ಮಗುವಿನ ನೈತಿಕ ಮೌಲ್ಯಗಳ ಬಗ್ಗೆಯೂ ಗಮನ ಕೊಡಬೇಕೆಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಮಾತನಾಡಿ, ಧೂಮಪಾನ ಮದ್ಯಪಾನದಂತಹ ವ್ಯಸನಗಳು ಹದಿಹರೆಯದ ಮಕ್ಕಳ ಮೇಲೆ ಪರಿಣಾಮ ಬೀರಿ ಮಕ್ಕಳ ಮತ್ತು ಕುಟುಂಬದ ಬದುಕನ್ನು ನಾಶ ಮಾಡುತ್ತದೆ. ಆದ್ದರಿಂದ ಹದಿಹರೆಯದ ಮಕ್ಕಳು ಇಂತಹ ಮಾದಕ ವಸ್ತುಗಳಿಂದ ಜಾಗೃತರಾಗಿ ಇರಬೇಕೆಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಶಾ ಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.